ಮೈಸೂರು,ಮಾ,14,2020(www.justkannada.in): ಮಾರಕ ಕೋರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಜ್ಯಾದ್ಯಂತ ಒಂದು ವಾರಗಳ ಕಾಲ ಮಾಲ್ ಗಳು ಸಿನಿಮಾ ಥಿಯೇಟರ್ ಗಳು, ಮದುವೆ ಸಭೆ ಸಮಾರಂಭಗಳನ್ನ ರದ್ದು ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಈ ಮಧ್ಯೆ ಕೊರೋನಾ ವೈರಸ್ ಭೀತಿ ಸಾಂಸ್ಕೃತಿಕ ನಗರಿ ಮೈಸೂರಿಗೆ ತಟ್ಟಿದೆ. ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು ಸಬರ್ಬ್ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಸಗುಡುತ್ತಿದೆ. ಬೆಳಿಗ್ಗೆಯಿಂದಲೂ ಚಾಲಕ ನಿರ್ವಾಹಕರು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿರವ ದೃಶ್ಯ ಕಂಡು ಬರುತ್ತಿದೆ.
ಮೈಸೂರಿನ ಸಬರ್ಬ್ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ಕೇವಲ ಎರಡು ಬಸ್ ಹೊರಟಿದ್ದು ಎರಡು ಬಸ್ ನಲ್ಲೂ ಹತ್ತರಿಂದ 15 ಮಂದಿ ಮಾತ್ರ ಪ್ರಯಾಣ ಮಾಡುತ್ತಿದ್ದಾರೆ. ಪ್ರಯಾಣಿಕರಿಗೆ ಕೆ ಎಸ್ ಆರ್ ಟಿ ಸಿ ,ಐರಾವತ ಸೇರಿದಂತೆ ಇತರೆ ಬಸ್ ಗಳು ಕಾದು ನಿಂತಿದ್ದು ಇಷ್ಟು ದಿನ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಸಬರ್ಬ್ ಬಸ್ ಸ್ಟ್ಯಾಂಡ್ ಇಂದು ಬಣಗುಡುತ್ತಿದೆ.
ಇನ್ನೂ ರಾಜ್ಯ ಸರ್ಕಾರ ಒಂದು ವಾರಗಳ ಕಾಲ ಕಾಲೇಜುಗಳಿಗೆ ರಜೆ ಘೋಷಣೆ ಹಿನ್ನಲೆ ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದು, ಚಾಮರಾಜನಗರ ಮಂಡ್ಯ ಸೇರಿದಂತೆ ಇತರೆ ಭಾಗದ ಬಸ್ ಗಳತ್ತ ವಿದ್ಯಾರ್ಥಿಗಳು ಮುಖಮಾಡಿದ್ದಾರೆ.
Key words: corona virus- suburban-bus -stop – Mysore.






