ಕನ್ನಡದಲ್ಲಿ ತೀರ್ಪು ನೀಡಲು ನಿರ್ದೇಶನ ನೀಡಿ: ಹೈಕೋರ್ಟ್ ಸಿ.ಜೆ ಅವರಿಗೆ ಹಕ್ಕೊತ್ತಾಯ..

ಬೆಂಗಳೂರು,ಫೆಬ್ರವರಿ,26,2021(www.justkannada.in):  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರ ನೇತೃತ್ವದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ ಒಕಾ ಹಾಗೂ ರಿಜಿಸ್ಟ್ರಾರ್ ಜನರಲ್ ಅವರನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಶ್ರೀನಿವಾಸ ಬಾಬುರವರ ಜೊತೆಗೆ ಭೇಟಿ ಮಾಡಿ ‘ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಅನುಷ್ಠಾನ’ ಮಾಡುವಂತೆ ಹಕ್ಕೊತ್ತಾಯದ ಮನವಿ ಪತ್ರವನ್ನು ಸಲ್ಲಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಮಾತನಾಡಿ, ರಾಜ್ಯದ ಎಲ್ಲ ಅಧೀನ ನ್ಯಾಯಲಯಗಳಲ್ಲಿ ವಕಾಲತ್ತು ಮತ್ತು ತೀರ್ಪುಗಳನ್ನು ಕನ್ನಡದಲ್ಲಿ ನೀಡುವಂತೆ ನಿರ್ದೇಶನ ನೀಡಬೇಕೆಂದು ಉಚ್ಚ ನ್ಯಾಯಾಲಯದ ಸಿಜೆ ಅವರಲ್ಲಿ ಮನವಿ ಮಾಡಿದರು.

ಕರ್ನಾಟಕ ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಪೀಠಾಧಿಕಾರಿಗಳು ತಮ್ಮ ನ್ಯಾಯಾಲಯಗಳ  ದೈನಂದಿನ ವ್ಯವಹಾರಗಳಲ್ಲಿ ವಿಶೇಷವಾಗಿ ತೀರ್ಪುಗಳು, ಆದೇಶಗಳು  ಜ್ಞಾಪನಾ ಪತ್ರಗಳು, ರಾಜ್ಯ ವ್ಯಾಪ್ತಿಯೊಳಗಿನ ಪತ್ರವ್ಯವಹಾರಗಳಲ್ಲಿ ಕನ್ನಡವನ್ನೇ ಸಂಪೂರ್ಣವಾಗಿ ಬಳಸುವಂತೆ ಕರ್ನಾಟಕದ ಉಚ್ಚನ್ಯಾಯಾಲಯದ ಸುತ್ತೋಲೆ  ಸಂಖ್ಯೆ:ಎಲ್.ಸಿ.ಎ-1/201/2002. ದಿನಾಂಕ:26-03-2003ರಲ್ಲಿ ಪತ್ರ ಬರೆಯಿದಾದರೂ ಅಧೀನ ನ್ಯಾಯಾಲಯಗಳಲ್ಲಿ ಇನ್ನೂ ಸಂಪೂರ್ಣವಾಗಿ ಕನ್ನಡೀಕರಣವಾಗಿಲ್ಲ. ಡಿಜಿಟಲ್ ತಂತ್ರಜ್ಞಾನಕ್ಕೆ ಬಂದ ಮೇಲೆ ಸಾಕಷ್ಟು ನಮೂನೆಗಳು ಇಂಗ್ಲಿಷ್ ನಲ್ಲಿಯೇ ಬರುವುದರಿಂದ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕೆಲಸವನ್ನು ಒಂದು ವಿಭಾಗ ಮಾಡುತ್ತಿದ್ದು, ಅದನ್ನು ತುರ್ತಾಗಿ ಮುಗಿಸುವುದಾಗಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಮಾನ್ಯ ಮುಖ್ಯ ನ್ಯಾಯಾಧೀಶರು ತಿಳಿಸಿರುವುದಾಗಿ ಮಾಹಿತಿ ಹಂಚಿಕೊಂಡರು.jk

ಕರ್ನಾಟಕದ ಅಧೀನ ನ್ಯಾಯಲಯಗಳಲ್ಲಿ ಸಾಕ್ಷಿಗಳನ್ನು ಕನ್ನಡದಲ್ಲಿ ಪಡೆದರೂ ಸಹ ತೀರ್ಪುಗಳು ಮತ್ತು ವಕಾಲತ್ತು ಇನ್ನೂ ಕನ್ನಡೀಕರಣವಾಗಬೇಕಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಮಾನ್ಯ ಮುಖ್ಯ ನ್ಯಾಯಾಧೀಶರೋಂದಿಗೆ ಚರ್ಚಿಸಿ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿರುವುದಾಗಿ ತಿಳಿಸಿದರು.

