ಜನನ ಮತ್ತು ಮರಣ ನೊಂದಣಿ ಪ್ರಕರಣಗಳನ್ನು ಜೆ.ಎಂ.ಎಫ್.ಸಿ ಕೋರ್ಟ್ ವ್ಯಾಪ್ತಿಯಲ್ಲೆ ಮುಂದುವರೆಸಿ –ಸಿಎಂಗೆ ಹಿರಿಯ ವಕೀಲ ಅ.ಮ.ಭಾಸ್ಕರ್ ಪತ್ರ.

ಮೈಸೂರು,ಜುಲೈ,25,2022(www.justkannada.in): ಜನನ ಮತ್ತು ಮರಣ ನೊಂದಣಿ ಪ್ರಕರಣಗಳನ್ನು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ (ಜೆ.ಎಂ.ಎಫ್.ಸಿ) ವ್ಯಾಪ್ತಿಯಲ್ಲೆ ಮುಂದುವರೆಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮೈಸೂರಿನ ಹಿರಿಯ ವಕೀಲ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್, ಕಾನೂನು ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ಅಧ್ಯಕ್ಷರಾದ ಅ.ಮ.ಭಾಸ್ಕರ್ ಮನವಿ ಮಾಡಿದ್ದಾರೆ.

ಈ ಕುರಿತು ಸಿಎಂಗೆ ಪತ್ರ ಬರೆದಿರುವ ಅ.ಮ ಭಾಸ್ಕರ್, ದಿನಾಂಕ : 18/07/2022 ರಂದು ರಾಜ್ಯ ಸರ್ಕಾರವು ಅದಿಸೂಚನೆಯನ್ನು ಹೊರಡಿಸಿ ಜನನ ಮತ್ತು ಮರಣ ನೊಂದಣಿ ಈ ಹಿಂದೆ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ (ಜೆ.ಎಂ.ಎಫ್.ಸಿ) ವ್ಯಾಪ್ತಿಗೆ ಇದ್ದದ್ದನ್ನು ತಿದ್ದುಪಡಿ ಮಾಡಿ ಉಪ ವಿಭಾಗಾಧಿಕಾರಿ ನ್ಯಾಯಾಲಯ (ಏ.ಸಿ ಕೋರ್ಟ್)ಗಳಿಗೆ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅಧಿಕಾರವನ್ನು ನೀಡಿ ಅದಿಸೂಚನೆ ಹೊರಡಿಸಿರುವುದು ಸರಿಯಷ್ಟೆ.

ಜನನ ಹಾಗೂ ಮರಣ ಪ್ರಮಾಣ ಪತ್ರವು ಒಬ್ಬ ವ್ಯಕ್ತಿಗೆ ಸಂಬಂಧ ಪಟ್ಟ ಅಮೂಲ್ಯ ದಾಖಲೆಯಾಗಿದ್ದು ಸದರಿ ಜನನ ಪ್ರಮಾಣ ಪತ್ರದ ಆಧಾರದ ಮೇಲೆ ಶಿಕ್ಷಣ, ಪಾಸ್‍ಪೊರ್ಟ್ ಉದ್ಯೋಗ ,ಆಧಾರ್ ಕಾರ್ಡ್ ಹಾಗು ಇನ್ನಿತರ ದಾಖಲಾತಿಗಳನ್ನು ನೊಂದಾಯಿಸುವ ಸಮಯದಲ್ಲಿ ಜನನ ಪ್ರಮಾಣ ಪತ್ರವು ಅಮೂಲ್ಯ ದಾಖಲೆಯಾಗಿರುತ್ತದೆ. ಹಾಗೆಯೇ ಮರಣ ಪ್ರಮಾಣ ಪತ್ರದ ಆಧಾರದ ಮೇಲೆ ಆಸ್ತಿಯ ಹಕ್ಕುಗಳ ವಿಲೆವಾರಿ ಹಾಗೂ ಕಾನೂನು ಬದ್ದ ವಾರಸುದಾರರ ಗುರುತಿಸುವಿಕೆಗೆ ಹಾಗೂ ಇತರ ಕಾನೂನು ಸಂಬಂಧ ಪ್ರಕರಣಗಳಲ್ಲಿ ಸದರಿ ಮರಣ ಪ್ರಮಾಣ ಪತ್ರವು ಅಮೂಲ್ಯ ದಾಖಲೆಯಾಗಿದ್ದು ಸದರಿ ಜನನ ಹಾಗೂ ಮರಣ ಪತ್ರವು ವಿವಾದಕ್ಕೊಳಪಟ್ಟಲ್ಲಿ ಅಥವಾ ಅದನ್ನು ಸರಿಯಾಗಿ ಗುರುತಿಸಿ ದಾಖಲೆಗಳ ಆಧಾರದ ಮೇಲೆ ನೀಡಬೇಕಾದ ಸಂದರ್ಭದಲ್ಲಿ ಕಾನೂನು ತಿಳುವಳಿಕೆ ಅತ್ಯವಶ್ಯಕವಾಗಿರುತ್ತದೆ. ಸದರಿ ದಾಖಲೆಗಳುನ್ನು ನೀಡುವ ಸಂದರ್ಭದಲ್ಲಿ ಪ್ರಸ್ತುತ ನ್ಯಾಯಾಲಯವು ಪ್ರಚಲಿತ ಇರುವ ನ್ಯಾಯಿಕ ದೃಷಿಕೋನದಿಂದ ಗೌರವಾನ್ವಿತ ರಾಜ್ಯ ಉಚ್ಛನ್ಯಾಯಾಲಯ ಹಾಗೂ ಸರ್ವೊಚ್ಚ ನ್ಯಾಯಾಲಯದ ತೀರ್ಪುಗಳ ಆಧಾರದ ಮೇಲೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಜನನ ಮರಣ ಪ್ರಮಾಣ ಪತ್ರಗಳನ್ನು ನೀಡಲು ಸಂಭಂದ ಪಟ್ಟ ಸಂಸ್ಥೆಗಳಿಗೆ ಆದೇಶಿಸುತ್ತಾ ಬಂದಿರುವುದು ನೈಸರ್ಗಿಕ ನ್ಯಾಯದ ದೃಷ್ಟಿಯಿಂದ ಸರಿಯಾಗಿರುತ್ತದೆ.

