ದಾಖಲೆಗಳನ್ನು ಮುರಿದ ಯುವ ಕವಿಯತ್ರಿಯಿಂದ ಮುಂದುವರೆದ ಪ್ರಯತ್ನ.

ಬೆಂಗಳೂರು, ಆಗಸ್ಟ್ 23, 2021 (www.justkannada.in): ಕೋವಿಡ್ ಸಾಂಕ್ರಾಮಿಕ ಜಗತ್ತನ್ನು ಆವರಿಸಿ ಎಲ್ಲಾ ಕಡೆ ಭಯವನ್ನು ಸೃಷ್ಟಿಸಿದ ಸಮಯದಲ್ಲಿ, ೮ನೇ ತರಗತಿಯಲ್ಲಿ ಓದುತ್ತಿರುವ ಬೆಂಗಳೂರು ನಗರದ ಓರ್ವ ವಿದ್ಯಾರ್ಥಿನಿ ತನ್ನ ಬೇಜಾರನ್ನು ಕಳೆಯಲು ಪದ್ಯಗಳನ್ನು ಬರೆಯಲು ನಿರ್ಧರಿಸಿದಳು. ಬೆಂಗಳೂರು ನಗರದ ಬಿಷಪ್ ಕಾಟನ್ ಬಾಲಕಿಯರ ಶಾಲೆಯ ವಿದ್ಯಾರ್ಥಿನಿ ಅಮನ ತನ್ನ ಈ ಪ್ರಯತ್ನದಿಂದಾಗಿ ಇಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾಳೆ.

ಅಮನ, ಒಟ್ಟು 61 ಪದ್ಯಗಳನ್ನು ರಚಿಸಿದ್ದು, ಅವುಗಳು ಸಪ್ನಾ ಬುಕ್ ಹೌಸ್ (ಪ್ರೈ.) ಲಿ. ೨೦೨೦ರ ನವೆಂಬರ್‌ನಲ್ಲಿ ಪ್ರಕಟಿಸಿದ ‘ಎಕೊಸ್ ಆಫ್ ಸೋಲ್‌ ಫುಲ್ ಪಾಯೆಮ್ಸ್’ ಎಂಬ ಪುಸ್ತಕದಲ್ಲಿ ಪ್ರಕಟವಾಗಿವೆ. ಈಗ ಆಕೆ ಕೇವಲ ೧೨ ವರ್ಷ, ೫ ತಿಂಗಳು ಹಾಗೂ ೧೦ ದಿನಗಳ ಬಾಲಕಿ.

ಈವರೆಗೆ ಈಕೆ ಒಟ್ಟು ೨೭೫ ಪದ್ಯಗಳನ್ನು ಬರೆದಿದ್ದು ಇದರ ಪೈಕಿ ಬಹುತೇಕ ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿವೆ. ಆಕೆಯ ಎರಡನೆ ಪುಸ್ತಕ ಪ್ರಕಟವಾಗುವ ಪ್ರಕ್ರಿಯೆಯಲ್ಲಿದೆ. ಆಕೆಯ ಅನೇಕ ಪದ್ಯಗಳು ವಿವಿಧ ಸುದ್ದಿಪತ್ರಿಕೆಗಳು ಹಾಗೂ ವೆಬ್‌ಸೈಟ್‌ಗಳಲ್ಲಿಯೂ ಪ್ರಕಟವಾಗಿವೆಯಂತೆ.

ಅಮನಳ ಮೊದಲ ಪದ್ಯ ಕೋವಿಡ್ ಸಾಂಕ್ರಾಮಿಕದ ಬಗ್ಗೆ ಆಗಿದ್ದು, ಅದು ಏಪ್ರಿಲ್ ೪, ೨೦೨೦ರಂದು ಬರೆದಳಂತೆ. ಆ ಪದ್ಯವನ್ನು ಬರೆಯಲು ಆಕೆಗೆ ಒಂದು ಗಂಟೆ ಸಮಯ ಬೇಕಾಯಿತಂತೆ.

“ಆದರೆ ಪುಸ್ತಕ ಬರೆಯುವ ಕಲೆ ಮುಗಿಯುತ್ತಲೇ ಇಲ್ಲ. ನನ್ನ ಮೊದಲ ಪುಸ್ತಕವನ್ನು ಬರೆಯಲು ನನಗೆ ಸುಮಾರು ನಾಲ್ಕು ತಿಂಗಳು ಬೇಕಾಯಿತು. ಆಗ ಅದು ನನ್ನ ಮೊದಲ ಪ್ರಯತ್ನವಾಗಿದ್ದು, ಭಾವನಾತ್ಮಕವಾಗಿ ಬಹಳ ತ್ರಾಸವಾಯಿತು. ಆದರೆ ಕ್ರಮೇಣ ಬರಹಗಾರರ ಜೀವನ ಹೇಗಿರುತ್ತದೆ ಎಂಬುದನ್ನು ಅರಿತು ಅದಕ್ಕೆ ಒಗ್ಗಿಕೊಂಡೆ,” ಎನ್ನುತಾಳೆ ಅಮನ.

