Friday, August 28, 2026

BDA Apartments

Home Front Page ಮುಲಾಜಿಲ್ಲದೆ CRPF ನೇಮಕಾತಿಯ ಮರು ಪರೀಕ್ಷೆ ನಡೆಸಿ: ಕನ್ನಡ ಸೇರಿ ಎಲ್ಲಾ ಭಾಷೆಗಳಿಗೂ ಅವಕಾಶ ನೀಡಿ-ಮಾಜಿ...

ಮುಲಾಜಿಲ್ಲದೆ CRPF ನೇಮಕಾತಿಯ ಮರು ಪರೀಕ್ಷೆ ನಡೆಸಿ: ಕನ್ನಡ ಸೇರಿ ಎಲ್ಲಾ ಭಾಷೆಗಳಿಗೂ ಅವಕಾಶ ನೀಡಿ-ಮಾಜಿ ಸಿಎಂ ಹೆಚ್.ಡಿಕೆ ಒತ್ತಾಯ.

ಬೆಂಗಳೂರು,ಏಪ್ರಿಲ್,10,2023(www.justkannada.in):  ಮುಲಾಜಿಲ್ಲದೆ ಸಿಆರ್ ಪಿಎಫ್ ನೇಮಕಾತಿಯ ಮರು ಪರೀಕ್ಷೆ ನಡೆಸಬೇಕು ಹಾಗೂ ಕನ್ನಡ ಸೇರಿ ದೇಶದ ಎಲ್ಲ ಭಾಷೆಗಳಲ್ಲೂ ಬರೆಯಲು ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಇಲ್ಲವಾದರೆ, ಈ ತಾರತಮ್ಯ ಹಾಗೂ ಹಿಂದಿ ಹೇರಿಕೆ ಇನ್ನೊಂದು ದೊಡ್ಡ ಹೋರಾಟಕ್ಕೆ ನಾಂದಿ ಆದೀತು ಎಂದು ಕೇಂದ್ರ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

CRPF ನೇಮಕಾತಿಯಲ್ಲಿ ಪ್ರಾದೇಶಿಕ ಭಾಷೆಗಳನ್ನ ಕಡೆಗಣಿಸಿ ಕೇವಲ ಇಂಗ್ಲೀಷ್  ಮತ್ತು ಹಿಂದಿ ಭಾಷೆಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ‍್ಧ ಕಿಡಿಕಾರಿ ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ,  ಕೇಂದ್ರ  ಬಿಜೆಪಿ  ಸರಕಾರ ಮತ್ತೆ ಕನ್ನಡಿಗರಿಗೆ ಉಂಡೆನಾಮ ಹಾಕಿದೆ. ಭಾನುವಾರ ನಡೆದ ಕೇಂದ್ರೀಯ ಮೀಸಲು ಪಡೆ (ಸಿಆರ್‌ಪಿಎಫ್‌) ನೇಮಕದ ಕಂಪ್ಯೂಟರ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವನ್ನೇ ಕೊಟ್ಟಿಲ್ಲ. ಹಿಂದಿ, ಇಂಗ್ಲಿಷ್ ಭಾಷೆಯಲ್ಲಷ್ಟೇ ಪರೀಕ್ಷೆಗೆ ಅವಕಾಶ ಕೊಡಲಾಗಿದೆ. ಇದು ಖಂಡನೀಯ ಎಂದು ವಾಗ್ದಾಳಿ ನಡೆಸಿದ್ದಾರೆ.

9212 ಹುದ್ದೆಗಳಿಗೆ ಈ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಕರ್ನಾಟಕದ 466 ಹುದ್ದೆಗಳೂ ಸೇರಿವೆ. ದುರಂತವೆಂದರೆ, ಇಷ್ಟು ಹುದ್ದೆಗಳನ್ನು ಬಯಸುವ ಅಭ್ಯರ್ಥಿಗಳು ಹಿಂದಿ,ಇಂಗ್ಲಿಷ್ ನಲ್ಲಿ ಪರೀಕ್ಷೆ ಬರೆದಿದ್ದಾರೆ, ಬರೆಯುವ ಅನಿವಾರ್ಯ ಸೃಷ್ಟಿಸಲಾಗಿದೆ. ಮಾತೃಭಾಷೆಯಲ್ಲಿ ಬರೆಯುವುದನ್ನು ನಿರಾಕರಿಸುವುದು ಎಂದರೆ ಸಂವಿಧಾನಕ್ಕೆ ಎಸಗಿದ ಅಪಚಾರ.

