ಕಾಂಗ್ರೆಸ್ ಪ್ರಣಾಳಿಕೆ ಸ್ವಾಗತಾರ್ಹ- ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್.

ಮೈಸೂರು,ಏಪ್ರಿಲ್,5, 2024 (www.justkannada.in):  ಕಾಂಗ್ರೆಸ್‌ ಪಕ್ಷ ಇವತ್ತು ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಕೆ ರೈತರು, ಮಹಿಳೆಯರು,  ಯುವ ಜನರು, ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಕೆಪಿಸಿಸಿ ವಕ್ತಾರ ಎಚ್‌.ಎ ವೆಂಕಟೇಶ್‌ ಅಭಿಪ್ರಾಯಪಟ್ಟಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಲ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕ ಕುರಿತು ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ರೈತರು ನಡೆಸುತ್ತಿರುವ ಪ್ರತಿಭಟನೆಗಳು ರೈತರ ನೈಜ ಸಮಸ್ಯೆಗಳ ಕಡೆ ಬೆಳಕು ಚೆಲ್ಲಿದೆ. ಆಡಳಿತರೂಢ ಬಿಜೆಪಿ ನೇತೃತ್ವದ ಎನ್‌ ಡಿಎ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಮಕ್ಕಳಿಗೆ ಉದ್ಯೋಗ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವುದು. ಕನಿಷ್ಠ ಬೆಂಬಲ ಬೆಲೆ ನೀಡುವ ಸಲುವಾಗಿ ಸ್ವಾಮಿನಾಥನ್‌ ಆಯೋಗದ ಶಿಫಾರಸ್ಸು ಜಾರಿಗೊಳಿಸಲು ನಮ್ಮ ಪಕ್ಷ ತೀರ್ಮಾನಿಸಿರುವುದು ಸ್ವಾಗತಾರ್ಹ ಬೆಳವಣಿಗೆ.  ಶಾಶ್ವತ ಕೃಷಿ ಹಣಕಾಸು ಆಯೋಗ ನೇಮಕ ಮಾಡಿ ರೈತರಿಗೆ ಸಾಲ ಸೌಲಭ್ಯ ಒದಗಿಸುವುದು. ಕನಿಷ್ಠ ಬೆಂಬಲ ಬೆಲೆಯನ್ನು ಕೃಷಿಉತ್ಪನ್ನ ಮಾರುಕಟ್ಟೆ ಮೂಲಕ ರೈತರ ಖಾತೆಗೆ ನೇರ ವರ್ಗಾವಣೆ ಮಾಡಲಾಗುವುದು ಎಂಬುದು ಪ್ರಣಾಳಿಕೆಯ ಪ್ರಮುಖ ಅಂಶವಾಗಿದೆ ಎಂದರು.

ರೈತರ ಎಲ್ಲಾ ಬೆಳೆಗಳಿಗೆ ಬೆಳೆ ವಿಮೆ ಮಾಡುವುದು .ಆದಕ್ಕೆ ಕನಿಷ್ಠ ಮೂಲಧನ ನಿಗದಿ,  ಅಲ್ಲದೆ ಬೆಳೆ ಪರಿಹಾರ 30 ದಿನಗಳೊಳಗೆ ರೈತರಿಗೆ ಸಿಗುವಂತೆ ಮಾಡುವುದು ದೊಡ್ಡ ದೊಡ್ಡ ಗ್ರಾಮಗಳು ಹಾಗೂ ಪಟ್ಟಣ ಪ್ರದೇಶಗಳಲ್ಲಿ ರೈತರೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರ ಸಂತೆ ತೆರೆಯುವ ವ್ಯವಸ್ಥೆ ಶ್ಲಾಘನೀಯವಾಗಿದೆ.

