ಮುಖ್ಯಮಂತ್ರಿ ಆಯ್ಕೆ ಬಗ್ಗೆ ಇಂದು ಕಾಂಗ್ರೆಸ್ ನಿರ್ಧಾರ.

ಬೆಂಗಳೂರು,ಮೇ,15,2023(www.justkannada.in): ಕರ್ನಾಟಕದಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯ ಸಾಧಿಸಿದೆ.  1989ರಲ್ಲಿ ವೀರೇಂದ್ರ ಪಾಟೀಲ್ 178 ಸ್ಥಾನ ಗೆಲ್ಲಿಸುವ ಮೂಲಕ ಹೊಸ ದಾಖಲೆ ಹಾಗೂ ಇತಿಹಾಸವನ್ನೇ ನಿರ್ಮಾಣ ಮಾಡಿದ್ದರು. ಈ ದಾಖಲೆಯನ್ನು ಇದುವರೆವಿಗೂ ಯಾವ ನಾಯಕನೂ, ಪಕ್ಷವಾಗಲಿ ಮುರಿದಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಲಭಿಸಿರುವ 135 ಸೀಟುಗಳು, ಅತಿ ಎರಡನೇ ದೊಡ್ಡ ಸಂಖ್ಯೆಯದು.

ಕಾಂಗ್ರೆಸ್ ಗೆ ಇಂತಹ ಚಾರಿತ್ರಿಕ ಗೆಲುವು ದೊರಕಲು ಬಿಜೆಪಿ ವಿರುದ್ಧ ಜನರಿಗಿದ್ದ ಆಕ್ರೋಶ. ಬ್ರಹ್ಮಾಂಡ ಭ್ರಷ್ಟಾಚಾರ, ಜನರಿಗೆ ಸ್ಪಂದಿಸದ ಆಡಳಿತ, ಧರ್ಮದ ವಿಚಾರಗಳನ್ನೇ ಕೆದಕಿ ಕೆದಕಿ ಜನ ಜೀವನವನ್ನು ಅಸ್ತವ್ಯಸ್ತ ಮಾಡಿದ್ದು, ಮುಸ್ಲಿಂ ಸಮುದಾಯ ಭಯದಲ್ಲೇ ಬದುಕುವ ಪರಿಸ್ಥಿತಿ ನಿರ್ಮಾಣ ಮಾಡಲು ಮಾಡಿದ ನಿರ್ಧಾರಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಂಚಮಸಾಲಿ ಸಮುದಾಯಗಳಿಗೆ ಮೀಸಲಾತಿಯ ಆಸೆ ತೋರಿ ಮೋಸ ಮಾಡಿದ್ದು. ಮುಸ್ಲಿಂರಿಗೆ ಇದ್ಧ ಮೀಸಲಾತಿ ರದ್ದು ಮಾಡಿದ್ದು, ಭಜರಂಗಿ,, ಲಿಂಗಾಯತ ವಿಚಾರಗಳನ್ನು ಚುನಾವಣೆಯಲ್ಲಿ ದುರ್ಬಳಕೆ ಮಾಡಲು ಹವಣಿಸಿದ್ದು ಕಮಲ ಪಕ್ಷಕ್ಕೆ ಮುಳುವಾಯಿತೆಂದೇ ವಿಶ್ಲೇಷಿಸಲಾಗುತ್ತಿದೆ.

ಬೆಲೆ ಏರಿಕೆಯ ಬವಣೆಯಿಂದ ಬಸವಳಿದಿದ್ದ ಜನತೆ, ಬಿಜೆಪಿಗೆ ಪಾಠ ಕಲಿಸಲು ಕಾಯುತ್ತಿತ್ತು.  ಪ್ರಧಾನಿ ನರೇಂದ್ರ ಮೋದಿಯವರು 2014ರ ಚುನಾವಣೆಯಲ್ಲಿ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸುವ ಭರವಸೆ ನೀಡಿದ್ದರು. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿ ಶ್ರೀಸಾಮಾನ್ಯನ ಬದುಕನ್ನು ಹಸನಾಗಿಸುವೆ ಎಂದೆಲ್ಲ ಪುಂಗಿ ಊದಿ, ಪ್ರಧಾನಿ ಪಟ್ಟ ಸಿಕ್ಕ ಕೊಡಲೇ ತಾವು ನೀಡಿದ್ದ ಭರವಸೆಗ ಬಗ್ಗೆ ಜಾಣ ಮರೆವು ಪ್ರದರ್ಸಿಸಿದರು. ಕಳೆದ ಒಂಬತ್ತು ವರ್ಷದಲ್ಲಿ ಜನ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳಿಂದ ನೊಂದಿದ್ದಾರೆ.

