ಮೈಸೂರಿನಲ್ಲಿ ವಿವೇಕ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ: ಗುದ್ದಲಿ ಪೂಜೆ ವಿರೋಧಿಸಿ ಪ್ರತಿಭಟನೆ.

ಮೈಸೂರು,ಜುಲೈ,6,2022(www.justkannada.in):  ಮೈಸೂರಿನಲ್ಲಿ ವಿವೇಕ ಸ್ಮಾರಕ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್  ಇಂದು ಗುದ್ದಲಿ ಪೂಜೆ ನೆರವೇರಿಸಿದರು.

ಮೈಸೂರಿನ ನಾರಾಯಣ್ ಶಾಸ್ತ್ರಿ ರಸ್ತೆಯಲ್ಲಿರುವ ವಿವಾದಿತ ಸ್ಥಳದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ- ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಸುತ್ತೂರು ಶ್ರೀಗಳ ಸಾನ್ನಿಧ್ಯದಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಚಾಲನೆ ನೀಡಿದರು. ರಾಮಕೃಷ್ಣ ಮಠದ ಅಧ್ಯಕ್ಷ ಮುಕ್ತಿದಾನಂದ ಸ್ವಾಮೀಜಿ ಮುಂದಾಳತ್ವದಲ್ಲಿ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಲ್.ನಾಗೇಂದ್ರ, ಯತೀಂದ್ರ ಸಿದ್ದರಾಮಯ್ಯ, ಎಸ್‌ಎ.ರಾಮ್‌ ದಾಸ್, ಜಿಟಿ.ದೇವೇಗೌಡ, ಹಿರಿಯ ಸಾಹಿತಿಗಳಾದ ಎಸ್.ಎಲ್.ಭೈರಪ್ಪ, ಸಿಪಿ.ಕೃಷ್ಣಮೂರ್ತಿ ಸೇರಿ ಗಣ್ಯರು ಭಾಗಿಯಾಗಿದ್ದರು.

ವಿವೇಕ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ವಿರೋಧಿಸಿ ಪ್ರತಿಭಟನೆ.

ನಿರಂಜನ ಮಠದ ವಿವಾದ ನ್ಯಾಯಾಲಯದಲ್ಲಿದ್ದರೂ ವಿವೇಕ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಿನ್ನೆಲೆ, ವಿವಾದಿತ ಸ್ಥಳದಲ್ಲಿ ಗುದ್ದಲಿಪೂಜೆ ವಿರೋಧಿಸಿ ನಿರಂಜನ ಮಠದ ಬಳಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಪ್ರತಿಭಟನೆ ನಡೆಯಿತು.

ಸದರಿ ಜಾಗದ ವಿವಾದ ನ್ಯಾಯಾಲಯದಲ್ಲಿದ್ದರೂ ಗುದ್ದಲಿ ಪೂಜೆ ನೆರವೇರಿಸಿದ ಕ್ರಮ ಖಂಡಿಸಿ ಘೋಷಣೆ‌ ಕೂಗಿ ಪ್ರತಿಭಟನೆ ನಡೆಸಿದರು.  ಗುದ್ದಲಿ ಪೂಜೆಯಲ್ಲಿ ಭಾಗಿಯಾದ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ನಡೆಗೂ ಖಂಡನೆ ವ್ಯಕ್ತವಾಯಿತು.  ಪ್ರತಿಭಟನೆ ಹಿನ್ನೆಲೆಯಲ್ಲಿ ನಿರಂಜನಮಠದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Key words: construction – Viveka Memorial – Mysore-Protest -against -Guddali Puja.