ಸಿಎಂ ಪ್ರಮಾಣವಚನ ಹಿನ್ನೆಲೆ: ಸಿಇಟಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪ್ರಾಧಿಕಾರ ಕ್ರಮ, ಊಟದ ವ್ಯವಸ್ಥೆ..

ಬೆಂಗಳೂರು,ಮೇ,19,2023(www.justkannada.in):  ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಸಮಾರಂಭ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ಸುತ್ತಮುತ್ತಲಿನ ಕಾಲೇಜುಗಳಲ್ಲಿ ಸಿಇಟಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ.

ಮುಖ್ಯವಾಗಿ, ಕಾರ್ಯಕ್ರಮ ನಡೆಯಲಿರುವ ಸ್ಥಳಕ್ಕೆ ಸಮೀಪದಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವವರು ಬೆಳಿಗ್ಗೆ 8.30ರ ಹೊತ್ತಿಗೆ ಪರೀಕ್ಷಾ ಕೇಂದ್ರಗಳನ್ನು ತಲುಪಬೇಕು ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಧ್ಯಾಹ್ನ ನಡೆಯಲಿರುವ ಗಣಿತದ ಪರೀಕ್ಷೆ ಮಾತ್ರ ಬರೆಯುತ್ತಿರುವವರು ಸಹ ಪರೀಕ್ಷಾ ಕೇಂದ್ರಗಳನ್ನು ಬೆಳಿಗ್ಗೆಯೇ ತಲುಪುವುದು ಒಳ್ಳೆಯದು. ಏಕೆಂದರೆ, ಪ್ರಮಾಣವಚನ ಸಮಾರಂಭದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಂಭವವಿದೆ ಎಂದಿದ್ದಾರೆ.

ಒಂದು ವೇಳೆ ಅಭ್ಯರ್ಥಿಗಳು ಸಂಚಾರ ದಟ್ಟಣೆಗೆ ಸಿಲುಕಿಕೊಂಡಲ್ಲಿ ಪರೀಕ್ಷಾ ಪ್ರವೇಶಪತ್ರವನ್ನು ಪೊಲೀಸರಿಗೆ ತೋರಿಸಿದರೆ ಅಂತಹವರನ್ನು ಆದಷ್ಟು ಬೇಗ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಅಗತ್ಯ ವ್ಯವಸ್ಥೆ ಮಾಡಿಕೊಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜತೆಗೆ, ವಿಠಲ ಮಲ್ಯ ರಸ್ತೆಯಲ್ಲಿನ ಸೆಂಟ್ ಜೋಸೆಫ್ಸ್ ಇಂಡಿಯನ್ ಪಿಯು ಕಾಲೇಜು ಕಂಠೀರವ ಕ್ರೀಡಾಂಗಣಕ್ಕೆ ತುಂಬಾ ಹತ್ತಿರದಲ್ಲಿದೆ. ಹೀಗಾಗಿ ಈ ಕೇಂದ್ರದಲ್ಲಿ ಸಿಇಟಿ ಬರೆಯುತ್ತಿರುವವರಿಗೆ ಮಾತ್ರ ಬೆಳಗ್ಗೆ ಉಪಾಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕೆಳಕಂಡ ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಬರೆಯುವವರು ಬೆಳಿಗ್ಗೆ 8.30ಕ್ಕೆ ಬರಲು ಸೂಚನೆ:

* ಬಿಷಪ್ ಕಾಟನ್ ಮಹಿಳಾ ಪದವಿಪೂರ್ವ ಕಾಲೇಜು, 3ನೇ ಅಡ್ಡರಸ್ತೆ, ಸಿಎಸ್ಐ ಕಾಂಪೌಂಡ್.

* ಗುಡ್ ವಿಲ್ ಬಾಲಕಿಯರ ಪದವಿಪೂರ್ವ ಕಾಲೇಜು, ಪ್ರೊಮೆನೇಡ್ ರಸ್ತೆ, ಫ್ರೇಸರ್ ಟೌನ್.

* ಸೆಂಟ್ ಜೋಸೆಫ್ಸ್ ಪದವಿಪೂರ್ವ ಕಾಲೇಜು, ರೆಸಿಡೆನ್ಸಿ ರಸ್ತೆ.

* ಸೆಂಟ್ ಜೋಸೆಫ್ಸ್ ಇಂಡಿಯನ್ ಪಿಯು ಕಾಲೇಜು, ವಿಠಲ್ ಮಲ್ಯ ರಸ್ತೆ.

* ಸೆಂಟ್ ಆ್ಯನ್ಸ್ ಬಾಲಕಿಯರ ಪಿಯು ಕಾಲೇಜು, ಮಿಲ್ಲರ್ಸ್ ರಸ್ತೆ.

* ಆರ್. ಬಿ.ಎ.ಎನ್.ಎಂ.ಎಸ್ ಪಿಯು ಕಾಲೇಜು, ಅಣ್ಣಾಸ್ವಾಮಿ ಮೊದಲಿಯಾರ್ ರಸ್ತೆ.

* ಎಸ್.ಜೆ.ಆರ್.ಸಿ. ಬಿಐಎಫ್ಆರ್ ಪಿಯು ಕಾಲೇಜು, ಆನಂದರಾವ್ ವೃತ್ತ.

* ಕ್ಯಾಥೆಡ್ರಲ್ ಕಾಂಪೋಸಿಟ್ ಪಿಯು ಕಾಲೇಜು, ರಿಚ್ಮಂಡ್ ರಸ್ತೆ.

* ಸೆಂಟ್ ಯುಫ್ರಿಶಿಯಸ್ ಬಾಲಕಿಯರ ಪ್ರೌಢಶಾಲೆ ಮತ್ತು ಕಾಂಪೋಸಿಟ್ ಪಿಯು ಕಾಲೇಜು, ಆಲ್ಬರ್ಟ್ ಸ್ಟ್ರೀಟ್, ರಿಚ್ಮಂಡ್ ಟೌನ್.

* ಸ್ಟ್ರೇಸಿ ಮೆಮೋರಿಯಲ್ ಕಾಂಪೋಸಿಟ್ ಪಿಯು ಕಾಲೇಜು, ಸೆಂಟ್ ಮಾರ್ಕ್ಸ್ ರಸ್ತೆ.

* ಹಸನತ್ ಮಹಿಳಾ ಪಿಯು ಕಾಲೇಜು, ಡಿಕನ್ಸನ್ ರಸ್ತೆ.

Key words: CM- swearing- Oath- traffic­ – CET- students