ಮೈಸೂರು,ನವೆಂಬರ್,10,2025 (www.justkannada.in): ಹುಲಿ-ಆನೆಗಳು ಅರಣ್ಯದಿಂದ ಹೊರಗೆ ಬರಲು ಏನು ಕಾರಣ ? ವೈಜ್ಞಾನಿಕ ಕಾರಣ ನೀಡಿ. ವೈಜ್ಞಾನಿಕ ಮಾರ್ಗದಲ್ಲಿ ಪರಿಣಾಮಕಾರಿ ಪರಿಹಾರ ಕಂಡು ಹಿಡಿಯುವ ತುರ್ತು ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿ ಪರಿಹಾರ ಕ್ರಮಗಳನ್ನು ಸೂಚಿಸಿದರು.
ಇಂದು ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾನವ-ಹುಲಿ ಸಂಘರ್ಷದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಡಿನಲ್ಲಿರುವ ನೀರಿನ ಗುಂಡಿಗಳನ್ನು ತುಂಬಿಸಬೇಕು, ಲಾಂಟೆನಾ ತೆಗೆಸಬೇಕು.ಅರಣ್ಯದಲ್ಲಿ ಮೇವು ಬೆಳೆಸಬೇಕು, ಆನೆ, ಹುಲಿಗಳು ಹೊರಗೆ ಬರುವ ಬಗ್ಗೆ ನಿರಂತರ ನಿಗಾ ವಹಿಸಬೇಕು . ಅರಣ್ಯ ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಪ್ರತ್ಯೇಕವಾದ ಸಭೆ ಕರೆಯುತ್ತಿದ್ದೇವೆ. ಸಮಗ್ರ ಮಾಹಿತಿ ಮತ್ತು ಪರಿಹಾರದ ಬಗ್ಗೆ ಅಧ್ಯಯನ ನಡೆಸಿ ಪೂರ್ತಿ ಸಿದ್ಧತೆಯೊಂದಿಗೆ ಸಭೆಗೆ ಬರಬೇಕು ಎಂದು ಸೂಚಿಸಿದರು.
ಈಗಾಗಲೇ ಹೆಲ್ಪ್ ಲೈನ್ ತೆರೆಯಲಾಗಿದೆ. ಕಮಾಂಡ್ ಸೆಂಟರ್ ತೆರೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಅರಣ್ಯ ಹಕ್ಕು ಕಾಯ್ದೆಗೆ ಬಂದಿರುವ 7000 ಅರ್ಜಿಗಳಲ್ಲಿ 5900 ಅರ್ಜಿಗಳು ತಿರಸ್ಕರಿಸಲ್ಪಟ್ಟಿರುವುದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.
ಇವು 2019-20 ರಿಂದ ತಿರಸ್ಕರಿಲ್ಪಟ್ಟ ಅರ್ಜಿಗಳು. ತಿರಸ್ಕರಿಸುವಾಗ ಸ್ಪಷ್ಟವಾದ, ನೈಜವಾದ ಕಾರಣ ನೀಡದಿದ್ದರೆ ಅಂತಹ ಅರ್ಜಿಗಳನ್ನು ಮರುಪರಿಶೀಲನೆಗೆ ಸ್ವೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಹಾಡಿಗಳು, ಅರಣ್ಯವಾಸಿಗಳ ವಿಚಾರದಲ್ಲಿ ಅಂತಃಕರಣದಿಂದ ವರ್ತಿಸಿ: ಸಿ.ಎಂ ಸೂಚನೆ
ಹಾಡಿಗಳಿಗೆ ಕುಡಿಯುವ ನೀರು, ವಿದ್ಯುತ್ ಸಮರ್ಪಕವಾಗಿ ಆಗುತ್ತಿದೆಯೇ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ, ಹಾಡಿಗಳು, ಅರಣ್ಯವಾಸಿಗಳ ವಿಚಾರದಲ್ಲಿ ಅಂತಃಕರಣದಿಂದ ವರ್ತಿಸಿ ಎನ್ನುವ ಸೂಚನೆ ನೀಡಿದರು.
ACF ಮತ್ತು RFO ಗಳ ನಡುವೆ ಹೊಂದಾಣಿಕೆ ಇಲ್ಲ: ಅನಿಲ್ ಚಿಕ್ಕಮಾದು
ಹೆಚ್.ಡಿ.ಕೋಟೆಯಲ್ಲಿ ACF ಮತ್ತು RFO ಗಳ ನಡುವೆ ಹೊಂದಾಣಿಕೆ ಇಲ್ಲದಿರುವುದರಿಂದ ಸಮಸ್ಯೆಗಳು ಹೆಚ್ಚಾಗಿವೆ ಎಂದು ಶಾಸಕ ಅನಿಲ್ ಚಿಕ್ಕಮಾದು ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಅಧಿಕಾರಿಗಳ ಹೊಂದಾಣಿಕೆ ಕೊರತೆಯಿಂದ, ಕರ್ತವ್ಯಲೋಪದಿಂದ ಮಾನವ ಜೀವ ಹಾನಿ ಆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದರು.
Key words: discussion, human-tiger, conflict, CM Siddaramaiah, Mysore







