ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಮಗೆ ಸಿದ್ಧವಾದಾಗಲೇ ಪರೀಕ್ಷೆ ಬರೆಯುವ ಅವಕಾಶ ನೀಡುವ ಪ್ರಸ್ತಾವನೆ
ಬೆಂಗಳೂರು, ಆ.೩೧,೨೦೨೬ : ಹಳೆಯ ಸೆಮಿಸ್ಟರ್‌ಗಳಲ್ಲಿ ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ‘ಡಿಮ್ಯಾಂಡ್-ಬೇಸ್ಡ್ ರೀ-ಎಕ್ಸಾಮಿನೇಷನ್’ (Demand-Based Re-examination) ವ್ಯವಸ್ಥೆಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಜಾರಿಗೆ ತರುವ ಕುರಿತು ಚಿಂತನೆ ನಡೆಯುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್ ಅವರು ಹೇಳಿದಿಷ್ಟು..
ಪ್ರಸ್ತಾವಿತ ವ್ಯವಸ್ಥೆಯಡಿ, ವಿದ್ಯಾರ್ಥಿಗಳು ಸಾಮಾನ್ಯವಾಗಿ ನಿಗದಿಯಾಗಿರುವ ಮುಂದಿನ ಪರೀಕ್ಷೆಗಾಗಿ ತಿಂಗಳುಗಟ್ಟಲೆ ಕಾಯುವ ಬದಲು, ತಾವು ಅನುತ್ತೀರ್ಣರಾಗಿರುವ ವಿಷಯಕ್ಕೆ ಸಿದ್ಧರಾದ ಕೂಡಲೇ ಮರುಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ವಿದ್ಯಾರ್ಥಿಗಳಿಗೆ ಏನು ಅನುಕೂಲ?
ಪ್ರಸ್ತುತ ವ್ಯವಸ್ಥೆಯಲ್ಲಿ ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾದರೂ, ಮುಂದಿನ ನಿಗದಿತ ಪರೀಕ್ಷೆಯವರೆಗೆ ವಿದ್ಯಾರ್ಥಿಗಳು ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದರಿಂದ ಕೆಲವೊಮ್ಮೆ ಒಂದು ಸೆಮಿಸ್ಟರ್ ಅಥವಾ ಶೈಕ್ಷಣಿಕ ವರ್ಷದ ಪ್ರಗತಿಯ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಹೊಸ ಮಾದರಿ ಜಾರಿಯಾದರೆ, ವಿದ್ಯಾರ್ಥಿಯ ಕಲಿಕೆಯ ಸಿದ್ಧತೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಪರೀಕ್ಷೆ ಬರೆಯುವ ಅವಕಾಶ ದೊರೆಯಲಿದೆ. ಅಂದರೆ, ವಿದ್ಯಾರ್ಥಿಯು ಸ್ವಯಂ ಅಧ್ಯಯನದ ಮೂಲಕ ವಿಷಯವನ್ನು ಸಿದ್ಧಪಡಿಸಿಕೊಂಡಿದ್ದರೆ, ಮುಂದಿನ ಸಾಮಾನ್ಯ ಪರೀಕ್ಷಾ ವೇಳಾಪಟ್ಟಿಗಾಗಿ ಕಾಯದೆ ಮರುಪರೀಕ್ಷೆ ಬರೆಯುವ ಅವಕಾಶ ಸಿಗಬಹುದು.

