ಬೆಂಗಳೂರು,ಫೆಬ್ರವರಿ,2,2026 (www.justkannada.in): ಶಾಸಕ ಸುನಿಲ್ ಕುಮಾರ್ ಮಾತಾಡುವಾಗ ನಾನು 2013-2018 ರವರೆಗೆ ಇದ್ದ ರೀತಿ ಇಲ್ಲ. ಅಸಹಾಯಕ ಮುಖ್ಯಮಂತ್ರಿ ಎಂದಿದ್ದಾರೆ. ನಮ್ಮ ಸಂವೇದನೆಯನ್ನ, ಆಲಿಸುವ ಗುಣವನ್ನು ಪ್ರಶ್ನೆ ಮಾಡಿದ್ದಾರೆ. ಈ ರೀತಿ ಪ್ರಶ್ನೆ ಮಾಡುವ ಅರ್ಹತೆ ನಿಮಗೆ ಇದೆಯೇ? ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ರಾಜ್ಯಪಾಲರ ಭಾಷಣದ ಮೇಲೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡುತ್ತಾ ಬಿಜೆಪಿ ಟೀಕೆಗೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ, 2013-2018 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಆಗೇನು ನೀವು ವಿರೋಧ ಪಕ್ಷದವರು ನನ್ನನ್ನು ಹೊಗಳುತ್ತಿದ್ರಾ ? ಆಗಲೂ ಟೀಕಿಸುತ್ತಿದ್ರಿ. ನಾನು ಈಗಲೂ ಆಗಿನಂತೆಯೇ ಇದ್ದೇನೆ. ಮುಂದೆಯೂ ಇರ್ತೇನೆ ಎಂದರು.
ನಾನು ಇದೇ ಸದನದಲ್ಲಿ ಕೋವಿಡ್ ಬಂದಾಗ ಜನರು ವಿಪರೀತ ಸಂಕಷ್ಟದಲ್ಲಿದ್ದಾರೆ. ಅವರ ದುಡಿಮೆಗಳೆಲ್ಲ ನಿಂತು ಹೋಗಿವೆ, ಕೊಂಡುಕೊಳ್ಳುವ ಶಕ್ತಿ ಹೊರಟು ಹೋಗಿದೆ. ಇದರಿಂದ ಆರ್ಥಿಕತೆ ಕೂಡ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಹಾಗಾಗಿ ಪ್ರತಿ ಕುಟುಂಬಕ್ಕೆ ಒಂದು ಸಾರಿ 10,000 ರೂ. ಕೊಡಿ ಅಂತ ಯಡಿಯೂರಪ್ಪನವರು ಮತ್ತು ಬೊಮ್ಮಾಯಿಯವರಿಗೆ ಹೇಳಿದ್ದೆ. ಸುನೀಲ್ ಕುಮಾರ್ ಕೂಡ ಮಂತ್ರಿಯಾಗಿದ್ದರು. ನೀವು ಒಂದು ರೂಪಾಯಿಯಾದ್ರೂ ಕೊಟ್ರಾ? ಜನ ಸಂಕಷ್ಟದ ಸುಳಿಯಲ್ಲಿದ್ದಾಗ ನಿಮ್ಮ ಸಂವೇದನೆ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದರು.
ನಿಮಗೆ ಆಕ್ಸಿಜನ್ ಕೊಟ್ಟು ರೋಗಿಗಳನ್ನು ಉಳಿಸಿಕೊಳ್ಳಲಾಗಲಿಲ್ಲ? ಆಕ್ಸಿಜನ್ ಇಲ್ಲದೆ ರೋಗಿಗಳು ವಿಲ ವಿಲ ಒದ್ದಾಡಿ ಪ್ರಾಣ ಬಿಟ್ಟಾಗ ನಿಮ್ಮ ಸಂವೇದನೆಯನ್ನೂ ಐಸಿಯುನಲ್ಲಿಟ್ಟಿದ್ರಾ? ಎಂದು ಸಿಎಂ ಸಿದ್ದರಾಮಯ್ಯ ಕುಟುಕಿದರು.
ನಾವು ಹಾಗೆ ಮಾಡಲಿಲ್ಲ. ನಮಗೆ ಸಂವೇದನೆಯಿದೆ. ನಮ್ಮ ರಾಜ್ಯವನ್ನು ಸರ್ವತೋಮುಖವಾಗಿ ಬೆಳೆಸುವ ಉದ್ದೇಶವಿದೆ. ಹಾಗಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಇದುವರೆಗೆ 1.16 ಲಕ್ಷ ಕೋಟಿಗೂ ಅಧಿಕ ಅನುದಾನ ಒದಗಿಸಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳಿಂದ ನಮ್ಮ ಜನರ ಕೊಂಡುಕೊಳ್ಳುವ ಶಕ್ತಿ ಆರೋಗ್ಯಕರವಾಗಿದೆ. ನೀವು ಬಡವರ, ಮಧ್ಯಮ ವರ್ಗದವರ ವಿರೋಧಿಗಳು ಹಾಗಾಗಿ ಇದು ನಿಮಗೆ ಕಾಣುವುದಿಲ್ಲ.
