ಚಿಕ್ಕಲ್ಲೂರು ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ : ಅಧಿಕಾರಿ ವರ್ಗಕ್ಕೆ ಜಿಲ್ಲಾಧಿಕಾರಿ ಶಿಲ್ಪನಾಗ್ ಖಡಕ್ ಸೂಚನೆ.

ಚಾಮರಾಜನಗರ,ಜನವರಿ,11,2024(www.justkannada.in): ಇದೇ ಜನವರಿ 25 ರಿಂದ ಚಿಕ್ಕಲ್ಲೂರು, ಘನನೀಲಿ‌ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಅಧಿಕಾರಿ ವರ್ಗಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಫನಾಗ್ ಕೆಲ ಖಡಕ್ ಸೂಚನೆಗಳನ್ನ ನೀಡಿದ್ದಾರೆ.

ಚಾಮರಾಜನಗರ ಡಿಸಿ ಶಿಲ್ಪನಾಗ್ ನೇತೃತ್ವದಲ್ಲಿ ಚಿಕ್ಕಲ್ಲೂರು ಜಾತ್ರ ಮಹೋತ್ಸವದ ಪೂರ್ವ‌ ಸಿದ್ದತಾ ಸಭೆ ನಡೆಯಿತು ಸಭೆಯಲ್ಲಿ ಮಾತನಾಡಿದ ಡಿಸಿ ಶಿಲ್ಪನಾಗ್, ಜಾತ್ರೆಗೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಕೊರತೆಯಾಗದಂತೆ ಒದಗಿಸಬೇಕು. ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

ಲಕ್ಷಾಂತರ ಭಕ್ತಾದಿಗಳು ಜಾತ್ರೆಗೆ ಆಗಮಿಸುವ ಹಿನ್ನೆಲೆ ಹಲವು ಭಾಗಗಳಿಗೆ ಕೆಎಸ್ಆರ್ಟಿಸಿ ಬಸ್ ನಿಯೋಜನೆ ಮಾಡಬೇಕು. ನಿಗದಿತ ಸ್ಥಳದಲ್ಲಿ ಬಸ್, ವಾಹನಗಳ ನಿಲುಗಡೆಗೆ ಸ್ಥಳ ಗೊತ್ತು ಮಾಡಬೇಕು. ಸಂಚಾರ ಮಾರ್ಗಗಳ ಬಗ್ಗೆ ಮೊದಲೇ ಮಾಹಿತಿ ನೀಡಬೇಕು. ಅಗತ್ಯವಿರುವೆಡೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ಇತರೆ ವಾಹನಗಳ ಸುಗಮ ಸಂಚಾರಕ್ಕೂ ಅಗತ್ಯ ಕ್ರಮ ವಹಿಸಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ಡಿಸಿ ಶಿಲ್ಫನಾಗ್ ಸೂಚನೆ ನೀಡಿದರು.

ಕ್ಷೇತ್ರ ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕು. ಗುಣಮಟ್ಟದ ಕೆಲಸ ಆಗಬೇಕು. ಅಧಿಕಾರಿಗಳು ಖುದ್ದು ಸ್ಥಳದಲ್ಲಿದ್ದು ಪರಿಶೀಲಿಸಬೇಕು. ಇತರೆ ಕೆಲಸಗಳಿಗೂ ಆದ್ಯತೆ ನೀಡಿ ಜಾತ್ರೆಗೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು. ಜಾತ್ರಾ ಸಮಯದಲ್ಲಿ ಸ್ವಚ್ಚತೆಗೆ ವಿಶೇಷ ಗಮನ ನೀಡಿ, ಪ್ರತಿ ದಿನವು ನೈರ್ಮಲ್ಯ ಕಾಪಾಡಿ. ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿ.  ವಿಶೇಷವಾಗಿ ಪಂಚಾಯತ್ ಅಧಿಕಾರಿಗಳು ಸುವ್ಯವಸ್ಥಿತವಾಗಿ ಸ್ವಚ್ಚತಾ ಕಾರ್ಯಕ್ಕೆ ಸಕಲ ವ್ಯವಸ್ಥೆಯನ್ನು ಮಾಡಬೇಕು. ಹೆಚ್ಚು ಜನರು ಸೇರುವುದರಿಂದ ಆರೋಗ್ಯದ ಹಿತದೃಷ್ಠಿಯಿಂದ ಮಾಸ್ಕ್ ಗಳನ್ನು ಧರಿಸುವುದು ಒಳಿತು.  ಆರೋಗ್ಯ ಸಂಬಂಧಿ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ ನೋಡಿಕೊಳ್ಳಬೇಕಿದೆ. ಕ್ಷೇತ್ರದಲ್ಲಿಯೇ ಆರೋಗ್ಯ ಕೇಂದ್ರ ತೆರೆಯಬೇಕು ಎಂದು ಡಿಸಿ ಶಿಲ್ಪನಾಗ್ ತಿಳಿಸಿದರು.

ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ಜಾತ್ರೆ ಆವರಣದಲ್ಲಿ ಯಾವುದೇ ವಿದ್ಯುತ್ ಅವಘಡಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಭಕ್ತಾಧಿಗಳಿಗೆ ಚಿಕ್ಕಲ್ಲೂರು ಮಠದ ವತಿಯಿಂದಲೂ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಪೊಲೀಸ್ ಬಂದೋಬಸ್ತ್ ನಿರ್ವಹಣೆಗಾಗಿ ಚೆಕ್‍ಪೋ ಸ್ಟ್ ಗಳ ಸ್ಥಾಪನೆ, ಬ್ಯಾರಿಕೇಡ್‍ಗಳ ಅಳವಡಿಕೆ ಮಾಡಬೇಕು. ಜಾತ್ರಾ ಸಂಬಂಧ ನೀಡಲಾಗುವ ಸೂಚನೆ ಆದೇಶಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಅಧಿಕಾರಿ ವರ್ಗಕ್ಕೆ ಜಿಲ್ಲಾಧಿಕಾರಿ ಶಿಲ್ಪನಾಗ್ ಸೂಚನೆ ನೀಡಿದರು.

ಪೂರ್ವ ಸಿದ್ದತಾ ಸಭೆಯಲ್ಲಿ ಎಸ್.ಪಿ ಪದ್ಮಿನಿ ಸಾಹು, ತಹಶೀಲ್ದಾರ್ ಮಂಜುಳ, ತಾಲೂಕು ಪಂಚಾಯತ್ ಸಿಇಓ ಶ್ರೀನಿವಾಸ್, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಚಿಕ್ಕಲ್ಲೂರು ಮಠದ ಜ್ಞಾನಾನಂದ ಚನ್ನರಾಜೇ ಅರಸ್, ಬಿ.ಪಿ ಭರತರಾಜೇ ಅರಸ್, ಸನ್ಮತಿ ಅರಸ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Key words: All -preparations – Chikallur -fair festival-DC-Shilpanag – instructs