NEP 2020 ಆಶಯಕ್ಕೆ ಅನುಗುಣ?
ರಾಷ್ಟ್ರೀಯ ಶಿಕ್ಷಣ ನೀತಿ–2020 ವಿದ್ಯಾರ್ಥಿ ಕೇಂದ್ರಿತ, ಹೊಂದಿಕೊಳ್ಳುವ ಹಾಗೂ ನಿರಂತರ ಕಲಿಕಾ ವ್ಯವಸ್ಥೆಗೆ ಒತ್ತು ನೀಡುತ್ತದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಕಲಿಕೆಯ ವೇಗಕ್ಕೆ ಅನುಗುಣವಾಗಿ ಶಿಕ್ಷಣ ಮುಂದುವರಿಸಲು ಹೆಚ್ಚಿನ ಅವಕಾಶ ಕಲ್ಪಿಸುವುದು ಇದರ ಪ್ರಮುಖ ಆಶಯಗಳಲ್ಲಿ ಒಂದಾಗಿದೆ.
ಈ ಹಿನ್ನೆಲೆಯಲ್ಲಿ, ಒಂದು ಅಥವಾ ಎರಡು ವಿಷಯಗಳಲ್ಲಿ ಮಾತ್ರ ಬಾಕಿ ಉಳಿದಿರುವ ಕಾರಣಕ್ಕೆ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಲು ಡಿಮ್ಯಾಂಡ್-ಬೇಸ್ಡ್ ಮರುಪರೀಕ್ಷೆ ವ್ಯವಸ್ಥೆ ಸಹಾಯಕವಾಗಬಹುದು ಎಂಬ ಅಭಿಪ್ರಾಯವಿದೆ.
ಶೈಕ್ಷಣಿಕ ವರ್ಷ ನಷ್ಟ ತಪ್ಪಿಸುವ ಗುರಿ
ಒಂದು ಅಥವಾ ಎರಡು ವಿಷಯಗಳ ಕಾರಣದಿಂದ ವಿದ್ಯಾರ್ಥಿಯು ಮುಂದಿನ ಹಂತಕ್ಕೆ ತೆರಳಲು ವಿಳಂಬವಾಗುವುದನ್ನು ತಪ್ಪಿಸುವುದು ಈ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿರಬಹುದು. ಮರುಪರೀಕ್ಷೆಗೆ ಹೆಚ್ಚಿನ ಅವಕಾಶಗಳು ದೊರೆತರೆ, ವಿದ್ಯಾರ್ಥಿಗಳು ಬಾಕಿ ವಿಷಯಗಳನ್ನು ವೇಗವಾಗಿ ಪೂರ್ಣಗೊಳಿಸಬಹುದು. ಒಂದು ಶೈಕ್ಷಣಿಕ ವರ್ಷ ನಷ್ಟವಾಗುವ ಸಾಧ್ಯತೆ ಕಡಿಮೆಯಾಗಬಹುದು. ಪರೀಕ್ಷೆಯ ಒತ್ತಡ ಕಡಿಮೆಯಾಗಬಹುದು. ಸ್ವಯಂ ಅಧ್ಯಯನಕ್ಕೆ ಉತ್ತೇಜನ ಸಿಗಬಹುದು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಗತಿಯನ್ನು ನಿರಂತರವಾಗಿ ಮುಂದುವರಿಸಬಹುದು.

ಯಾವ ರೀತಿಯಲ್ಲಿ ಜಾರಿಯಾಗಬಹುದು?
ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹೊಸ ಪರೀಕ್ಷಾ ವ್ಯವಸ್ಥೆಯಾಗಿ ರೂಪಿಸುವ ಬದಲು, ಈಗಿರುವ ವಿಶ್ವವಿದ್ಯಾಲಯದ ಪರೀಕ್ಷಾ ವ್ಯವಸ್ಥೆಯಲ್ಲೇ ಸೂಕ್ತ ನಿಯಮಗಳು ಮತ್ತು ಸುರಕ್ಷತಾ ಕ್ರಮಗಳೊಂದಿಗೆ ಜಾರಿಗೆ ತರಬಹುದೆಂಬ ಪ್ರಸ್ತಾವನೆಯಿದೆ.
Key words: VTU, Introduce, Demand-Based Re-Examination,

ENGLISH SUMMARY:
VTU May Introduce Demand-Based Re-Examination
Bengaluru: Visvesvaraya Technological University (VTU) may introduce a demand-based re-examination system for students who have failed in one or two courses in earlier semesters. Under the proposed system, students could appear for re-examinations whenever they are ready, instead of waiting for the next scheduled exam.

The initiative is aimed at promoting flexible, self-directed and continuous learning in line with the spirit of NEP 2020. The system could help student’s clear backlogs faster, avoid losing an academic year, reduce examination stress and continue their academic progression without unnecessary delays.