ಆಕೆಯ ತಾಯಿ ಈಕೆಯನ್ನು ಬರೆಯಲು ಪ್ರೋತ್ಸಾಹಿಸಿದರಂತೆ. “ನಂತರ ನಾನು ಬರೆಯಲು ಆರಂಭಿಸಿದೆ. ಅಂದಿನಿಂದ ಹಿಂದಿರುಗಿ ನೋಡಲಿಲ್ಲ. ಜೊತೆಗೆ ನಾನು ಸುಮಾರು ೫೦೦ಕ್ಕೂ ಹೆಚ್ಚಿನ ಪುಸ್ತಕಗಳನ್ನು ಓದಿರುವಂತಹ ಬಿಬ್ಲಿಯೋಫೈಲ್ (ಗ್ರಂಥಸೂಚಿ). ಹಾಗಾಗಿ ನಾನು ಸಾಹಿತ್ಯ ಕ್ಷೇತ್ರದಲ್ಲಿ ಪ್ರಯತ್ನಿಸಲು ಮುಂದಾದೆ. ಆದರೆ ಈ ಪ್ರಶಂಸೆ ಅನಿರೀಕ್ಷಿತ. ನನ್ನ ಯಶಸ್ಸನ್ನು ನಾನು ನನ್ನ ಅಮ್ಮನಿಗೆ ಅರ್ಪಿಸುತ್ತೇನೆ. ಆಕೆ ಯಾವಾಗಲೂ ನನ್ನನ್ನು ಬರೆಯಲು ಪ್ರೋತ್ಸಾಹಿಸುತ್ತಿದ್ದಳು. ಆಕೆ ನನಗೆ ಬಹಳ ದೊಡ್ಡ ಬೆಂಬಲ,” ಎನ್ನುತ್ತಾಳೆ ಅಮನ.

ಜೊತೆಗೆ ಆಕೆಯ ಸಹಪಾಠಿಗಳು ಮತ್ತು ಶಾಲೆಯ ಶಿಕ್ಷಕರೂ ಸಹ ಈಕೆಗೆ ಪ್ರೋತ್ಸಾಹ ನೀಡಿದರಂತೆ. ಮೇಲಾಗಿ ಶಾಲೆಯ ಪ್ರಾಂಶುಪಾಲರು ಈಕೆಯ ಪ್ರಯತ್ನವನ್ನು ಅರಿತು ಬೆಂಬಲಿಸಿದರಂತೆ. “ನನ್ನ ತಲೆಯಲ್ಲಿ ಬರವಣಿಗೆಯ ಹುಚ್ಚನ್ನು ಮೊದಲು ತುಂಬಿದ್ದು ನನ್ನ ಇಂಗ್ಲೀಷ್ ಶಿಕ್ಷಕರು. ಆಕೆಯೇ ನನಗೆ ಮೊದಲು ಸಲಹೆ ನೀಡಿದ್ದು. ಅದಕ್ಕಾಗಿ ನಾನು ಚಿರಋಣಿ,” ಎಂದಳು.

“ನಾನು ನನ್ನ ಪದ್ಯ ರಚನೆ ಹಾಗೂ ಸಾಹಿತ್ಯವನ್ನು ಮುಂದುವರೆಸುತ್ತೇನೆ. ನನ್ನ ಭವಿಷ್ಯದ ಯೋಜನೆಗಳ ಕುರಿತು ನಾನು ಬಹಳ ಚಂಚಲ ಮನಸ್ಸಿನವಳು. ಕಳೆದ ವಾರದವರೆಗೂ ನನಗೆ ಆಸ್ಟ್ರೋಫಿಸಿಕ್ಸ್ ನಲ್ಲಿ ಆಸಕ್ತಿ ಇತ್ತು, ಇಂದು ವೈದ್ಯಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದೇನೆ. ಈ ವಿಷಯವಾಗಿ ನನಗೆ ಇನ್ನೂ ಸ್ಥಿರ ಮನಸ್ಸಿಲ್ಲ. ಆದರೆ ಭವಿಷ್ಯದಲ್ಲಿ ನನ್ನ ವೃತ್ತಿ, ನಾನು ಎಂದೂ ಆಲೋಚಿಸಿಯೂ ಇರದಂತಹ ಇನ್ನೇನಾದರೂ ಅನಿರೀಕ್ಷಿತ ಕ್ಷೇತ್ರದ ಕಡೆಗೆ ತಿರುವು ಪಡೆದರೂ ಆಶ್ಚರ್ಯವಿಲ್ಲ. ಮುಂದಿನ ದಿನಗಳಲ್ಲಿ ಗದ್ಯ ರಚನೆಯವನ್ನು ಪ್ರಯತ್ನಿಸಬೇಕೆಂದಿದ್ದೇನೆ,” ಎನ್ನುತ್ತಾಳೆ ಅಮನ.

ಸುದ್ದಿ ಮೂಲ: ಬೆಂಗಳೂರ್ ಮಿರರ್.

Key words: Continued -effort – young poet –broke- records-wirtting-amana