ಎಲ್ಲೇ ಚುನಾವಣೆ ನಡೆಯಲಿ, ಮೋದಿಯವರು ಬಿಜೆಪಿ ಪರ ಅಬ್ಬರದ  ಪ್ರಚಾರ ಕೈಗೊಳ್ಳುವರು. ಆದರೆ, ಅಪ್ಪಿ ತಪ್ಪಿಯೂ ಬೆಲೆ ಏರಿಕೆ, ತಮ್ಮ ಪಕ್ಷದ ಸರ್ಕಾರಗಳ ವಿರುದ್ದ ಕೇಳಿ ಬಂದ ಭ್ರಷ್ಟಾಚಾರದ ಆರೋಪಗಳಿಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷ ಕುಟುಂಬ ಆಧಾರಿತ ಪಕ್ಷ, ಭ್ರಷ್ಟಾಚಾರಿ ಪಕ್ಷ ಎಂದು ಟೀಕೆ ಮಾಡುವುದರಲ್ಲೆ ಒಂಭತ್ತು ವರ್ಷ ಕಳೆದರು. ಕರ್ನಾಟಕದಲ್ಲಿ ಅವರ ಪಕ್ಷದ ವಿರುದ್ದ 40% ಕಮಿಷನ್ ಆರೋಪ ಬಂದರೂ ಅದಕ್ಕೂ ಅವರು ಉತ್ತರಿಸಲಿಲ್ಲ.

ಚುನಾವಣೆ ನಡೆದು, ಫಲಿತಾಂಶ ಹೊರ ಬಿದ್ದಿದೆ. ಕಾಂಗ್ರೆಸ್ ಗೆ ಜನ ಬಹುಮತ ನೀಡಿದ್ದಾರೆ. ಮುಖ್ಯಮಂತ್ರಿ ಯಾರಾಗಬೇಕು ಎಂದು ಕಾಂಗ್ರೆಸ್ ತೀರ್ಮಾನ ಮಾಡಬೇಕಿದೆ. ಕಾರಣ ಆ ಕುರ್ಚಿಗೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಇಬ್ಬರೂ ಆಕಾಂಕ್ಷಿಗಳು. ಇಬ್ಬರೂ ಪ್ರಬಲರೆ.

ಸಿದ್ದರಾಮಯ್ಯ ಈಗಾಗಲೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕೆಲಸ ಮಾಡಿ, ಒಳ್ಳೆಯ ಆಡಳಿತಗಾರ ಎನಿಸಿಕೊಂಡಿದ್ದಾರೆ. ಶಿವಕುಮಾರ್ ತಮ್ಮ ಆಡಳಿತದ ಛಾಪನ್ನು ಇನ್ನೂ ಮೂಡಿಸಿಬೇಕಿದೆ. ಕಾಂಗ್ರೆಸ್ ನಲ್ಲಿ ಜಾತಿ ಬಲದ ಆದಾರದ ಮೇಲೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿಲ್ಲ. ಒಕ್ಕಲಿಗ ಸಮುದಾಯವನ್ನು ಜೆಡಿಎಸ್ ನಿಂದ ಕಾಂಗ್ರೆಸ್ ಕಡೆಗೆ ಶಿವಕುಮಾರ್ ಕರೆ ತಂದಿದ್ದಾರೆ. ಹಾಗೆಯೇ, ದಲಿತರು ಹಿಂದುಳಿದವರು, ಅಲ್ಪಸಂಖ್ಯಾತರು, ಸಿದ್ದರಾಮಯ್ಯ ನವರ ಮೇಲಿನ ಭರವಸೆಯಿಂದ ಕಾಂಗ್ರೆಸ್ ಗೆ ಮತ ನೀಡಿದ್ದಾರೆ.

