ಕೋವಿಡ್ ನಿಯಮ: ಚಿತ್ರಮಂದಿರಗಳಲ್ಲಿ ಸೀಟುಗಳ ನಿಯಮ ಪಾಲನೆಯಿಂದಾಗಿ ಇನ್ನೂ ಮುಚ್ಚಿರುವ ಚಿತ್ರಮಂದಿರಗಳು.

ಬೆಂಗಳೂರು, ಆಗಸ್ಟ್ 11, 2021  (www.justkannada.in): ಕನ್ನಡ ಚಲನಚಿತ್ರ ಪ್ರೇಮಿಗಳು ತಮ್ಮ ನೆಚ್ಚಿನ ಹೀರೊಗಳ ಹೊಸ ಚಿತ್ರಗಳನ್ನು ಚಿತ್ರಮಂದಿರದಲ್ಲಿ ವೀಕ್ಷಿಸಲು ಇನ್ನೂ ಕೆಲವು ದಿನಗಳವರೆಗೆ ಕಾಯಬೇಕಾಗಬಹುದು. ರಾಜ್ಯದಾದ್ಯಂತ ಏಕ-ಪರದೆ ಚಿತ್ರಮಂದಿರಗಳು ಇನ್ನೂ ಆರಂಭವಾಗಬೇಕಿದ್ದು, ಪ್ರಸ್ತುತ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿರುವ ಶೇ.೫೦ ಸೀಟು ಭರ್ತಿ ನಿಯಮದ ಅನುಮತಿಯೊಂದಿಗೆ ಮಾಲೀಕರು ಚಿತ್ರಮಂದಿರಗಳನ್ನು ಆರಂಭಿಸುವ ಆಲೋಚನೆಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (ಕೆಎಫ್‌ಸಿಸಿ) ಒಂದು ನಿಯೋಗವು ಬುಧವಾರ, ಅಂದರೆ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಸಾಧ್ಯವಾದಷ್ಟು ಬೇಗ ಶೇ.೧೦೦ ಸೀಟುಗಳೊಂದಿಗೆ ಚಿತ್ರಮಂದಿರಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಕೋರಲಿದೆ.

ರಾಜ್ಯ ಸರ್ಕಾರವು ಜುಲೈ ೧೯ರಿಂದ ಶೇ.೫೦ ಸೀಟುಗಳೊಂದಿಗೆ ಮತ್ತು ಕಡ್ಡಾಯ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಪಾಲನೆಯೊಂದಿಗೆ ಚಿತ್ರಮಂದಿರಗಳನ್ನು ಆರಂಭಿಸಲು ಅನುಮತಿಸಿತ್ತು. ರಾಜ್ಯದಲ್ಲಿ ಸುಮಾರು ೬೦೦ ಏಕ-ಪರದೆ ಚಿತ್ರಮಂದಿರಗಳಿದ್ದು, ಈ ಪೈಕಿ ಬಹುತೇಕ ಚಿತ್ರಮಂದಿರಗಳು ಬಿಡುಗಡೆಗೆ ತಯಾರಾಗಿರುವ ಸಾಕಷ್ಟು ಹೊಸ ಚಿತ್ರಗಳಿಲ್ಲ ಎಂಬ ಕಾರಣದಿಂದಾಗಿ ಇನ್ನೂ ಮುಚ್ಚಿವೆ.

“ಶೇ.೧೦೦ರಷ್ಟು ಪ್ರೇಕ್ಷಕರೊಂದಿಗೆ ಚಿತ್ರಮಂದಿರಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡುವವರೆಗೂ ನಾವು ಚಿತ್ರಮಂದಿರಗಳನ್ನು ಪುನರಾರಂಭಿಸುವುದಿಲ್ಲ. ಕೇವಲ ಶೇ.೫೦ರಷ್ಟು ಸೀಟು ಸಾಮರ್ಥ್ಯದೊಂದಿಗೆ ಆರಂಭಿಸಿದರೆ ವಿತರಕರು ಹಾಗೂ ಚಿತ್ರಮಂದಿರದ ಮಾಲೀಕರಿಗೆ ನಷ್ಟವಾಗುತ್ತದೆ,” ಎನ್ನುತ್ತಾರೆ ಕರ್ನಾಟಕ ಫಿಲಂ ಎಕ್ಸಿಬಿರ್ಸ್  ಫೆಡರೇಷನ್‌ ನ ಅಧ್ಯಕ್ಷ ಆರ್. ಆರ. ಓಡುಗೌಡರ್.

