ಕಾಟೇರ… ಸೆಲೆಬ್ರೆಟಿ ರಿವಿವ್ಯೂ…!

 

ಬೆಂಗಳೂರು, ಡಿ.೨೯, ೨೦೨೩ : (w.w.w̤.justkannada̤.in news)

ಡಿ’ಬಾಸ್….. ಅಭಿಮಾನಿಗಳಿಂದ ಡಿ’ಬಾಸ್ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ದರ್ಶನ್ ಇಂದು ಬೆಳೆದಿರುವ ರೀತಿ ಊಹೆಗೂ ನಿಲುಕದ್ದು. ಅವರಿಗಿರುವ ಫ್ಯಾನ್ ಬೇಸ್ ಸಿಕ್ಕಾಪಟ್ಟೆ ದೊಡ್ಡದು. ಅಂತಹ ನಟನಿಗೆ ಕಥೆ ಬರೆಯುವುದೆಂದರೆ ನಿಜಕ್ಕೂ ಸವಾಲಿನ ವಿಷಯವೇ. ಏಕೆಂದರೆ ಮೊದಲಿಗೆ ಆ ನಟನ ಇಮೇಜಿಗೆ ತಕ್ಕಂತೆ ಸಿನಿಮಾದ ಕಥೆಯನ್ನು ಬರೆಯಬೇಕು. ಎರಡನೆಯದಾಗಿ ಆ ನಟನ ಅಭಿಮಾನಿಗಳಿಗೆ ಸಿನಿಮಾದ ಕಥೆ ಇಷ್ಟವಾಗಬೇಕು. ಇದರ ಜೊತೆಗೆ ಬಹಳ ಮುಖ್ಯವಾಗಿ ಆ ನಟನ ಅಭಿಮಾನಿಗಳಲ್ಲದ ಇತರೆ ಸಿನಿಮಾ ಪ್ರೇಮಿಗಳಿಗೂ ಆ ಸಿನಿಮಾದ ಕಥೆ ಇಷ್ಟವಾಗಬೇಕು. ಹಾಗಾಗಿ ದರ್ಶನ್‍ರಂತಹ ಮಾಸ್ ಇಮೇಜ್ ಉಳ್ಳ ನಟನಿಗೆ ಕಥೆ ಬರೆದು ಸಿನಿಮಾ ಮಾಡುವುದೆಂದರೆ ಬಹಳ ದೊಡ್ಡ ಸವಾಲಿನ ವಿಷಯ!

ಇದೇ ಕಾರಣಕ್ಕೆ ಈಗ ಬರುತ್ತಿರುವ ಅದೆಷ್ಟೋ ಕಮರ್ಷಿಯಲ್ ಸಿನಿಮಾಗಳು ಈ ಮೇಲೆ ಹೇಳಿದ ಒಂದು ವರ್ಗಕ್ಕೆ ಇಷ್ಟವಾದರೆ ಮತ್ತೊಂದು ವರ್ಗಕ್ಕೆ ಇಷ್ಟವಾಗಿರುವುದಿಲ್ಲ. ಹಾಗಾಗಿಯೇ ಸದಾ ಮಿಶ್ರ ಪ್ರತಿಕ್ರಿಯೆ ಸಿಗುತ್ತಿರುತ್ತದೆ. ಬೇಕಿದ್ದರೆ ಗಮನಿಸಿ ನೋಡಿ . ಕಥೆ ಅಷ್ಟೊಂದು ಗಟ್ಟಿ ಇಲ್ಲದ ಎಷ್ಟೋ ಸಿನಿಮಾಗಳಲ್ಲಿ ಹೀರೊನ ವಿಜೃಂಭಣೆಯಲ್ಲೇ ಸಿನಿಮಾದ ಡೈಲಾಗ್ ಗಳು ಮುಗಿದು ಹೋಗುತ್ತಿರುತ್ತವೆ. ಸಿನಿಮಾ ನಾಯಕನನ್ನು ಫೋಕಸ್ ಮಾಡುವ ವಿಷಯದಲ್ಲೇ ನಿರ್ದೇಶಕನ ಎನರ್ಜಿ ಖಾಲಿಯಾಗಿರುತ್ತದೆ. ಹೀಗಾಗಿಯೇ ಸಿಕ್ಕಾಪಟ್ಟೆ ದೊಡ್ಡ ಮಾಸ್ ಇಮೇಜ್ ಗಳಿಸಿದ ನಟರ ಸಿನಿಮಾಗಳಲ್ಲಿ ಗಟ್ಟಿಯಾದ ಮನಮುಟ್ಟುವ ಕಥೆಗಳನ್ನು ಬಯಸುವುದು ಕನಸಿನ ಮಾತೇ!

