‘ ಹಂಬಲ್ ಪೊಲೀಟಿಷಿಯನ್ ‘ ವಿ.ಸೋಮಣ್ಣ ಪಾಲಿಗೆ ಮುಂದಿನ ಮೂರು ವರ್ಷವೂ ಮೈಸೂರು ದಸರ ಉಸ್ತುವಾರಿ..

 

ಮೈಸೂರು, ಅ.09, 2019 : ವಿಶ್ವವಿಖ್ಯಾತ ಮೈಸೂರು ದಸರ ಮಹೋತ್ಸವ ಯಶಸ್ವಿಯಾಗಿ ನಿಭಾಯಿಸಿದ ಹಿನ್ನೆಲೆಯಲ್ಲಿ ಮುಂದಿನ ಮೂರು ವರ್ಷವೂ ಸಚಿವ ವಿ. ಸೋಮಣ್ಣ ಅವರೇ ಮೈಸೂರು ದಸರದ ಉಸ್ತುವಾರಿ ನಿರ್ವಹಿಸಲಿದ್ದಾರೆ.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ದಸರ ಮಹೋತ್ಸವ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಹೋತ್ಸವಕ್ಕೆ ಸಹಕರಿಸಿದ್ದವರಿಗೆ ಧನ್ಯವಾದ ಹೇಳಲು ಸಚಿವ ವಿ.ಸೋಮಣ್ಣ ಪತ್ರಿಕಾಗೋಷ್ಠಿ ಕರೆದಿದ್ದರು. ಈ ವೇಳೆ ಗೋಷ್ಠಿಯಲ್ಲಿ ಹಾಜರಿದ್ದ ಸಂಸದ ಪ್ರತಾಪ ಸಿಂಹ ಮಾತನಾಡಿ ಈ ವಿಷಯ ಸ್ಪಷ್ಟಪಡಿಸಿದರು.

ಇಂದು ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್ ನಿಂದ ಬೆಂಗಳೂರಿಗೆ ತೆರಳುವಾಗ ನಮ್ಮನ್ನ ಕರೆದು ಹೇ….. ಈ ಬಾರಿ ದಸರಾನಾ ಸೋಮಣ್ಣ ಚೆನ್ನಾಗಿ ಮಾಡಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸನಿಹಲ್ಲೇ ಇದ್ದ ಸಚಿವ ಸೋಮಣ್ಣ ಅವರನ್ನು ಕುರಿತು, ಮುಂದಿನ ಮೂರು ವರ್ಷವೂ ನೀನೆ ಮೈಸೂರು ದಸರಾ ಮಾಡು ಎಂದು ಮುಖ್ಯಮಂತ್ರಿಗಳು ಹೇಳಿದ್ದಾಗಿ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳಿಗೆ ತಿಳಿಸಿದರು.

ಇದಕ್ಕೆ ವಿನಮ್ರವಾಗಿಯೇ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಎಲ್ಲರ ಸಹಕಾರದಿಂದ ಹಾಗೂ ತಾಯಿ ಚಾಮುಂಡೇಶ್ವರಿಯ ಆರ್ಶೀವಾದದಿಂದ ದಸರ ಮಹೋತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಅವಕಾಶ ಕಲ್ಪಿಸಿಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದಗಳು. ದಸರ ಮಹೋತ್ಸವದ ವೇಳೆ ಸಣ್ಣ,ಪುಟ್ಟ ಲೋಪಗಳು ನಡೆದಿರುವುದು ನಿಜ. ಇದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಲಾಗುವುದು. ಮುಂಬರುವ ವರ್ಷಗಳಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ದೇಶದ ಇತರೆ ರಾಜ್ಯಗಳ ಸ್ತಬ್ಧ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಆ ಮೂಲಕ ದಸರೆಗೆ ಮತ್ತಷ್ಟು ಮೆರಗು ನೀಡಲಾಗುವುದು ಎಂದರು.

 

key words : dasara-mysore-somanna-incharge-minister-mysore