ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಸಿಟಿ ರವಿ, ಚಕ್ರವರ್ತಿ ಸೂಲಿಬೆಲೆ ವಿರುದ್ದ ದೂರು ದಾಖಲಿಸಿ ಬಂಧಿಸಿ- ದಲಿತ ಸಂಘರ್ಷ ಸಮಿತಿ ಆಗ್ರಹ.

ಮೈಸೂರು,ಜುಲೈ,13,2023(www.justkannada.in):  ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಬಿಜೆಪಿ ನಾಯಕ ಸಿಟಿ ರವಿ ಮತ್ತು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸರ್ಕಾರ ಸ್ವಯಂ ಪ್ರೇರಿತ ದೂರು ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಸೋಸಲೆ ಶಶಿಕಾಂತ್ ಆಗ್ರಹಿಸಿದರು.

ಟಿ.ನರಸೀಪುರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಸಲೆ ಶಶಿಕಾಂತ್, ಹನುಮ ಜಯಂತಿ ಆಚರಣೆ ದಿನ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಮರುದಿನ ವೇಣುಗೋಪಾಲ್ ಹತ್ಯೆಯಾಗಿದೆ. ಇದನ್ನ ನಾವು ಖಂಡಿಸುತ್ತೇವೆ.  ಮೂರು ದಿನಗಳ ಹಿಂದೆ ವೇಣುಗೋಪಾಲ್ ಎಂಬ ಯುವಕನ ಕೊಲೆಯಾಗಿದೆ. ಈ ಕೊಲೆಯನ್ನ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ವೈಯಕ್ತಿಕ ದ್ವೇಷದಿಂದ ಮತ್ತು ಸ್ವಪ್ರತಿಷ್ಠೆಯಿಂದ ಈ ಘಟನೆ ನಡೆದಿದೆ. ಈ ವಿಚಾರವಾಗಿ ತಾಲೂಕಿಗೆ ಭೇಟಿ ನೀಡಿದ ಚಕ್ರವರ್ತಿ ಸೂಲಿಬೆಲೆ ,ಸಿಟಿ ರವಿ, ಅಶ್ವತ್ ನಾರಾಯಣ್, ಎನ್ ಮಹೇಶ್ ರವರುಗಳು ಈ ಕೊಲೆಯನ್ನು ಇದು ಕಾರ್ಯಕರ್ತನ ಕೊಲೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಯುವಕರಲ್ಲಿ ವಿಷ ಬೀಜ ಬಿತ್ತಲು ಮುಂದಾಗಿದ್ದಾರೆ. ಮುಂಬರುವ ಲೋಕಸಭಾ  ಚುನಾವಣೆಯಲ್ಲಿ ಧರ್ಮಾದರಿತ ಬೆಂಬಲ ಪಡೆಯಲು ಮಾಡುತ್ತಿರುವ ವ್ಯವಸ್ಥಿತ ಪಿತೂರಿ ಎಂದು ಕಿಡಿಕಾರಿದರು.

ಕೊಲೆಯಾದ ವ್ಯಕ್ತಿ ಹಿಂದೂ  ಕೊಲೆ ಮಾಡಿರುವ ವ್ಯಕ್ತಿಗಳು ಹಿಂದೂ. ಚಕ್ರವರ್ತಿ ಸೂಲಿಬೆಲೆ ಮತ್ತು ಸಿಟಿ ರವಿ ಅವರು ತಾಲೂಕಿನಲ್ಲಿ ಸಾಮರಸ್ಯ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಸಿಟಿ ರವಿ ಮತ್ತು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸರ್ಕಾರ ಸ್ವಯಂ ಪ್ರೇರಿತ ದೂರು ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಆರೋಪಿಗಳ ಇರುವ ವ್ಯಕ್ತಿಗಳು ಚುನಾವಣಾ ಸಂದರ್ಭದಲ್ಲಿ ಹೆಚ್ ಸಿ ಮಹದೇವಪ್ಪ ಪರ ಪ್ರಚಾರ ಮಾಡಿರುತ್ತಾರೆ. ಆ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ಚಕ್ರವರ್ತಿ ಸೂಲಿಬೆಲೆ ರವರು ಟ್ವೀಟ್ ಮಾಡಿ ಸುನಿಲ್ ಬೋಸ್ ರವರ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುನಿಲ್ ಬೋಸ್ ಕಾಂಗ್ರೆಸ್ ಪಕ್ಷದಿಂದ  ಚುನಾವಣೆಗೆ ನಿಲ್ಲಬೇಕೆಂದು ಯುವಕರು ಹೇಳುತ್ತಿದ್ದಾರೆ. ಇದನ್ನು ಅರಿತಿರುವ ಬಿಜೆಪಿ ನಾಯಕರು ಸುನಿಲ್ ಬೋಸ್ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಹನುಮ ಜಯಂತಿಗೆ ಅನುಮತಿ ನೀಡಿದ್ದರಿಂದ ಈ ರೀತಿ ಸಮಸ್ಯೆ ಸೃಷ್ಟಿಯಾಗಿದೆ. ನಮ್ಮ ದೇಶಕ್ಕೆ ಹನುಮ ಜಯಂತಿಯ ಅವಶ್ಯಕತೆ ಇಲ್ಲ. ನೂರಾರು ವರ್ಷಗಳಿಂದ ಧಾರ್ಮಿಕ ಜಾತ್ರೆಗಳು ನಡೆಯುತ್ತಿರುವುದರಿಂದ ಹೊಸದಾಗಿ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಹನುಮ ಜಯಂತಿಗೆ ಅನುಮತಿ ನೀಡಬಾರದು. ಬಿಜೆಪಿಯ ನಾಯಕರಿಗೆ ತಾಲ್ಲೂಕು ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕು ಎಂದು ಸೋಸಲೆ ಶಶಿಕಾಂತ್ ಒತ್ತಾಯಿಸಿದರು.

ವೇಣುಗೋಪಾಲ್ ಕೊಲೆ ಘೋರ ಖಂಡನೀಯ. ವೇಣುಗೋಪಾಲ್ ನ ಕುಟುಂಬಸ್ಥರಿಗೆ ದುಃಖ ಬರಿಸುವ ಶಕ್ತಿ ನೀಡಲಿ. ತಪ್ಪಿಸ್ಥರು ಯಾರೇ ಆಗಲಿ ಅವರಿಗೆ ಶಿಕ್ಷೆ ಆಗಬೇಕು. ಆ ಕುಟುಂಬಕ್ಕೆ ಸರ್ಕಾರ ಆರ್ಥಿಕ ಸಹಕಾರ ನೀಡಬೇಕು ಎಂದು ಸೋಸಲೆ ಶಶಿಕಾಂತ್ ಆಗ್ರಹಿಸಿದರು.

Key words: CT  Ravi -Chakravorty Sulibele – arrest – Dalit Sangharsh Committee- demand.