ಕರ್ನಾಟಕದಲ್ಲಿ ಕನ್ನಡವು ಆಡಳಿತ ಭಾಷೆಯಾಗಿ ಘೋಷಿತವಾಗಿ ಹಲವಾರು ವರ್ಷಗಳೇ ಆಗಿದೆ. ಆಡಳಿತದಲ್ಲಿ ಕನ್ನಡವನ್ನು ಕಟ್ಟುನಿಟ್ಟಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೆ ತರುವುದು ಸರ್ಕಾರದ ಆಶಯ ಹಾಗೂ ದಿಟ್ಟ ನಿಲುವು. ಜನರಾಡುವ ಭಾಷೆಯಲ್ಲಿ ಆಡಳಿತ ನಡೆಸಿದಾಗ ಜನರ ನೋವು-ನಲಿವುಗಳಗೆ ಸ್ಪಂದಿಸಲು ಸಾಧ್ಯ ಎನ್ನುವುದನ್ನು ಮನಗಂಡ ಸರ್ಕಾರ, ಹಲವಾರು ಆದೇಶ ಮತ್ತು ಸುತ್ತೋಲೆಗಳನ್ನು ಹೊರಡಿಸಿದೆ. ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆಗಳು ಮತ್ತು ಆದೇಶಗಳನ್ನು ಅನುಷ್ಠಾನಗೊಳಿಸುವಂತೆ ನ್ಯಾಯಾಲಯದ ಅಧಿಕಾರಿಗಳು ಹಾಗೂ ನ್ಯಾಯಾಧೀಶರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಯಿತು.

ಕರ್ನಾಟಕದ ಅಧೀನ ನ್ಯಾಯಾಲಯಗಳಲ್ಲಿ ರಾಜ್ಯ ಸರ್ಕಾರವು ಜಾರಿಗೆ ತಂದ ಕನ್ನಡದಲ್ಲಿರುವ ಸಮನ್ಸ್  ಹಾಗೂ ವಾರೆಂಟ್ ಹಾಗೂ ಇತರೆ 184 ನಮೂನೆಗಳಲ್ಲಿ ಕನ್ನಡ ಭಾಷೆಯಲ್ಲಿ ಇದ್ದಾಗ್ಯೂ ಆಂಗ್ಲಭಾಷೆಯಲ್ಲಿ ಬರೆಯುತ್ತಿರುವುದು ವಿಷಾದನೀಯ. ಬಹಳಷ್ಟು ನ್ಯಾಯಾಧೀಶರು, ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ತೀರ್ಪುಗಳನ್ನು ನೀಡುತ್ತಿದ್ದಾರೆ. ಕೆಲವರು ನ್ಯಾಯಮೂರ್ತಿಗಳು ಕನ್ನಡದಲ್ಲಿ ಅನುಷ್ಠಾನಗೊಳಿಸುವಲ್ಲಿ ವಿಮುಖ ನೀತಿ ಅನುಸರಿಸುತ್ತಿರುವುದು ನೋವನ್ನುಂಟು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು, ಕಕ್ಷಿದಾರನಿಗೆ ತನಗೆ ಅರ್ಥವಾಗುವ ಭಾಷೆಯಲ್ಲಿ ತೀರ್ಪುನೀಡಿದಾಗ ತನ್ನ ತಪ್ಪಿನ ಅರಿವಾಗುತ್ತದೆ ಮತ್ತು ನ್ಯಾಯಾಲಯದ ತೀರ್ಪಿನ ಬಗ್ಗೆ ಗೌರವ ದುಪ್ಪಟ್ಟಾಗುತ್ತದೆ ಎಂದರು.