ಒಮ್ಮೆ……

 

ಒಮ್ಮೆ ಆ ನಟ “ತನಗೇನು ತನ್ನನ್ನೇ ಹೊಗಳುವ ಮಾಸ್ ಡೈಲಾಗ್ ಗಳು ಬೇಡ. 10 ನಿಮಿಷಕ್ಕೊಂದು ಫೈಟು ಬೇಡ. ಕಥೆ ಚೆನ್ನಾಗಿದ್ದರೆ ಸಾಕು, ಬರೀ ತಾನು ಆ ಕಥೆಯೊಳಗೊಂದು ಪಾತ್ರವಾಗುತ್ತೇನೆ, ತಾನು ಹೇಗೆ ಬಂದರೂ ಸರಿ. ಸಿನಿಮಾ ಚೆನ್ನಾಗಿ ಬಂದರೆ ಸಾಕು” ಅನ್ನುವ ಧೋರಣೆ ತಳೆದರೆ ಸಾಕು.

 

ಆಗ ಬರುವ ಸಿನಿಮಾ “ಕಾಟೇರ”!!

 

ಬೇಕಿದ್ದರೆ “ಕಾಟೇರ” ಸಿನಿಮಾ ನೋಡಿ ಹೊರಬರುತ್ತಿರುವ ಯಾವುದೇ ಡಿ’ಬಾಸ್ ಅಭಿಮಾನಿಯನ್ನು ಕೇಳಿ ನೋಡಿ. ಆತ “ಕಾಟೇರ” ಸಿನಿಮಾ ಬಗ್ಗೆ ಮಾತನಾಡುತ್ತಾನೆ, ದರ್ಶನ್ ಬಗ್ಗೆ ಅಲ್ಲ!! ಕಾಟೇರದಲ್ಲಿ ದರ್ಶನ್ ತನ್ನನ್ನು ತಾನು ತೊಡಗಿಸಿಕೊಂಡ ರೀತಿ ಅಂಥದ್ದು! ಇದು ದರ್ಶನ್ ಅಭಿಮಾನಿಗಳಿಗಾಗಿ ಅಷ್ಟೇ ಮಾಡಿದ ಸಿನಿಮಾ ಅಲ್ಲ. ಒಳ್ಳೆಯ ಕಥೆ ಇರುವ ಕಮರ್ಷಿಯಲ್ ಸಿನಿಮಾಗಳನ್ನು ಇಷ್ಟಪಡುವ ಎಲ್ಲಾ ಭಾಷೆಯ ಸಿನಿ ಪ್ರೇಮಿಗಳು ನೋಡಬೇಕಾದ ಸಿನಿಮಾ. ನಂಬಿಕೆ, ಮೂಡನಂಬಿಕೆ, ಶಾಂತಿ, ಕ್ರಾಂತಿ, ಸಮಾಧಾನ, ಶ್ರಮದಾನ, ಪ್ರೀತಿ, ಜಾತಿ, ನೀತಿ, ಸಾಕ್ಷರತೆ, ಅನಕ್ಷರತೆ,ಬಡವ, ಬಲ್ಲಿದ ಎಲ್ಲದರ ಬಗ್ಗೆಯೂ ಯಾವುದು ಕಡಿಮೆಯೂ ಆಗದಂತೆ ಯಾವುದು ಜಾಸ್ತಿಯೂ ಆಗದಂತೆ ರುಚಿಕಟ್ಟಾಗಿ ಮಾಡಿದ ಸಿನಿಮಾ. ಕತ್ತಲೆಯೊಳಗೆ ಮಾಡಿದ ಸಿನಿಮಾಗಳ ಮಧ್ಯೆ ಇತ್ತೀಚೆಗೆ ನಾವು ಮಿಸ್ ಮಾಡಿಕೊಳ್ಳುತ್ತಿದ್ದ ಕಥೆ, ಮಸಾಲೆ ಹದವಾಗಿ ಬೆರೆತ ಕಮರ್ಷಿಯಲ್ ಸಿನಿಮಾವೊಂದು ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿದೆ.