ಬಿಜೆಪಿ ಲಿಂಗಾಯತ ನಾಯಕರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಲಕ್ಷಣ ಸವದಿ ಯಂತವರನ್ನು ಅವಮಾನಿಸಿದೆ. ಇದನ್ನು ಸಹಿಸದ ಲಿಂಗಾಯತರು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಕಾಂಗ್ರೆಸ್ ಈ ಚುನಾವಣೆಯಲ್ಲಿ 37 ಲಿಂಗಾಯತ ಶಾಸಕರು ಆಯ್ಕೆ ಕಂಡಿದೆ.

ಕಾಂಗ್ರೆಸ್ ನಿಮ್ಮ ಶಾಸಕಾಂಗ ನಾಯಕನನ್ನು ನೀವೆ ಆಯ್ಕೆ ಮಾಡಿ ಎಂದು ಶಾಸಕರಿಗೆ ಸೂಚಿಸಿದರೆ, ಬಹುತೇಕರು ಸಿದ್ದರಾಮಯ್ಯನವರನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚು. ರಾಜಕೀಯವಾಗಿ ನೋಡುವುದಾದರೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಾಸ್ತ್ರಗಳಿಂದ ಎದುರಿಸಿ, ಉತ್ತರ ಕೊಡುವ ಸಾಮರ್ಥ್ಯ ಕಾಂಗ್ರೆಸ್ ನಾಯಕರೆಂದರೆ ಅದು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ನವರು ಮಾತ್ರ.

ಮುಂದಿನ ವರ್ಷ ಇದೇ ಹೊತ್ತಿಗೆ ಲೋಕಸಭಾ ಚುನಾವಣೆ ನಡೆಯಲಿದೆ.‌ ಬಿಜೆಪಿ ವಿರುದ್ಧ ಸಮರ್ಥವಾಗಿ ಹೋರಾಡುವ ನಾಯಕನೊಬ್ಬ ಕರ್ನಾಟಕ ಕಾಂಗ್ರೆಸ್ ಗೆ ಬೇಕಾಗಿದೆ. ಇಂತಹ ಸಮರ ಸಮಯದಲ್ಲಿ ಸಿದ್ದರಾಮಯ್ಯ ಉತ್ತಮ ನಾಯಕರಾಗಬಲ್ಲರು. ಶಿವಕುಮಾರ್ ಗೆ ಮೋದಿಯವರನ್ನು ಎದುರಿಸುವ ಶಕ್ತಿ ಇಲ್ಲವೆಂದಿಲ್ಲ. ಅವರೂ ಸಹ ಸಮರ್ಥರೇ.

ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕಾಂಗ್ರೆಸ್, ಅಲ್ಲಿಯವರೆಗೆ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿ, ನಂತರ ಶಿವಕುಮಾರ್ ಗೆ ಪಟ್ಟ ಕಟ್ಟುವ ಆಲೋಚನೆ ಯಲ್ಲಿದೆ  ಎಂದು ಕಾಂಗ್ರೆಸ್ ನ ಉನ್ನತ ಮೂಲಗಳು ತಿಳಿಸಿವೆ.  ‌ಕಾಂಗ್ರೆಸ್ ಹೈ ಕಮಾಂಡ್ ಈ ಬಗ್ಗೆ ತನ್ನ ನಿರ್ಧಾರವನ್ನು ಇಂದು ಪ್ರಕಟಿಸುವ ಸಾಧ್ಯತೆ ಇದೆ.

M.SIDDARAJU, SENIOR JOURNALIST

 

ಎಂ.ಸಿದ್ಧರಾಜು

ಹಿರಿಯ ಪತ್ರಕರ್ತರು.

 ಬೆಂಗಳೂರು.

 

 

Key words: Congress- will-decide – Chief Minister’s – today.