ಅತಿ ಪುರಾತನವಾದ ಕನ್ನಡ ಭಾಷೆ ನಮ್ಮದು. ಈ ಹಿನ್ನೆಲೆಯಲ್ಲಿ ಎಲ್ಲಾ ಅಧೀನ ನ್ಯಾಯಾಲಯಗಳಲ್ಲಿ ದಿನನಿತ್ಯದ ವ್ಯವಹಾರ, ತೀರ್ಪುಗಳು, ಸಮನ್ಸ್‍ಗಳು, ವಾರೆಂಟ್‍ಗಳು, ಮುದ್ರೆಗಳು ಹಾಗೂ ತಂತ್ರಾಂಶದಲ್ಲಿ ಸಂಪೂರ್ಣವಾಗಿ ಕನ್ನಡವನ್ನು ಬಳಸಬೇಕೆಂಬುದು ಪ್ರಾಧಿಕಾರದ ಹಕ್ಕೊತ್ತಾಯವಾಗಿದೆ. ಜೊತೆಗೆ ಸರ್ಕಾರದ ನಿಲುವೂ ಕೂಡ ಆಗಿದ್ದು,  ಅಧೀನ ನ್ಯಾಯಾಲಯಗಳಲ್ಲಿ ತಂತ್ರಾಂಶವನ್ನು ಒಳಗೊಂಡಂತೆ ಪೂರ್ಣ ಪ್ರಮಾಣದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸುವಂತೆ ಮನವಿ ಮಾಡಿದರು.

ಬೆಂಗಳೂರಿನ ವಿವಿಧೆಡೆ ನಡೆದ ಅಭಿಯಾನ:

ಅಂಬೇಡ್ಕರ್ ವೀಧಿಯಲ್ಲಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ಮುಂಭಾಗ, ಕಾವೇರಿ ಭವನದ ಹಿಂಭಾಗದ ಕರ್ನಾಟಕ ಸಿವಿಲ್ ನ್ಯಾಯಲಯದ ಮುಂಭಾಗ, ನೃಪತುಂಗ ರಸ್ತೆಯಲ್ಲಿರುವ ಕರ್ನಾಟಕ ಕ್ರಿಮಿನಲ್ ನ್ಯಾಯಾಲಯದ ಮುಂಭಾಗ, ಎಂ.ಜಿ.ರಸ್ತೆಯಲ್ಲಿರುವ ಮೇಯೋಹಾಲ್ ನ್ಯಾಯಾಲಯದ ಮುಂಭಾಗ, ಸಿದ್ದಯ್ಯ ರಸ್ತೆಯಲ್ಲಿರುವ ಕೌಟುಂಬಿಕ ನ್ಯಾಯಾಲಯದ ಮುಂಭಾಗ ಹಾಗೂ ಎಲ್ಲ ಜಿಲ್ಲಾ ನ್ಯಾಯಾಲಯಗಳ ಮುಂಭಾಗದಲ್ಲಿ ಏಕಕಾಲದಲ್ಲಿ ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಅನುಷ್ಠಾನ ಕುರಿತಾಗಿ ಜಾಗೃತಿ ಅಭಿಯಾನವನ್ನು ನಡೆಸಲಾಯಿತು.direction-judge-kannada-high-court-cj-ts-nagabarana

ಆಯಾ ಜಿಲ್ಲೆಗಳಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರುಗಳು, ಕನ್ನಡ ಜಾಗೃತಿ ಸಮಿತಿ ಸದಸ್ಯರುಗಳ ಮುಂದಾಳತ್ವದಲ್ಲಿ ಅಭಿಯಾನ ನಡೆಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಅಭಿಯಾನದ ನೇತೃತ್ವ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ಪ್ರೊ.ಅಬ್ದುಲ್ ರೆಹಮಾನ್ ಪಾಷಾ,  ಡಾ.ಕೀಶೋರ್, ರೋಹಿತ್ ಚಕ್ರತೀರ್ಥ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು,  ಮಹಾನಗರ ಪಾಲಿಕೆ ಜಾಗೃತಿ ಸಮಿತಿ ಸದಸ್ಯರು, ಬೆಂಗಳೂರು ಮತಕ್ಷೇತ್ರ ಕನ್ನಡ ಜಾಗೃತಿ ಸಮಿತಿ ಸದಸ್ಯರು, ಕಾಯಕಪಡೆ ಸದಸ್ಯರುಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Key words: direction -judge – Kannada-High Court -CJ –TS Nagabarana