 

ರಾಬರ್ಟ್ ಸಿನಿಮಾ ಬಂದಾಗಲೇ ತರುಣ್ ಸುಧೀರ್ ಅವರ ಬಗ್ಗೆ ನಂಬಿಕೆ ಮೂಡಿತ್ತು. ದರ್ಶನ್ ಇಮೇಜ್ ಅನ್ನು ಸಮರ್ಥವಾಗಿ ಬಳಸಿಕೊಳ್ಳಬಲ್ಲ ನಿರ್ದೇಶಕ ಅಂತ ಅನ್ನಿಸಿತ್ತು. ಅದೇ ನಂಬಿಕೆಯನ್ನು ಇದೀಗ “ಕಾಟೇರ” ಸಿನಿಮಾದ ಮೂಲಕ ತರುಣ್ ಅವರು ದುಪ್ಪಟ್ಟು ಮಾಡಿಕೊಂಡಿದ್ದಾರೆ.  ದರ್ಶನ್‍ರಂತಹ ನಟನಿಗೆ ಒಳ್ಳೆಯ ನಿರ್ದೇಶಕ ಸಿಕ್ಕರೆ ಯಾವ ರೀತಿಯ ಸಿನಿಮಾಗಳು ಮೂಡಿ ಬರಬಹುದು ಅನ್ನುವುದಕ್ಕೆ “ಕಾಟೇರ” ಸಾಕ್ಷಿ. ಈ ಥರ ಸಿನಿಮಾ ಬಂದರೆ ಪ್ಯಾನ್ ಇಂಡಿಯಾ ಸಿನಿಮಾ ಅಂತ ಜನರು ಹೆಚ್ಚು ತಲೆಕೆಡಿಸಿಕೊಳ್ಳೋದಿಲ್ಲ. ಅವರಿಗೆ ಬೇಕಿರೋದು ಒಳ್ಳೆಯ ಸಿನಿಮಾ ಅನುಭವವಷ್ಟೇ ಹೊರತು ಅದು ಎಷ್ಟು ಹಣ ಮಾಡಿತು ಅನ್ನುವುದಲ್ಲ!

ಈ ಸಿನಿಮಾದ ಕಥೆಯನ್ನು ಹೇಳಿ ಥಿಯೇಟರಿನ ಅನುಭವವನ್ನು ಕಿತ್ತುಕೊಳ್ಳುವಂತಹ ಕ್ರೌರ್ಯ ಮತ್ತೊಂದಿರಲಾರದು. ಹಾಗಾಗಿ ಅದನ್ನು ಮಾಡಲಾರೆ. ಆದರೆ ತಾನು ಒಬ್ಬ ಅಷ್ಟು ದೊಡ್ಡ ನಟನಾಗಿಯೂ ಅವರು ಹೇಳಬೇಕಾದ ಕೆಲ ವಿಷಯಗಳನ್ನು ಧೈರ್ಯವಾಗಿ ಹೇಳಿರುವುದಕ್ಕೆ ದರ್ಶನ್ ಅವರಿಗೆ ದೊಡ್ಡ ಸಲಾಂ. ಸಿನಿಮಾ ಇರುವುದೇ ಅಂತಹ ವಿಷಯಗಳನ್ನು ಹೇಳುವುದಕ್ಕೆ. ಆದರೆ ದರ್ಶನ್ ರಂತಹ ಮಾಸ್ ಇಮೇಜ್ ಉಳ್ಳ ನಟ ಆ ವಿಷಯಗಳನ್ನು ಹೇಳಿದಾಗ ಅವಕ್ಕೊಂದು ಅರ್ಥ, ಬೆಲೆ ಸಿಗುತ್ತದೆ. ಸಿನಿಮಾ ತಂಡ ತನ್ನ ಪ್ರಮೋಷನ್‌ಗಳಲ್ಲಿ ಯಾಕೆ ಅಷ್ಟೊಂದು ಆತ್ಮವಿಶ್ವಾಸದಿಂದಿತ್ತು ಅನ್ನುವುದು ಸಿನಿಮಾ ನೋಡುವಾಗ ತೆಗೆದುಕೊಂಡ ಸಬ್ಜೆಕ್ಟ್ ಮತ್ತು ಮೂಡಿ ಬಂದ ರೀತಿಯನ್ನು ತೋರಿಸುತ್ತಿತ್ತು.