ಚಲನಚಿತ್ರ ನಿರ್ಮಾಪಕರೂ ಸಹ ಸಾಧ್ಯವಾದಷ್ಟು ಬೇಗ ಸರ್ಕಾರ ಈ ನಿಯಮವನ್ನು ಸಡಿಲಗೊಳಿಸುವುದನ್ನೇ ಎದುರು ನೋಡುತ್ತಿದ್ದಾರೆ. ಕೋಟಿಗೊಬ್ಬ-೩, ಸಲಗ, ಜೇಮ್ಸ್, ಸಖತ್ ಮತ್ತು ಲಂಕೆಯಂತಹ ದೊಡ್ಡ ಬಜೆಟ್ ಚಿತ್ರಗಳು ಬಿಡುಗಡೆಗಾಗಿ ಕಾಯುತ್ತಿವೆ. ಆದರೆ, ಈ ಚಿತ್ರಗಳ ನಿರ್ಮಾಪಕರು ಈ ನಿಯಮ ಸಡಿಲಕೆ ಆಗದೆ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ.

ಸ್ಯಾಂಡಲ್‌ ವುಡ್‌ನ ನಿರ್ಮಾಪಕ ಸೂರಪ್ಪ ಬಾಬು ಅವರು ಈ ಕುರಿತು ಮಾತನಾಡುತ್ತಾ, ಸರ್ಕಾರ ಶೇ.೧೦೦ ಸೀಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳಿಗೆ ಕಾರ್ಯನಿರ್ವಹಿಸಲು ಅನುಮತಿಸಿದರೆ ಮುಂದಿನ ವಾರ ಕೋಟಿಗೊಬ್ಬ-೩ ಚಿತ್ರವನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಂಡಿದ್ದೇವೆ ಎಂದರು.

“ಕೋವಿಡ್ ಮಹಾಮಾರಿ ೩ನೇ ಅಲೆ ಪ್ರೇಕ್ಷಕರಿಗೆ ಅಡ್ಡಿಯಾಗಿದೆ,” ಎನ್ನುವುದು ಮುಕುಂದಾ ಚಿತ್ರಮಂದಿರದ ಮಾಲೀಕರಾದ ವೆಂಕಟೇಶ್ವರ ರೆಡ್ಡಿ ಅವರ ಅಭಿಪ್ರಾಯ.

ಈ ನಡುವೆ, ಕೆಎಫ್‌ಸಿಸಿ ಅಧ್ಯಕ್ಷ ಡಿ.ಆರ್. ಜೈರಾಜ್ ಅವರು ಕನ್ನಡ ಚಲನಚಿತ್ರ ಉದ್ಯಮದ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಳಿಗೆ ನಿಯೋಗವೊಂದನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ. “ನಾವು ವಿಎಟಿ ಸಮಸ್ಯೆ ಮೇಲೆ ಗಮನಕೇಂದ್ರೀಕರಿಸಿದ್ದೇವೆ. ಜೊತೆಗೆ ಚಿತ್ರಮಂದಿರಗಳಲ್ಲಿ ಶೇ.೧೦೦ ಸೀಟು ಸಾಮರ್ಥ್ಯದೊಂದಿಗೆ ಆರಂಭಗೊಳಿಸಲು ಅನುಮತಿ ನೀಡುವ ವಿಷಯವನ್ನೂ ಚರ್ಚಿಸುತ್ತೇವೆ. ವಾಣಿಜ್ಯ ತೆರಿಗೆ ಇಲಾಖೆಯು, ೧೦ ವರ್ಷ ಹಿಂದೆ ನಡೆಸಿರುವ ವಹಿವಾಟಿನ ಮೇಲೆ ೫% ವಿಎಟಿಯನ್ನು ಪಾವತಿಸುವಂತೆ ಕನ್ನಡ ಚಲನಚಿತ್ರ ನಿರ್ಮಾಪಕರಿಗೆ ನೋಟಿಸ್‌ ಗಳನ್ನು ನೀಡಿದೆ. ಆದರೆ ಕೆಲವು ನಿರ್ಮಾಪಕರು ಈಗಾಗಲೇ ನಿಧನರಾಗಿದ್ದಾರೆ ಮತ್ತು ಇನ್ನೂ ಕೆಲವರು ವಿಎಟಿ ಪಾವತಿಸು ಸ್ಥಿತಿಯಲಿಲ್ಲ,” ಎಂದು ವಿವರಿಸಿದರು.

ಸುದ್ದಿ ಮೂಲ: ಬೆಂಗಳೂರು ಮಿರರ್

Key words: Covid rule-Cinema-still- closed -Movie theater