ಸದರಿ ಸರ್ಕಾರದ ನೂತನ ಆದೇಶದ ಅನ್ವಯ ಉಪವಿಭಾಗಾಧಿಕಾರಿ ನ್ಯಾಯಾಲಯಗಳಿಗೆ ಸದರಿ ಜನನ ಮರಣ ಪ್ರಮಾಣ ಪತ್ರಗಳನ್ನು ಇತ್ಯರ್ಥಪಡಿಸುವ ಅಧಿಕಾರ ನೀಡಿರುವುದು ಕಾನೂನು ದೃಷ್ಟಿಯಿಂದ ಸರಿ ಇರುವುದಿಲ್ಲ. ಸದರಿ ಉಪವಿಭಾಗಾದಿಕಾರಿಗಳಿಗೆ ಅತಿ ಹೆಚ್ಚಿನ ಕಾನೂನು ಅರಿವು ಇರುವುದಿಲ್ಲ ಹಾಗೂ ನ್ಯಾಯಿಕ ದೃಷ್ಟಿಕೊನದಿಂದ ನೈಸರ್ಗಿಕ ನ್ಯಾಯದ ನಿಯಮದಡಿಯಲ್ಲಿ ಪ್ರಕರಭಣಗಳನ್ನು ಇತ್ಯರ್ಥ ಪಡಿಸಲು ಸಾಧ್ಯವಿರುವುದಿಲ್ಲ. ಇದರಿಂದ ಅನೇಕ ವಿವಾದಗಳು ಸೃಷ್ಟಿಯಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಆದ್ದರಿಂದ ತಾವು ಮೇಲ್ಕಂಡ ವಿಷಯಕ್ಕೆ ಸಂಭಂದಿಸಿದಂತೆ ದಿನಾಂಕ : 18/07/2022 ರಂದು ಜನನ ಹಾಗೂ ಮರಣ ಪ್ರಮಾಣ ಪತ್ರ ಇತ್ಯರ್ಥಪಡಿಸುವ ಅಧಿಕಾರವನ್ನು ಉಪವಿಭಾಗಾದಿಕಾರಿ ನ್ಯಾಯಾಲಯಕ್ಕೆ ನೀಡಿರುವ ಅಧಿಕಾರವನ್ನು ರದ್ದು ಪಡಿಸಿ ಮೊದಲಿನಂತೆಯೆ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ (ಜೆ.ಎಂ.ಎಫ್.ಸಿ) ವ್ಯಾಪ್ತಿಗೆ ನೀಡಬೇಕೆಂದು ಸಿಎಂ ಬಳಿ ಅ.ಮ ಭಾಸ್ಕರ್ ಮನವಿ ಮಾಡಿದ್ದಾರೆ.

Key words: Continue -birth – death- registration -cases – JMFC Court –AM Bhaskar- letter – CM