ನನಗೂ ಏಪ್ರಾನ್ ಹಾಕೊಂಡು, ಸ್ಟೆಥಸ್ಕೋಪ್ ಕುತ್ತಿಗೆಗೆ ಹಾಕಿಕೊಂಡು ಓಡಾಡ್ಬೇಕು ಅನ್ನೋ ಆಸೆ ಇತ್ತು, ಮೆಡಿಕಲ್ ಸೀಟೇ ಸಿಗಲಿಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು, ಆಗಸ್ಟ್ 29, 2023 (www.justkannada.in): ಮನುಷ್ಯನ ಪ್ರಾಣ ಅಮೂಲ್ಯವಾದದ್ದು. ವೈದ್ಯರು ಮನುಷ್ಯನ ಪ್ರಾಣ ಉಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು ಆಗ ವೃತ್ತಿ ಗೌರವವನ್ನು ಉಳಿಸಿದಂತೆ ಆಗುತ್ತದೆ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಇಲ್ಲಿ ಹಮ್ಮಿಕೊಂಡಿದ್ದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ  ಲೋಗೋ  ಅನಾವರಣಗೊಳಿಸಿ  ಅವರು ಮಾತನಾಡಿದರು.

ಕೆ ಆರ್ ಆಸ್ಪತ್ರೆ ಆವರಣದಲ್ಲಿ ಎಂ ಆರ್ ಐ ಘಟಕವನ್ನು ಹಾಗೂ ನವೀಕರಣಗೊಂಡ ಸುಟ್ಟ ಗಾಯಗಳ ಘಟಕವನ್ನು ಉದ್ಘಾಟಿಸಲಾಗಿದೆ. ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಗೆ 100 ವರ್ಷ ತುಂಬಿರುವುದು ಸಂತೋಷದ ವಿಷಯ. ನನಗೂ ಮೆಡಿಕಲ್ ಓದುವ ಆಸೆ ಇತ್ತು. ಆದರೆ ನನಗೆ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಸಿಗಲಿಲ್ಲ. ಆಗ ನನಗೆ ಮೆಡಿಕಲ್ ಪ್ರವೇಶ ಸಿಕ್ಕಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಾ ಇರಲಿಲ್ಲ ಅನಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ನಾವು ಯಾವುದೇ ಕೆಲಸದಲ್ಲಿ ನಿಷ್ಟೆಯಿಂದ ಬದ್ಧತೆಯಿಂದ ಕಾರ್ಯ ನಿರ್ವಹಿಸಿ ದರೆ ಮೇಲೆ ಬರಲು ಸಾಧ್ಯ. ವೃತ್ತಿ ಗೌರವವನ್ನು ಕಾಪಾಡಿಕೊಳ್ಳಬೇಕು.  ಆ ವೃತ್ತಿಯನ್ನು ಗೌರವಿಸಿ ಪ್ರೀತಿಸಬೇಕು ಆಗ ಜನ ಮನ್ನಣೆ ಗಳಿಸಲು ಸಾಧ್ಯ. ವೈದ್ಯ ವೃತ್ತಿ ಶ್ರೇಷ್ಠವಾದದ್ದು. ತಮ್ಮ ವಿದ್ಯಾರ್ಥಿ ಜೀವನದ ಆಸೆಯನ್ನು ನೆನಪಿಸಿಕೊಂಡ ಮುಖ್ಯಮಂತ್ರಿಗಳು, “ನನಗೂ ಏಪ್ರಾನ್ ಹಾಕೊಂಡು, ಸ್ಟೆಥಸ್ಕೋಪ್ ಕುತ್ತಿಗೆಗೆ ಹಾಕಿಕೊಂಡು ಓಡಾಡ್ಬೇಕು ಅನ್ನೋ ಆಸೆ ಇತ್ತು. ಕೆ.ಆರ್.ಮೆಡಿಕಲ್ ಕಾಲೇಜಿನ ಕ್ಯಾಂಟೀನ್ ಗೆ ನಾನು ಹೈಸ್ಕೂಲ್ ಓದುವಾಗ ಬರುತ್ತಿದ್ದೆ. ಆಗೆಲ್ಲಾ ನನಗೆ ಈ ಆಸೆ ಬರುತ್ತಿತ್ತು. ಆದರೆ ನನಗೆ ಮೆಡಿಕಲ್ ಸೀಟೇ ಸಿಗಲಿಲ್ಲ. ಸೀಟು ಸಿಕ್ಕಿದ್ದರೆ ವೈದ್ಯನಾಗುತ್ತಿದ್ದೆ, ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ನೆನಪಿಸಿಕೊಂಡರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಂದಿನ ಮೈಸೂರು ರಾಜ್ಯಕ್ಕೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಅವರೇ ಮೆಡಿಕಲ್ ಕಾಲೇಜನ್ನು 1924 ರಲ್ಲಿ ಪ್ರಾರಂಭ ಮಾಡಿದರು. ಅದಕ್ಕೂ ಮೊದಲು ಡಾಕ್ಟರ್ ಓದಲು ಮದ್ರಾಸ್ ಗೆ ಹೋಗಬೇಕಿತ್ತು. ಇಲ್ಲಿ ಅಧ್ಯಯನ ಮಾಡಿದವರು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಮೆಡಿಕಲ್ ಕಾಲೇಜಿನ ಶತಮಾನೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಣೆ ಮಾಡೋಣ, ಇದಕ್ಕೆ ಅಗತ್ಯವಾದ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ನನ್ನ ಅವಧಿಯಲ್ಲಿ 300  ಹಾಸಿಗೆಗಳ ಜಿಲ್ಲಾ ಆಸ್ಪತ್ರೆಯನ್ನು ಪ್ರಾರಂಭ ಮಾಡಲಾಯಿತು. ಜಯದೇವ ಆಸ್ಪತ್ರೆ ಯನ್ನು ಆರಂಭ ಮಾಡಲಾಯಿತು. ಮೈಸೂರು ಆಸ್ಪತ್ರೆ ಗಳಿಗೆ ಕೊಡಗು, ಹಾಸನ, ಮಂಡ್ಯ ಚಾಮರಾಜಗರ ಜಿಲ್ಲೆಗಳಿಂದ ಜನರು ಚಿಕಿತ್ಸೆಗೆ ಬರುತ್ತಾರೆ.  ವೈದ್ಯರು ಶ್ರದ್ದೆಯಿಂದ ಕಾಯಿಲೆಯನ್ನು ಅಧ್ಯಯನ ಮಾಡಿ ಚಿಕಿತ್ಸೆ ನೀಡಬೇಕು ಕಿವಿ ಮಾತು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ಅವರು ಮಾತನಾಡಿ  20 ಹಾಸಿಗೆಯಲ್ಲಿ ಆರಂಭವಾದ ಆಸ್ಪತ್ರೆ ಇಂದು 1100 ಹಾಸಿಗೆಗಳು ಆಸ್ಪತ್ರೆ ಯಾಗಿ ಕೆ ಆರ್ ಆಸ್ಪತ್ರೆ ಅಭಿವೃದ್ಧಿ ಆಗಿದೆ. ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯ ಇಲ್ಲಿ ದೊರೆಯುತ್ತಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಔಷಧಿ ಗೆ ಚೀಟಿ ಬರೆಯದೆ ಅಲ್ಲಿಯೇ ನೀಡಬೇಕು. ವೈದ್ಯರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಸೇವೆ ಮಾಡಬೇಕು. ವೈದ್ಯರು ಅನೇಕ ಆಡಳಿತ ಸೇವೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು

