ಅಮೂಲ್ ಜೊತೆ ಕೆಎಂಎಫ್ ವಿಲೀನಕ್ಕೆ ಪಿತೂರಿ: ಇದು ಅಪಾಯಕಾರಿ ಬೆಳವಣಿಗೆ – ಮೈಮೂಲ್ ನಿರ್ದೇಶಕ ಚೆಲುವರಾಜ್.

ಮೈಸೂರು,ಏಪ್ರಿಲ್,10,2023(www.justkannada.in): ಅಮೂಲ್ ಜೊತೆ ಕೆಎಂಎಫ್ ವಿಲೀನ ಮಾಡುವ ಪಿತೂರಿ ರಾಜ್ಯದಲ್ಲಿ ನಡೆಯುತ್ತಿದೆ. ಇದು ದೊಡ್ಡ ಅಪಾಯಕಾರಿ ಬೆಳವಣಿಗೆ ಎಂದು ಮೈಮೂಲ್ ನಿರ್ದೇಶಕ ಚೆಲುವರಾಜ್  ಆತಂಕ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಲುವರಾಜ್, ರಾಜ್ಯದಲ್ಲಿ ಕ್ರಮೇಣ ಹಾಲಿನ ಉತ್ಪಾದನೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಗುಜರಾತಿನಲ್ಲಿ ಹೈನುಗಾರಿಕೆ ಅನ್ನೊದು ಒಂದು ದೊಡ್ಡ ಉದ್ಯಮವಾಗಿದೆ. ನಮ್ಮಲ್ಲಿ ಬಡ ರೈತ, ಬಡ ಮಹಿಳೆ ಉದ್ಯೋಗವಿಲ್ಲದೆ ಜನ ಜೀವನ ನಿರ್ವಹಣೆಗೆ ಅನಿವಾರ್ಯವಾಗಿ ಮಾಡುವಂತ ಒಂದು ಕೆಲಸವಾಗಿದೆ. ಕಳೆದ ನಾಲ್ಕೈದು  ವರ್ಷಗಳಿಂದ ಹಾಲಿನ ಉತ್ಪಾದನೆ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಯಾಕೆಂದರೆ ರಾಜ್ಯದಲ್ಲಿ ಹೈನುಗಾರಿಕೆಗೆ ಸರ್ಕಾರ ಕೊಡುವ ದರ ಬಹಳ ಕಡಿಮೆ ಇದೆ. ಗುಜರಾತಿನಲ್ಲಿ ಪ್ರತಿ ಲೀಟರ್ ಗೆ 48 ರಿಂದ 50 ರೂ ದರ ನಿಗದಿಯಾಗಿದೆ. ರಾಜ್ಯದಲ್ಲಿ ಕೇವಲ 31 ರಿಂದ 32 ರೂ ಕೊಡುತ್ತಿದ್ದಾರೆ. ಈ ದರ ಕಳೆದ ನಾಲ್ಕೈದು ವರ್ಷಗಳಿಂದಲೂ ಇದೆ.  ದರ ಪರಿಷ್ಕರಣೆ ಆಗಿಲ್ಲ ಎಂದರು.

ಹೈನುಗಾರಿಕೆ ಮಾಡುವ ರೈತರಿಗೆ ಬೇಕಾದ ಅವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ, ಹಾಲಿನ ದರ ಮಾತ್ರ ಅಷ್ಟೇ ಇದೆ. ಇದರಿಂದ ರೈತರು ತುಂಬಾ ನಷ್ಟದಲ್ಲಿದ್ದಾರೆ. ಮುಂದೊಂದು ದಿನ ಕೆಎಂಎಫ್ ನ ಅಮೂಲ್ ಜೊತೆ ವಿಲೀನ ಮಾಡುವ ಪರಿಸ್ಥಿತಿ ಬಂದರೂ ಬರಬಹುದು. ನಮ್ಮ ರಾಜ್ಯದ ಲಕ್ಷಾಂತರ ಹೈನುಗಾರಿಕೆ ನಂಬಿ ಬದುಕು ನಡೆಸುವ ಬಡ ಜನ ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗುತ್ತದೆ. ಯಾವುದೇ ಕಾರಣಕ್ಕೂ ಇಂತಹ ಬೆಳವಣಿಗಗಳು ಆಗಬಾರದು ಇದನ್ನ  ರಾಜ್ಯದ ಜನ ಖಂಡಿಸಬೇಕು. ರಾಜ್ಯದ ಅಸ್ಮಿತೆಯಾದ ನಂದಿನಿ ಹಾಲಿನ ಒಕ್ಕೂಟಗಳನ್ನ ಉಳಿಸಲು ಹೋರಾಟವನ್ನ ಮಾಡಬೇಕಾಗುತ್ತದೆ ಎಂದು ಮೈಮೂಲ್ ನಿರ್ದೇಶಕ ಚೆಲುವರಾಜು  ತಿಳಿಸಿದರು.

Key words: Conspiracy – merge -KMF – Amul-dangerous –development-Cheluvaraj