 

ಸಿನಿಮಾದಲ್ಲಿ ಫೈಟುಗಳಿವೆ. ಆದರೆ ಉಳಿದ ಸಿನಿಮಾಗಳಲ್ಲಿ ಇದ್ದಂತಿಲ್ಲ. ಸನ್ನಿವೇಶಕ್ಕೆ ತಕ್ಕಂತೆ ಹೊಸ ರೀತಿಯಲ್ಲಿ ಮೂಡಿಬಂದಿವೆ. ಆ ಫೈಟುಗಳನ್ನು ನೋಡುವಾಗಲೇ ಗೊತ್ತಾಗುತ್ತದೆ ಅವು ಎಷ್ಟೊಂದು ಚಾಲೆಂಜಿಂಗ್ ಆಗಿದ್ದವು ಅಂತ. ಇವು ದರ್ಶನ್ ಅಭಿಮಾನಿಗಳಿಗೆ ಹಬ್ಬದೂಟ! ಹಾಡುಗಳ ವಿಷಯಕ್ಕೆ ಬಂದರೆ ವೈಯಕ್ತಿಕವಾಗಿ ಎರಡು ಹಾಡುಗಳಷ್ಟೇ ಇಷ್ಟವಾದವು. ಆದರೆ ವಿ ಹರಿಕೃಷ್ಣಅವರ ಹಿನ್ನೆಲೆ ಸಂಗೀತ ಮಸ್ತ್.

 

ಜಡೇಶ್ ಅವರ ಕಥೆಯೇ ಸಿನಿಮಾದ ಬೆಸ್ಟ್ ಫೌಂಡೇಶನ್. ಮುಂದುವರೆದರೆ ಸಿನಿಮಾ ನೋಡುವಾಗ ಪ್ರತಿಸಲ ಚಪ್ಪಾಳೆ ಗಿಟ್ಟಿಸಿಕೊಳ್ಳುವುದೆಂದರೆ ಅದು ಸಂಭಾಷಣೆಕಾರ ಮಾಸ್ತಿ! ಕಥೆಯೇ ನಾಯಕನಾಗಿರುವ ಈ ಸಿನಿಮಾದಲ್ಲಿ ಎರಡನೆಯ ನಾಯಕನೆಂದರೆ ಅದು ಸಂಭಾಷಣೆಯೇ! ನಾಯಕನನ್ನು ವಿಜೃಂಭಿಸದ ಡೈಲಾಗು ಬರೆಯುತ್ತಲೇ ಸನ್ನಿವೇಶಕ್ಕೆ ತಕ್ಕಂತೆ ಪಂಚ್ ಡೈಲಾಗುಗಳು ಪ್ರೇಕ್ಷಕನ ಶಿಳ್ಳೆ ಗಿಟ್ಟಿಸುತ್ತವೆ. ಸಿನಿಮಾದಲ್ಲಿ ಫೈಟು ಇಲ್ಲದಿದ್ದಾಗಲೆಲ್ಲ ನಿಜವಾಗಿ “ಪಂಚ್” ಕೊಡುವುದು ಮಾಸ್ತಿ ಅವರ ಡೈಲಾಗುಗಳೇ ಮತ್ತೊಮ್ಮೆ ಮಾಸ್ತಿ (ನಮ್ಮ ಮನಸ್ಸು) ಗೆದ್ದಿದ್ದಾರೆ!

