ರೈತರಿಗೆ ಜಾಗೃತಿ, ಕೇಂದ್ರಕ್ಕೆ ಎಚ್ಚರಿಕೆ ನೀಡಲು ಡಿ. 23ರಂದು ರೈತ ಮಹಾ ಅಧಿವೇಶನ- ಕುರುಬೂರು ಶಾಂತಕುಮಾರ್.

ಮೈಸೂರು,ಡಿಸೆಂಬರ್,18,2023(www.justkannada.in): ರೈತರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಡಿಸೆಂಬರ್ 23ರಂದು ರೈತ ಮಹಾ ಅಧಿವೇಶನ ನಡೆಸಲಾಗುತ್ತದೆ ಎಂದು ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ  ಕುರುಬೂರು ಶಾಂತಕುಮಾರ್ ತಿಳಿಸಿದರು.

ನಗರದ ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಎಲ್ಲಾ ಸರ್ಕಾರಗಳು ರೈತರ ಮೇಲೆ ಗದಾಪ್ರಹಾರ ಮಾಡುತ್ತಿವೆ. ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹಲವು ಬೇಡಿಕೆಗಳನ್ನ ಇಟ್ಟುಕೊಂಡು ಪ್ರತಿಭಟನೆ ಮಾಡಿತ್ತು. ಆ ವೇಳೆ ಪ್ರಧಾನಿ ನರೇಂದ್ರ ಮೋದಿ ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಪ್ರತಿಭಟನೆ ಕೈಬಿಡಿ ಎಂದಿದ್ದರು. ಆದರೆ ಇಲ್ಲಿಯವರೆಗೆ ಸ್ವಾಮಿನಾಥನ್ ವರದಿ ಜಾರಿಗೆ ಮುಂದಾಗಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ರೈತರನ್ನ ಜಾಗೃತಿ ಮೂಡಿಸಲು ಕೇಂದ್ರಕ್ಕೆ ಎಚ್ಚರಿಕೆ ನೀಡಲು ರೈತ  ಅಧಿವೇಶನ ಆಯೋಜನೆ ಮಾಡಿದ್ದೇವೆ. ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕದಲ್ಲಿ ರೈತ ಅಧಿವೇಶನ ಹಮ್ಮಿಕೊಂಡಿದ್ದೇವೆ. ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ರೈತ ಮಹಾ ಅಧಿವೇಶನ ನಡೆಯುತ್ತಿದೆ. ವಿವಿಧ ರಾಜ್ಯದ ರೈತ ನಾಯಕರು, ರೈತರು ಅಧಿವೇಶನಕ್ಕೆ ಆಗಮಿಸುತ್ತಾರೆ ಎಂದು ತಿಳಿಸಿದರು.

ರೈತರ ಸಾಲದ ಮೇಲಿನ ಬಡ್ಡಿ ಮನ್ನಾ: ಸರ್ಕಾರದ ವಿರುದ್ದ ಕಿಡಿ.

ರೈತರ ಸಾಲದ ಮೇಲಿನ ಬಡ್ಡಿಮನ್ನಾ ಘೋಷಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ ಕುರುಬೂರು ಶಾಂತಕುಮಾರ್, ರೈತರಿಗೆ ಬ್ಯಾಂಕ್ ಗಳು ಬಡ್ಡಿ ರಹಿತ ಸಾಲ ನೀಡುತ್ತಿವೆ. ಈ ವೇಳೆ ಸರ್ಕಾರ ರೈತರ ಸಾಲದ ಮೇಲಿನ ಬಡ್ಡಿಮನ್ನಾ ಮಾಡಿದರೆ ಸಾಲದು. ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕ್ ಗಳ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಸರ್ಕಾರದಿಂದ 2ಸಾವಿರ ಪರಿಹಾರ ಘೋಷಣೆ ಕುರಿತು ಪ್ರತಿಕ್ರಿಯಿಸಿದ ಕುರುಬೂರು ಶಾಂತ ಕುಮಾರ್, ಸರ್ಕಾರ ರೈತರಿಗೆ ಏನು ಭಿಕ್ಷೆ ನೀಡುತ್ತಿದೆಯಾ. ರೈತರ ಕಣ್ಣಿಗೆ ಮಣ್ಣೇರಚುವ ಕೆಲಸ ಸರ್ಕಾರ ಮಾಡುತ್ತಿದೆ. ಎರಡು ಸಾವಿರ ಅವರು ಕೊಡೋದು ಬೇಡ. ನಮಗೆ ಗೊತ್ತಿದೆ ಪರಿಹಾರ ಹೇಗೆ ತೆಗೆದುಬೇಕು ಎಂಬುದು. ಎಕರೆಗೆ 25ಸಾವಿರ ಪರಿಹಾರ ಕೊಡಬೇಕು. ರೈತರಿಗೆ ಪರಿಹಾರ ಕೊಡಿಸುವಂತ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.

Key words: December-  23rd -Farmer’s Maha Session – Kuruburu Shanthakumar.