ವಿಧಾನ ಪರಿಷತ್ ನ ಸದಸ್ಯ ಡಾ. ಡಿ ತಿಮ್ಮಯ್ಯ ಮಾತನಾಡಿ, 1964 ರಲ್ಲಿ ನಾನು ಈ ಕಾಲೇಜಿನಲ್ಲಿ ಎಂ ಬಿ ಬಿ ಎಸ್ ಅಧ್ಯಯನಕ್ಕೆ ಸೇರಿ 1970 ರಲ್ಲಿ ಅಧ್ಯಯನ ಮುಗಿಸಿದೆ. ನನ್ನ ಅಧ್ಯಯನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ್ ಅರಸು ಅವರು ಸಹಾಯ ಮಾಡಿದರು. ಅಧ್ಯಯನ ಮುಗಿದ ನಂತರ ಮೆಡಿಕಲ್ ಆಫೀಸರ್ ಆಗಿ ನೇಮಕ ಮಾಡಿದರು. ನನ್ನ 40 ನೆ ವಯಸ್ಸಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆಗಿ ನೇಮಕ ಅದೆ.  ಆಗ ಮೈಸೂರು ಜಿಲ್ಲೆ ಆರೋಗ್ಯ ಸೇವೆಯಲ್ಲಿ 8 ಸ್ಥಾನದಲ್ಲಿ ಇತ್ತು. ತಮ್ಮ ಬಳಿ ಬರುವ ರೋಗಿಗಳಿಗೆ ತಮ್ಮ ಸಂಬಂಧಿಕರು ಎಂದು ತಿಳಿದು ಚಿಕಿತ್ಸೆ ನೀಡಿ ಎಂದು  ವೈದ್ಯರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡ ಅವರು ಮಾತನಾಡಿ ಮಹಾರಾಜರು ವೈದ್ಯಕೀಯ ಕಾಲೇಜು, ಕೆ ಆರ್ ಆಸ್ಪತ್ರೆ ನೀಡಿದರು. ಸಿದ್ದರಾಮಯ್ಯ ಅವರು ಇವುಗಳ ಅಭಿವೃದ್ಧಿಗೆ ಅನುದಾನ ನೀಡಿದರು. ಮಾನ್ಯ ಮುಖ್ಯಮಂತ್ರಿ ಗಳು ಹಸಿದವರಿಗೆ ಅನ್ನ ಭಾಗ್ಯ ನೀಡಿದರು. ನಮ್ಮ ಸರ್ಕಾರ ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದೆ.   ಮೈಸೂರು ಜಿಲ್ಲೆಗೆ ನೆಫ್ರಾಲಾಜಿ ಸೆಂಟರ್ ಹಾಗೂ ಕಿದ್ವಾಯಿ ಆಸ್ಪತ್ರೆ ನೀಡಬೇಕು ಎಂದು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದರು.

ಶಾಸಕರಾದ ಡಿ ರವಿಶಂಕರ್, ಅನಿಲ್ ಕುಮಾರ್ ಸಿ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ ಡಿ ಪಿ ನಾಮ ನಿರ್ದೇಶಿತ ಸದಸ್ಯರಾದ ಯತಿಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿಗಳಾದ ಡಾ ಕೆ ವಿ ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಿ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಸುಜಾತ ರಾಥೋಡ್,  ವೈದ್ಯಕೀಯ ಕಾಲೇಜಿನ ಡೀನ್ ದ್ರಾಕ್ಷಾಯಿನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.