ಪಶುಪಾಲಕರ ಕುರಿ- ಮೇಕೆ, ಎತ್ತು ಎಮ್ಮೆ ಹಸು ಕೋಣ ಮರಣ ಹೊಂದಿದರೆ ಪರಿಹಾರ ಕೊಡುತ್ತಿದ್ದ ಅನುಗ್ರಹ ಯೋಜನೆಯನ್ನು ನಿಲ್ಲಿಸಿದ್ರಿ, ಕೃಷಿ ಭಾಗ್ಯ ಯೋಜನೆ ನಿಲ್ಲಿಸಿದ್ರಿ ಆಗ ನಿಮಗೆ ಸಂವೇದನೆ ಎಂಬುದು ನೆನಪಾಗಲಿಲ್ವೆ? ಆಗ ನಿಮ್ಮ ಆಡಳಿತ ಹದಗೆಟ್ಟಿರಲಿಲ್ಲವೆ? ಆಗ ದಲಿತರು ಹಿಂದುಳಿದ ವರ್ಗಗಳ ನೆನಪಾಗಿರಲಿಲ್ಲವೆ? ಎಂದು ಸಿಎಂ ಸಿದ್ದರಾಮಯ್ಯ ಚಾಟಿ ಬೀಸಿದರು.
ನಾವು ದಲಿತ ಸಮುದಾಯದ ಆತಂಕಇದು ಕೇಳಿಸಿಕೊಂಡಿದ್ದೇವೆ.ಅದಕ್ಕೆ ಸ್ಪಂದಿಸಿದ್ದೇವೆ. ಅದಕ್ಕಾಗಿಯೇ ದಲಿತರ ಭೂಮಿ ಬಲಾಢ್ಯರ ಕೈಗೆ ಹೋಗಬಾರದು ಎಂಬ ಕಾರಣದಿಂದ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ.
ಸಂವೇದನಾಶೀಲ ಸರ್ಕಾರ ಆಗಿರುವುದರಿಂದಲೇ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ರೈತರ ಮನವಿಗೆ ಮಣಿದು ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಟ್ಟಿದ್ದೇವೆ. ನಿಮ್ಮ ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ರೈತರಿಗೆ ಗೊಬ್ಬರ ಕೊಡಲಾಗದೆ ಹಾವೇರಿಯಲ್ಲಿ ಗೋಲಿಬಾರ್ ಮಾಡಿ ರೈತರನ್ನು ಕೊಂದು ಹಾಕಲಾಯಿತು. ಆದರೆ ಮುಧೋಳದಲ್ಲಿ ರೈತರ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಟ್ರ್ಯಾಕ್ಟರ್ ಮುಂತಾದ ವಾಹನ, ರೈತರ ಕಬ್ಬಿಗೆ ಬೆಂಕಿ ಹಚ್ಚಿದಾಗಲೂ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತಿದ್ದೇವೆಯೇ ಹೊರತು ನಾವು ಗೋಲಿಬಾರ್ ಮಾಡಿ ಕೊಲ್ಲಲು ಹೋಗಲಿಲ್ಲ ಎಂದರು.
ಕಬ್ಬು ಬೆಳೆಗಾರರ ಸಮಸ್ಯೆ ಬಂದಾಗಲೂ ಸಹ ಸ್ವತಃ ನಾನು ಕಾರ್ಖಾನೆಗಳ ಮಾಲೀಕರು, ರೈತ ಸಂಘಟನೆಗಳ ಮುಖಂಡರ ಜೊತೆ ಹಲವು ಸುತ್ತಿನ ಮಾತುಕತೆಗಳನ್ನು ಮಾಡಿ ಸಮಸ್ಯೆಯನ್ನು ಬಗೆಹರಿಸಲಾಯಿತು. ಇಂದು ಕಬ್ಬಿಗೆ ಸಿಗುತ್ತಿರುವ ಬೆಲೆಯಿಂದ ರೈತರಿಗೆ ಸಂತೋಷವಾಗಿದೆ.