ಇವತ್ತಿಗೂ ನಮ್ಮಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿರುವುದು ಸತ್ಯಸಂಗತಿ. ಹಿಂದುಳಿದವರು. ತುಳಿತಕ್ಕೊಳಗಾದವರು,  ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಲು ಪಕ್ಷ ಪಣತೊಟ್ಟಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಆರ್ಥಿಕ, ಸಾಮಾಜಕ ಹಾಗೂ ಜಾತಿ ಜನಗಣತಿ ನಡೆಸಲು ಪಕ್ಷ ತೀರ್ಮಾನಿಸಿರುವುದು ಆರೋಗ್ಯಕರ ಬೆಳವಣಿಗೆ ಆಗಿದೆ ಎಂದು ಹೆಚ್.ಎ ವೆಂಕಟೇಶ್ ತಿಳಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಈಗ ನೀಡುತ್ತಿರುವ ಶೇ.10 ರಷ್ಟು ಇ ಡಬ್ಲ್ಯುಎಸ್‌ ಮೀಸಲಾತಿಯನ್ನು ಎಲ್ಲಾ ಜಾತಿ ವರ್ಗಗಳಿಗೆ ವಿಸ್ತರಿಸಲಾಗುವುದು. ಅಧಿಕಾರಕ್ಕೆ ಬಂದ ಕೂಡಲೇ ಬ್ಯಾಕ್‌ ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಪಕ್ಷ ಭರವಸೆ ನೀಡಿದೆ. ಈಗ ಜಾರಿಯಲ್ಲಿರುವ ಗುತ್ತಿಗೆ ನೌಕರಿ ಪದ್ಧತಿ ರದ್ದು ಪಡಿಸಲಾಗುವುದು. ಈಗಾಗಲೇ ಗುತ್ತಿಗೆ ಆಧಾರದ ಮೇಲೆ ಸಲ್ಲಿಸುತ್ತಿರುವವರನ್ನು ಖಾಯಂಗೊಳಿಸುವ ಬಗ್ಗೆ ಆಶ್ವಾಸನೆ ನೀಡಿದೆ.

ಧಾರ್ಮಿಕ ಹಾಗೂ ಭಾಷಾ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಒತ್ತು ನೀಡುವುದು. ಈ ವರ್ಗದ ಜನರಿಗೆ ಶಿಕ್ಷಣ, ಉದ್ಯೋಗ, ಕ್ರೀಡೆ, ವ್ಯಾಪಾರ ಇತರೇ ಕ್ಷೇತ್ರಗಳಲ್ಲಿ ಮುಂದೆ ಬರಲು ಎಲ್ಲಾ ರೀತಿ ಆರ್ಥಿಕ ಸಹಕಾರ ನೀಡುವುದಾಗಿ ಪಕ್ಷ ಭರವಸೆ ನೀಡಿದೆ.

ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಒದಗಿಸಲಾಗುವುದು. ರಾಜಸ್ಥಾನ ಮಾದರಿಯಲ್ಲಿ 25 ಲಕ್ಷ ರೂ. ವೆಚ್ಚದವರೆಗೆ ಆರೋಗ್ಯ ಸೇವೆ ಒದಗಿಸುವ ಯೋಜನೆ ಅನುಷ್ಠಾನಕ್ಕೆ ತರಲಾಗುವುದು. ಅಲ್ಲದೆ  ದೇಶದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಪಕ್ಷ ಭರವಸೆ ನೀಡಿದೆ.

ಶಿಕ್ಷಣ ಹಕ್ಕು ಖಾಯಿದೆಗೆ ತಿದ್ದುಪಡಿ ತಂದು ಒಂದರಿಂದ 12 ನೇತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಗೆ ಅನೇಕ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ರಾಜ್ಯಗಳೊಂದಿಗೆ ಚರ್ಚಿಸಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವುದಾಗಿ ಪಕ್ಷ ಭರವಸೆ ನೀಡಿದೆ.

ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಸಲುವಾಗಿ ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ಬಡ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ಸಹಾಯ ನೀಡಲು ಪಕ್ಷ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಕ್ರೀಡಾ ಪಟುಗಳಿಗೆ, ಮೀನುಗಾರರಿಗೆ ಹಾಗೂ ದುಡಿಯುವ ವರ್ಗದ ಜನರಿಗೆ ಎಲ್ಲಾ ರೀತಿ ಆರ್ಥಿಕ ಭದ್ರತೆ ಒದಗಿಸಲಾಗುವುದು ಎಂದರು.

ಸಂವಿಧಾನದಲ್ಲಿ ಇರುವಂತೆ ಪ್ರತಿಯೊಬ್ಬ ನಾಗರಿಕರಿಗೆ ನೀಡಲಾಗಿರುವ ವಾಕ್‌ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲಾಗುವುದು. ನ್ಯಾಯಾಂಗ, ಮಾಧ್ಯಮಗಳ ಹಕ್ಕಗಳನ್ನು ಗೌರವಿಸಲಾಗುವುದು ಎಂದು ಪಕ್ಷ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವುದು ಉತ್ತಮವಾಗಿದೆ ಎಂದು ವೆಂಕಟೇಶ್‌ ಹೇಳಿದ್ದಾರೆ.

Key words: Congress, manifesto, HA Venkatesh