ಮೈಸೂರು,ನವೆಂಬರ್,12,2026 (www.justkannada.in): ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಾಣಗೊಂಡಿರುವ COSMOS–Mysuru Planetarium ಉದ್ಘಾಟನೆಗೆ ಸಜ್ಜಾಗಿದ್ದು, ಮೈಸೂರು ಮಾತ್ರವಲ್ಲದೆ ಕರ್ನಾಟಕದ ವಿಜ್ಞಾನ ಮತ್ತು ಖಗೋಳ ಶಿಕ್ಷಣಕ್ಕೆ ಹೊಸ ಆಯಾಮ ನೀಡಲಿದೆ.
ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಿರ್ಮಾಣವಾಗಿರುವ ಈ ಯೋಜನೆಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸೇರಿದಂತೆ ವಿವಿಧ ಮೂಲಗಳಿಂದ ಅನುದಾನ ದೊರೆತಿದೆ. 2022ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.
ಪ್ಲಾನೆಟೋರಿಯಂನ ಪ್ರಮುಖ ಆಕರ್ಷಣೆ 15 ಮೀಟರ್ ವ್ಯಾಸದ LED Dome Sky Theatre. ಸುಮಾರು 42.7 ಮಿಲಿಯನ್ ಪಿಕ್ಸೆಲ್‌ಗಳ 8K ಮಟ್ಟದ ದೃಶ್ಯ ಗುಣಮಟ್ಟ, 160° ವೀಕ್ಷಣಾ ಕೋನ ಹಾಗೂ 6,148 LED ಪ್ಯಾನೆಲ್ ಗಳ ಮೂಲಕ ಪ್ರೇಕ್ಷಕರಿಗೆ ಬಾಹ್ಯಾಕಾಶದೊಳಗೆ ಸಂಚರಿಸುವ ಅನುಭವ ನೀಡಲಿದೆ.
‘Our Home, Our Cosmos’ ಎಂಬ 12 ನಿಮಿಷಗಳ ವಿಶೇಷ ಕಾರ್ಯಕ್ರಮದಲ್ಲಿ ಮೈಸೂರಿನ ಇತಿಹಾಸ, ಸಂಸ್ಕೃತಿ ಮತ್ತು ಖಗೋಳ ವಿಜ್ಞಾನದ ಸಂಬಂಧವನ್ನು ಪರಿಚಯಿಸಲಾಗುತ್ತದೆ. Cosmos Odyssey ಹಾಗೂ Voyager ಸೇರಿದಂತೆ ವಿವಿಧ ಖಗೋಳ ಪ್ರದರ್ಶನಗಳು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಾಗಲಿವೆ.
ಇದಲ್ಲದೆ ಎರಡು ಪ್ರದರ್ಶನ ಸಭಾಂಗಣಗಳು, ಸಂವಾದಾತ್ಮಕ ಖಗೋಳ ಮಾದರಿಗಳು, ತರಬೇತಿ ಕೇಂದ್ರ, ಕಂಪ್ಯೂಟರ್ ಲ್ಯಾಬ್, ಮ್ಯೂಸಿಯಂ, ಹೊರಾಂಗಣ ಪ್ರದರ್ಶನ ಪ್ರದೇಶ ಹಾಗೂ ಆಂಫಿಥಿಯೇಟರ್ ಕೂಡ ಇಲ್ಲಿ ಇರಲಿವೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನ ಕಾರ್ಯಾಗಾರಗಳು, ಶಿಕ್ಷಕರ ತರಬೇತಿ, ಗ್ರಾಮೀಣ ಶಾಲೆಗಳಿಗಾಗಿ ವಿಶೇಷ ಕಾರ್ಯಕ್ರಮಗಳು, ಸೂರ್ಯ ವೀಕ್ಷಣೆ ಮತ್ತು ರಾತ್ರಿ ಆಕಾಶ ವೀಕ್ಷಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ.
ಒಟ್ಟಾರೆ, COSMOS–Mysuru ಮೈಸೂರಿನ ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆಯಾಗುವುದರ ಜೊತೆಗೆ, ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಜ್ಞಾನ ಹಾಗೂ STEM ಶಿಕ್ಷಣದ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ.






