ಬೆಂಗಳೂರು, ಸೆಪ್ಟೆಂಬರ್ ,30,2026 (www.justkannada.in): ಬಾಕಿ ಹಣ ಬಿಡುಗಡೆಗೆ ಕೋರಿ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ರಾಜ್ಯ ಗುತ್ತಿಗೆದಾರರ ಸಂಘ ಬೆನ್ನಲ್ಲೆ ಇದೀಗ ಸರ್ಕಾರಕ್ಕೊಂದು ವಾರ್ನಿಂಗ್ ನೀಡಿದೆ.
ನವೆಂಬರ್ ಒಳಗೆ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಕಮಿಷನ್ ದಂಧೆಯ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ರಾಜ್ಯ ಗುತ್ತಿಗೆದಾರರ ಸಂಘ ಖಡಕ್ ಎಚ್ಚರಿಕೆ ನೀಡಿದೆ. ಈ ಕುರಿತು ಮಾತನಾಡಿರುವ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್, ನಮ್ಮ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದ್ದಾರೆ. ನಾವು ಕೆಲಸ ಮಾಡಿರುವ ಹಣವನ್ನು ಮೊದಲು ಕೊಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಕಳೆದ ಸರ್ಕಾರಕ್ಕಿಂತಲೂ ಕಮಿಷನ್ ಜಾಸ್ತಿ ಇದ್ದು, ಅದು ಎಷ್ಟು ಪರ್ಸೆಂಟೇಜ್ ಅಂತ ಕೇಳಬೇಡಿ. ಇತ್ತೀಚಿಗೆ ಎಂಎಲ್‌ಎಗಳು ಕೂಡ ಕಾಂಟ್ರ್ಯಾಕ್ಟ್ ವಿಚಾರದಲ್ಲಿ ತಲೆತೂರಿಸುತ್ತಿದ್ದಾರೆ. ಇದರಿಂದ ನಿಜವಾದ ಕಾಂಟ್ರ್ಯಾಕ್ಟರ್ ಗಳು ಮಾಯ ಆಗುತ್ತಿದ್ದಾರೆ. 4 ವರ್ಷದಿಂದ ಹಣ ಬಾರದೆ 1.5 ಲಕ್ಷ ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಕೆಂಪಣ್ಣರನ್ನು ಬಳಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಆದರೆ ಸಿದ್ದರಾಮಯ್ಯ 3 ವರ್ಷ ಸಿಎಂ ಆಗಿ ನಮಗೆ ಯಾವುದೇ ನೆರವು ನೀಡಿಲ್ಲ. ನಂತರ ಡಿ.ಕೆ.ಶಿವಕುಮಾರ್ ಪ್ರತಿಭಟನಾ ಸ್ಥಳಕ್ಕೆ ಬಂದು ಭರವಸೆ ನೀಡಿದ್ದರು. ಬಳಿಕ ಡಿಕೆ ಶಿವಕುಮಾರ್ ಅಧಿಕಾರಕ್ಕೆ ಬಂದರು. ಅವರನ್ನು ಗುತ್ತಿಗೆದಾರರು ಭೇಟಿಯಾದಾಗ ಜೂನ್ 30ಕ್ಕೆ ಹಣ ಬಿಡುಗಡೆ ಮಾಡ್ತೇವೆ ಎಂದಿದ್ದರು. ಸುಮಾರು 8 ಇಲಾಖೆಯಲ್ಲಿ ಸರಿಸುಮಾರು 38 ಸಾವಿರ ಕೋಟಿ ಹಣ ಬಾಕಿ ಇದೆ ಎಂದು ಮಂಜುನಾಥ್ ತಿಳಿಸಿದ್ದಾರೆ.