 

ನಟಿ ಮಾಲಾಶ್ರೀ ಮಗಳು ಆರಾಧನಾ ಅವರು ಚೆನ್ನಾಗಿ ನಟಿಸಿದ್ದಾರೆ. ದರ್ಶನ್ ಸಿನಿಮಾದಿಂದಲೇ ಅವರಿಗೆ ಸಿನಿಮಾ ರಂಗಕ್ಕೆ ಎಂಟ್ರಿ ಸಿಕ್ಕಿದ್ದು ನಿಜವಾಗಿಯೂ ಪ್ಲಸ್ ಪಾಯಿಂಟ್. ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಹಳೆಯ ಕಲಾವಿದರಿದ್ದಾರೆ. ಮೊದಮೊದಲು ಇಷ್ಟೊಂದು ಜನರಿದ್ದಾರಾ ಅನ್ನಿಸಿದರೂ ಒಂದೊಂದು ಹಂತದಲ್ಲಿ ಒಂದೊಂದು ಪಾತ್ರಕ್ಕೆ ಕೊಟ್ಟಿರುವ ತೂಕ ಕಡೆಗೆ ಬರುವಷ್ಟರಲ್ಲಿ ಯಾರನ್ನು ಕಡೆಗಣಿಸದೆ ಎಲ್ಲರೂ ಪ್ರಮುಖರು ಅನ್ನಿಸಿಕೊಳ್ಳುತ್ತಾರೆ. ಅದು ಕುಮಾರ್ ಗೋವಿಂದ್, ಶ್ರುತಿ, ವಿನೋದ್ ಆಳ್ವಾ ಯಾರ ಪಾತ್ರವೇ ಆಗಿರಬಹುದು. ಹಿರಿಯ ನಟ ಬಿರಾದಾರ್ ಪಾತ್ರವಂತೂ ಶುರುವಿನಿಂದ ಕಡೆಯವರೆಗೆ ಪ್ರತಿ ಹಂತದಲ್ಲಿ ಮೇಲಕ್ಕೆ ಹೋಗುತ್ತಲೇ ಸಾಗುತ್ತದೆ. ಸಿನಿಮಾದ ಅವಧಿ ಮೂರು ಗಂಟೆಗಿಂತಲೂ ಜಾಸ್ತಿ ಇದ್ದರೂ ಒಂದು ಕ್ಷಣವೂ ಬೋರೆನಿಸುವುದಿಲ್ಲ. ಅದೇ ಈ ಸಿನಿಮಾದ ಬೆಸ್ಟ್ ಪಾರ್ಟ್.

ಸಿನಿಮಾದ ಕ್ಲೈಮ್ಯಾಕ್ಸ್ ಕೂಡ ಅಷ್ಟೇ. ರಕ್ತಸಿಕ್ತ ಅನ್ನುವ ರೀತಿಯಲ್ಲಿ ಮುಗಿಸಬಹುದಾದ ಕಥೆಯನ್ನು ತರುಣ್ ಅವರು ಬೇರೆಯದೇ ರೀತಿಯಲ್ಲಿ ಮುಗಿಸಿ ಒಳ್ಳೆಯ ಅಂತ್ಯ ಕೊಟ್ಟಿದ್ದಾರೆ. ಒಟ್ಟಿನಲ್ಲಿ ದರ್ಶನ್ ಅಭಿಮಾನಿಗಳಿಗೆ ಅನ್ನುವುದಕ್ಕಿಂತ ಹೆಚ್ಚಾಗಿ ಹಳೆಯ ವರ್ಷ ಮುಗಿಯುತ್ತಿರುವಾಗ, ಹೊಸ ವರ್ಷ ಬರುತ್ತಿರುವಾಗ, ವರ್ಷದ ಕಡೆಯ ವಾರದಲ್ಲಿ  ಸಿದ್ಧಸೂತ್ರಗಳನ್ನು ಬದಿಗೊತ್ತಿ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಒಂದು ಮನರಂಜನೆಯ, ಒಳ್ಳೆಯ ಕಥೆಯ, ಸಂಭ್ರಮಿಸಿ ಖುಷಿಪಡುತ್ತಾ ನೋಡುವ ಒಳ್ಲೆಯ ಸಿನಿಮಾವೊಂದು ಸಿಕ್ಕಿದೆ.  ಸಂಭ್ರಮಿಸೋಣ!

ಥ್ಯಾಂಕ್ಯೂ “ಕಾಟೇರ” ಟೀಮ್!!

( ಕೃಪೆ : Santhoshkumar Lm)

key words : darshan-tugudeepa̤-kannada-film-kateera-bangalore