ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತಷ್ಟು ಪಾರಂಪರಿಕ ಸ್ಪರ್ಶ ಕೊಡಲು ಮುಂದಾದ ಪಾಲಿಕೆ: ಸುಂದರ ಸ್ವಾಗತ ಕಮಾನು ನಿರ್ಮಾಣಕ್ಕೆ ಚಿಂತನೆ…

ಮೈಸೂರು,ಜೂ,30,2019(www.justkannada.in): ನಗರದ ನಾಲ್ಕು ಪ್ರಮುಖ ರಸ್ತೆಗಳಿಗೆ ಸುಂದರ ಸ್ವಾಗತ ಕಮಾನು ನಿರ್ಮಾಣ ಮಾಡುವ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತಷ್ಟು ಪಾರಂಪರಿಕ ಸ್ಪರ್ಶ ಕೊಡಲು ಮೈಸೂರು ನಗರ ಪಾಲಿಕೆ ಮುಂದಾಗಿದೆ.

ನಗರದ ಮೈಸೂರು- ಬೆಂಗಳೂರು ಹೆದ್ದಾರಿಯ ಕೆ.ಆರ್.ಮಿಲ್ ಸಮೀಪ, ಹುಣಸೂರು ರಸ್ತೆಯ ಹೂಟಗಳ್ಳಿ ಬಳಿ, ನಂಜನಗೂಡು ರಸ್ತೆಯ ರಿಂಗ್ ರೋಡ್ ಜಂಕ್ಷನ್ ಹಾಗೂ ಬನ್ನೂರು ರಸ್ತೆಯ ದೇವೇಗೌಡ ಸರ್ಕಲ್ ಬಳಿ ಸುಂದರ ಸ್ವಾಗತ ಕಮಾನು ನಿರ್ಮಿಸಲು ಪಾಲಿಕೆ ಚಿಂತನೆ ನಡೆಸಿದೆ.

ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಹಾಗೂ ಪ್ರವಾಸಿ ತಾಣಗಳನ್ನ‌ ಬಿಂಬಿಸುವ ಉದ್ದೇಶದಿಂದ ಈ ಪ್ಲಾನ್ ಮಾಡಿದ್ದು, ಈಗಾಗಲೇ ಪಾರಂಪರಿಕ ಇಲಾಖೆಯ ಅಭಿಪ್ರಾಯ ಹಾಗೂ ಸಲಹೆಗಾಗಿ ಮಹಾನಗರ ಪಾಲಿಕೆ ಕಾಯುತ್ತಿದೆ.ಪಾರಂಪರಿಕ ಇಲಾಖೆ ಅನುಮತಿ ಬಂದ ನಂತರ ಕಮಾನು ಅವಳಡಿಸಲು ಪಾಲಿಕೆ ತಯಾರಿ ನಡೆಸಲಿದ್ದು  ಒಂದು ಕಮಾನು ನಿರ್ಮಾಣಕ್ಕೆ 15 ಲಕ್ಷದಂತೆ ನಾಲ್ಕು ಕಮಾನು ನಿರ್ಮಾಣಕ್ಕೆ 60 ಲಕ್ಷ ಮೀಸಲಿಟ್ಟಿದೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕಮಾನು ನಿರ್ಮಾಣ ಮಾಡಲು ಪಾಲಿಕೆ ಮುಂದಾಗಿದೆ.

ಈ ಕಮಾನುಗಳು ನಿರ್ಮಾಣಕ್ಕೆ ಪಾರಂಪರಿಕ ಇಲಾಖೆ ಅನುಮತಿ ಕೊಟ್ಟರೆ ಎರಡನೆ ಹಂತಕ್ಕೂ ಪಾಲಿಕೆ ಸಿದ್ದವಾಗಿದ್ದು, ಎರಡನೇ ಹಂತದಲ್ಲಿ ಕೆ.ಆರ್ ಎಸ್ ರಸ್ತೆ, ಬೋಗಾದಿ ರಸ್ತೆ , ಎಚ್.ಡಿ.ಕೋಟೆ ರಸ್ತೆ ಹಾಗೂ ತಿ.ನರಸೀಪುರ ರಸ್ತೆಯಲ್ಲಿ ಸುಂದರ ಸ್ವಾಗತ ಕಮಾನು ನಿರ್ಮಾಣಕ್ಕೆ ಚಿಂತನೆ ನಡೆಸಿದೆ.

Key words: Cultural City -Mysore more- heritage- touches-beautiful -welcome – Arch