ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಗುಣಮಟ್ಟ ಕಾಪಾಡಿ-ಸಿಎಂ ಸಿದ್ದರಾಮಯ್ಯ ಸೂಚನೆ

ಮೈಸೂರು, ಮೇ, 14,2026 (www.justkannada.in):  ಮೈಸೂರು ನಗರದ ಅಭಿವೃದ್ಧಿ ಕಾಮಗಾರಿಗಳು ನಿಗಧಿತ ಅವಧಿಯಲ್ಲಿ ಪೂರ್ಣಗೊಳ್ಳುವ ಜೊತೆಗೆ ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಮೈಸೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿವೀಕ್ಷಣೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೆಪಿಟಿಸಿಎಲ್ ನ ವತಿಯಿಂದ ಸುಮಾರು 871 ಕಿ.ಮೀ. ಕೇಬಲ್ ಗಳನ್ನು ಹಾಕಲಾಗುತ್ತಿದ್ದು, ಇದುವರೆಗೆ 277 ಕಿ.ಮೀ.ಪೂರ್ಣಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂಧ ಮೈಸೂರು ನಗರದ ಸೌಂದರ್ಯೀಕರಣಕ್ಕೆ ಸಹಕಾರಿಯಾಗಿದೆ ಎಂದರು.

ಮಹಾರಾಣಿ ಕಾಲೇಜಿನ ವಿದ್ಯಾರ್ಥಿ ನಿಲಯಗಳಿಗೆ ಸೂಕ್ತ ಸ್ಥಳಾವಕಾಶವಿರದ ಕಾರಣ, ಪ್ರಸ್ತುತ 1400 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೊಸ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗುತ್ತಿದೆ ಎಂದರು.

ರಸ್ತೆಗಳ ವೈಟ್ ಟಾಪಿಂಗ್

ನಗರದಲ್ಲಿ ಸುಮಾರು 50 ಕಿ.ಮೀ.ನ ರಸ್ತೆಯಲ್ಲಿ  ವೈಟ್ ಟಾಪಿಂಗ್ ಮಾಡಲಾಗುತ್ತಿದ್ದು, ಇಂತಹ ರಸ್ತೆಗಳು ಸುಮಾರು 30 ವರ್ಷಗಳ ವರೆಗೆ ಸಂಚಾರಯೋಗ್ಯವಾಗಿರುತ್ತವೆ. ಮೊದಲನೇ ಹಂತದಲ್ಲಿ 4 ಪಥವಿರುವ ರಸ್ತೆಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಎರಡನೇ ಹಂತದಲ್ಲಿ ಉಳಿದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಮಾಡಲಾಗುವುದು. ಈ ರಸ್ತೆ ಕಾಮಗಾರಿಯಿಂದ ನಗರದಲ್ಲಿ ಸುಗಮ ಸಂಚಾರ ಹಾಗೂ ವಾಹನ ದಟ್ಟಣೆ ಸಮಸ್ಯೆ ಪರಿಹಾರವಾಗಲಿದೆ  ಎಂದರು.

ಬಿಜೆಪಿ ಅಭಿವೃದ್ಧಿ ಕೈಗೊಳ್ಳಲಿಲ್ಲ

ಮೈಸೂರಿನ ರಸ್ತೆಗಳು, ಒಳಚರಂಡಿ ವ್ಯವಸ್ಥೇ ಸೇರಿದಂತೆ  ಎಲ್ಲ ಅಭಿವೃದ್ದಿ ಕಾರ್ಯಗಳನ್ನು ನಮ್ಮ ಸರ್ಕಾರವೇ ಕೈಗೊಂಡಿದ್ದು, ಬಿಜೆಪಿಯವರು ಕೇವಲ ಸರ್ಕಾರವನ್ನು ವಿರೋಧಿಸುವ, ಟೀಕಿಸುವ, ಸುಳ್ಳು ಹೇಳುವ ಕೆಲಸದಲ್ಲಿ ನಿರತವಾಗಿದೆ. ಜನರಿಗೆ ಅನುಕೂಲ ಕಲ್ಪಿಸುವ ಯಾವುದೇ ಯೋಜನೆಗಳನ್ನು ಬಿಜೆಪಿಯು ತನ್ನ ಅಧಿಕಾರಾವಧಿಯಲ್ಲಿ ಕೈಗೊಳ್ಳಲಿಲ್ಲ ಎಂದರು.

ಮೈಸೂರು ನಗರದಲ್ಲಿ ದೇವರಾಜ ಮಾರ್ಕೆಟ್, ಲ್ಯಾನ್ಸ್‌ಡೌನ್ ಕಟ್ಟಡಗಳ ಪಾರಂಪರಿಕ ವಿನ್ಯಾಸವನ್ನು ಕಾಯ್ದುಕೊಂಡು ನಿರ್ಮಿಸುವ ಉದ್ದೇಶವಿದ್ದರೂ, ಈ ವಿಷಯ ಕೋರ್ಟ್ ಮೆಟ್ಟಿಲೇರಿದೆ. ಆದರೂ ಈ ವಿಷಯದ ಬಗ್ಗೆ ನಾನು ಹಾಗೂ ಸ್ಥಳೀಯ ಶಾಸಕರು ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೇರಳದಲ್ಲಿ  ಮುಖ್ಯಮಂತ್ರಿಗಳ ಆಯ್ಕೆಗೆ ಪಕ್ಷದ ವರಿಷ್ಠರು, ಅಲ್ಲಿನ ರಾಜಕೀಯ ನಾಯಕರೊಂದಿಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ. ಕೇರಳಂನಲ್ಲಿ  ಮೂರು ನಾಯಕರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದು, ಅವರಲ್ಲಿ ವಿ.ಡಿ.ಸತೀಶನ್ ಅವರನ್ನು  ಕೇರಳ ಮುಖ್ಯಮಂತ್ರಿಯಾಗಿ  ಆಯ್ಕೆ ಮಾಡಲಾಗಿದೆ ಎಂದರು.

Key words: CM Siddaramaiah, inspects, development works ,Mysore city