ಕೇಂದ್ರ ಸರಕಾರ ತನ್ನ ಸುಪರ್ದಿಯಲ್ಲಿ ನಡೆಸುವ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷಿನಲ್ಲೇ ನಡೆಸುತ್ತಿದೆ. ಕೇವಲ ಹಿಂದಿ ಕೇಂದ್ರಿತ ನೇಮಕಾತಿ ಪ್ರಕ್ರಿಯೆ ಇತರೆ ಭಾಷಿಕರನ್ನು ಉದ್ಯೋಗ ವಂಚಿತರನ್ನಾಗಿಸುವುದು ಮಾತ್ರವಲ್ಲ, ಅನ್ಯಭಾಷೆಗಳನ್ನು ಹತ್ತಿಕ್ಕಿ ಹಿಂದಿ ಹೇರಿಕೆ ಮಾಡುವುದಷ್ಟೇ ದುರುದ್ದೇಶ. ಇದು ಸ್ಪಷ್ಟ ಎಂದು ಹೆಚ್.ಡಿಕೆ ಆರೋಪಿಸಿದ್ದಾರೆ.

 

ಅಷ್ಟೇ ಅಲ್ಲ, ಈ ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳು ಹಿಂದಿ ಭಾಷೆಗೆ ಸಂಬಂಧಿಸಿದವು. ಅಲ್ಲಿಗೆ ಸ್ಪಷ್ಟ; ಹಿಂದಿಯೇತರ ಅಭ್ಯರ್ಥಿಗಳು ಈ ನೇಮಕಾತಿಯಲ್ಲಿ ಆಯ್ಕೆ ಆಗಲೇಬಾರದು ಹಾಗೂ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಲಾಗಿದೆ. ಒಕ್ಕೂಟ ವ್ಯವಸ್ಥೆಗೆ ಇದು ಕೇಂದ್ರವೇ ಕೊಟ್ಟ ಮಾರಣಾಂತಿಕ ಪೆಟ್ಟು ಎಂದು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ತಮ್ಮ ರಾಜ್ಯಗಳಲ್ಲಿ ಉದ್ಯೋಗ ಪಡೆಯಲು ಅನ್ಯಭಾಷೆಯಲ್ಲಿ ಪರೀಕ್ಷೆ ಬರೆಯಬೇಕಾದ ಕರ್ಮ ದಕ್ಷಿಣ ಭಾರತ ರಾಜ್ಯಗಳ ಜನರದ್ದು. ಕನ್ನಡಿಗರೂ ಸೇರಿ ದಕ್ಷಿಣದ ಎಲ್ಲ ಭಾಷಿಕರು ಈ ಬಗ್ಗೆ ವಿರೋಧ ಮಾಡುತ್ತಲೇ ಇದ್ದರೂ ಕೇಂದ್ರ ಸರಕಾರ ಹಿಂದಿ ಹೇರಿಕೆಯನ್ನು ಮುಂದುವರಿಸಿದೆ. ಮುಲಾಜಿಲ್ಲದೆ ಸಿಆರ್ ಪಿಎಫ್ ನೇಮಕಾತಿಯ ಮರು ಪರೀಕ್ಷೆ ನಡೆಸಬೇಕು ಹಾಗೂ ಕನ್ನಡ ಸೇರಿ ದೇಶದ ಎಲ್ಲ ಭಾಷೆಗಳಲ್ಲೂ ಬರೆಯಲು ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಇಲ್ಲವಾದರೆ, ಈ ತಾರತಮ್ಯ ಹಾಗೂ ಹಿಂದಿ ಹೇರಿಕೆ ಇನ್ನೊಂದು ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Key words: CRPF Recruitment -Re-Exam  Allow – Kannada-former CM -H.D Kumaraswamy