ಅ.22ರ ನಂತರ ನಮ್ಮ ನಾಯಕ ಯಾರು ಅಂತಾ ಹೇಳ್ತೇನೆ- ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಅನರ್ಹ ಶಾಸಕ ಎಂಟಿಬಿ ನಾಗರಾಜ್…

ಬೆಂಗಳೂರು,ಅ,9,2019(www.justkannada.in):  ಸಿದ್ಧರಾಮಯ್ಯ ಈಗ ನಮ್ಮ ನಾಯಕ ಅಲ್ಲ. ಅಕ್ಟೋಬರ್ 22ರ ನಂತರ ನಮ್ಮ ನಾಯಕ ಯಾರು ಅಂತಾ ಹೇಳುತ್ತೇನೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ತಿಳಿಸಿದರು.

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪರನ್ನ ಭೇಟಿಯಾದ ಬಳಿಕ ಮಾಧ್ಯಮದ ಜತೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮಾತನಾಡಿದರು. ಮತ್ತೆ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಬೇಕು ಅಂತ ನೀವು ಬಯಸ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ವಿಪಕ್ಷ ನಾಯಕ ಆದ್ರು ನಮಗೆ ಸಂಬಂಧ ಇಲ್ಲ. ನಾವ್ ಕಾಂಗ್ರೆಸ್ ಪಕ್ಷ ಬಿಟ್ಟಿದ್ದೇವೆ. ಸಿದ್ದರಾಮಯ್ಯ ನಮ್ಮ ನಾಯಕ ಹಿಂದೆ ಆಗಿದ್ರು, ಈಗಲ್ಲ. ನಮ್ಮ ನಾಯಕ ಯಾರು ಅಂತ 22 ರ ನಂತರ ಹೇಳ್ತೇನೆ ಎಂದು ಸಿದ್ದರಾಮಯ್ಯ ಗೆ ಟಾಂಗ್ ಕೊಟ್ಟರು.

ಉಪಚುನಾವಣೆಯಲ್ಲಿ ತಮ್ಮ ವಿರುದ್ದ ಬಂಡಾಯ ಹೇಳಲು ಮುಂದಾಗಿರುವ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಚ್ಚೇಗೌಡರ ಮನೆಗೆ ಹೋಗಿ ಮನವೊಲಿಕೆ ಮಾಡ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂಟಿಬಿ ನಾಗರಾಜ್, ನಾನು ಅವರನ್ನ ಭೇಟಿ ಮಾಡಲ್ಲ. ಅವರು ಪಕ್ಷೇತರರಾಗಿ ಶರತ್ ಸ್ಪರ್ಧೆ ಮಾಡಿದ್ರೆ ಮಾಡ್ಲಿ ಎಂದು ಶರತ್ ಬಚ್ಚೆಗೌಡಗೆ ಸವಾಲು ಹಾಕಿದರು.

ಅವರನ್ನು ಸಮಾಧಾನ ಮಾಡೋಕೆ ಅವರ ಪಕ್ಷದ ನಾಯಕರಿದ್ದಾರೆ. ನಾನು ಯಾಕೆ ಅವರ ಮನೆಗೆ ಹೋಗಲಿ ? ನಾನು ಮೂರು ಬಾರಿ ಶಾಸಕನಾದವನು. ಜನರ ನಾಡಿಮಿಡಿತ ನನಗೆ ಚೆನ್ನಾಗಿ ಗೊತ್ತು. ಜನರ ಸೇವೆಗಾಗಿ ನಾನು ರಾಜಕೀಯಕ್ಕೆ ಬಂದವನು. ಚುನಾವಣೆ ಎದುರಿಸಲು ನಾನು ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದೇನೆ. ನಾನು ಸಾರ್ವಜನಿಕವಾಗಿ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಶರತ್ ಬಚ್ಚೇಗೌಡರು ಯಾವ ಪಕ್ಷದಿಂದಲೂ ನಿಂತುಕೊಳ್ಳಲಿ. ನಾನು ಎಲ್ಲದ್ದಕ್ಕೂ ಸಿದ್ದನಾಗಿದ್ದೇನೆ. ಗೆಲ್ಲುವ ವಿಶ್ವಾಸವಿದೆ, ಮತ್ತೊಮ್ಮೆ ನಾನು ಗೆಲ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿ.ಎಲ್ ಸಂತೋಷ್, ಕಟೀಲ್ ರನ್ನು ಮೂವರು ಶಾಸಕರು ಇತ್ತೀಚೆಗೆ ಭೇಟಿ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂಟಿಬಿ ನಾಗರಾಜ್, ಸಂತೋಷ ಅವ್ರನ್ನ ನಾನು ಭೇಟಿಯಾಗಿಲ್ಲ. ಯಾರು ಭೇಟಿ ಆದ್ರೋ ಅಂತ ಗೊತ್ತಿಲ್ಲ. ಅದನ್ನು ನಾನು ಮಾಧ್ಯಮದಲ್ಲಿ ನೋಡಿದ್ದೇನೆ ಎಂದರು.

ಹೊಕೋಟೆಯಲ್ಲಿ ನಿನ್ನೆ ಶಾಸಕ ಕೃಷ್ಣಬೈರೇಗೌಡ ಹೇಳಿಕೆ ವಿಚಾರ ಕುರಿತು ಮಾತನಾಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್,  ನಿನ್ನೆ ಕೃಷ್ಣಬೈರೇಗೌಡರು ಹೊಸಕೋಟೆಯಲ್ಲಿ ಎಂಟಿಬಿ 2 ಸಾವಿರ ಕೊಟ್ರೆ, ನಾವು 4 ಸಾವಿರ ಕೊಡ್ತಿವಿ ಅಂದಿದ್ದಾರೆ ಅಂತ ಯಾರೋ ನನ್ನ‌ ಬಳಿ‌ ಅಂದ್ರು. ಕೃಷ್ಣಬೈರೇಗೌಡ ರಿಗೆ ಬುದ್ಧಿಭ್ರಮಣೆ ಆಗಿದೆ. ಅಧಿಕಾರ ಕಳೆದುಕೊಂಡಿದ್ದಕ್ಕೆ ಬುದ್ಧಿಭ್ರಮಣೆ ಆಗಿದೆ. ನಾನು ರಾಜಕೀಯ ಜೀವನದಲ್ಲಿ ಎಲ್ಲೂ ಈ ರೀತಿ ಮಾತನಾಡಿಲ್ಲ. ನಾನು ಮಾತನಾಡಿರುವ ಬಗ್ಗೆ ಒಂದೇ ಒಂದು ದಾಖಲೆ ನೀಡಲಿ ಎಂದು ಕಿಡಿಕಾರಿದರು.

Key words: dis qualified MLA- MTB Nagaraj-Tong – former CM -Siddaramaiah …