ಹಾಗೆಯೇ, ರಾಜ್ಯದಲ್ಲಿ ದಾಖಲೆ ಪ್ರಮಾಣದ ಮುಸುಕಿನ ಜೋಳವನ್ನು ರೈತರು ಬೆಳೆದಿದ್ದಾರೆ. ಇಡೀ ದೇಶದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕುಸಿದಿತ್ತು. ಕ್ವಿಂಟಾಲ್ ಜೋಳದ ಬೆಲೆ 1500-1600 ಬಂದಾಗ ರೈತರು ಸಹಜವಾಗಿಯೇ ಆತಂಕಗೊಂಡರು. ಕೇಂದ್ರ ಸರ್ಕಾರ ಎಂಎಸ್ಪಿ ಯಲ್ಲಿ ಕ್ವಿಂಟಾಲ್ಗೆ 2400 ನಿಗದಿಪಡಿಸಿದೆ. ಆದರೆ ಮಾರುಕಟ್ಟೆಯಲ್ಲಿ 1500-1600 ಬಂದಾಗಲೂ ಕೇಂದ್ರ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ಸ್ವತಃ ರಾಜ್ಯ ಸರ್ಕಾರವೆ ಹಲವಾರು ಸಭೆಗಳನ್ನು ಮಾಡಿ ಕೆಎಂಎಫ್ ಮೂಲಕ ಖರೀದಿಸಲು ಹಾಗೂ ಎಥೆನಾಲ್ ಉತ್ಪಾದಕರು, ಪೌಲ್ಟ್ರಿ, ಪಶು ಆಹಾರ ತಯಾರಕರ ಜೊತೆ ಸಭೆ ಮಾಡಿ ಮೆಕ್ಕೆಜೋಳ ಖರೀದಿಸುವಂತೆ ಜೋಶಿಯವರಿಗೆ ನಿರ್ದೇಶನ ನೀಡಲಾಯಿತು. ಆದರೆ ಕೇಂದ್ರ ಸರ್ಕಾರದ ಆಹಾರ ಸಚಿವ ಪ್ರಹ್ಲಾದ ಜೋಶಿಯವರ ನಿಯಂತ್ರಣದಲ್ಲಿರುವ ಎಥೆನಾಲ್ ಕಂಪನಿಗಳಿಗೆ ಮೆಕ್ಕೆಜೋಳವನ್ನು ಮೇ ತಿಂಗಳಲ್ಲಿ ಹೆಚ್ಚು ಖರೀದಿಸುವಂತೆ ಮಾಡಿದರೆ ಹೊರತು, ರೈತರ ಕಷ್ಟದ ಸಮಯದಲ್ಲಿ ಸರಿಯಾಗಿ ಕೈಕೊಟ್ಟರು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಸಹಕಾರ ನೀಡದಿದ್ದಾಗಲು ಒಂದು ಕ್ವಿಂಟಾಲ್ ಜೋಳಕ್ಕೆ 250 ವರೆಗೆ ಪ್ರೋತ್ಸಾಹ ಧನದ ನೀಡುವುದರ ಮೂಲಕ ಸುಮಾರು 40 ಲಕ್ಷ ಕ್ವಿಂಟಾಲ್ ಜೋಳ ಖರೀದಿ ಮಾಡಲಾಗುತ್ತಿದೆ. ಕಳೆದ ಬಾರಿ ಮಾವಿನ ಬೆಲೆ ಕುಸಿದಿತ್ತು. ಆಗಲೂ ಸಹ ಸರ್ಕಾರ ಪಿಡಿಪಿಎಸ್ ಯೋಜನೆಯಲ್ಲಿ 41 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನ ನೀಡಿ ರೈತರ ನೆರವಿಗೆ ನಿಂತಿತು. ಅದಕ್ಕೂ ಹಿಂದಿನ ವರ್ಷಗಳಲ್ಲಿ ಕೊಬ್ಬರಿ ಬೆಲೆ ಕುಸಿದಿದ್ದಾಗ, ತೊಗರಿಗೆ ನೆಟೆ ರೋಗ ಬಂದಿದ್ದಾಗ ಸರ್ಕಾರ ರೈತರ ನೆರವಿಗೆ ನಿಂತಿತ್ತು. ಆದರೆ, ನೀವು ನಮ್ಮ ಸರ್ಕಾರಕ್ಕೆ ಸಂವೇದನೆ ಇಲ್ಲ ಎಂದು ಭಾಷಣ ಮಾಡುತ್ತೀರಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರ ಅಲ್ಲ, ಕೇಂದ್ರ ಸರ್ಕಾರ ದಿವಾಳಿ
ಸುನೀಲ್ ಕುಮಾರ್ ಅವರು ಪ್ರಕೃತಿ ವಿಕೋಪಕ್ಕೆ ಅನುದಾನ ಬಿಡುಗಡೆ ಆಗಿಲ್ಲ ಅಂತ ಹೇಳಿದ್ದಾರೆ. ಕಳೆದ ತಿಂಗಳು 250 ಕೋಟಿ ಬಿಡುಗಡೆ ಮಾಡಿದ್ದೇವೆ. ಮುಖ್ಯಮಂತ್ರಿಗಳ ವಿಶೇಷ ಅನುದಾದಡಿ 2445 ಕೋಟಿ ಬಿಡುಗಡೆ ಮಾಡಿದ್ದೇವೆ. ನಮ್ಮ ಸರ್ಕಾರ ದಿವಾಳಿ ಆಗಿಲ್ಲ. ದಿವಾಳಿ ಆಗಿರುವುದು. ಕೇಂದ್ರ ಸರ್ಕಾರ. ನಿನ್ನೆ ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ್ದಾರೆ. ಮನೆಗಳ ನಿರ್ಮಾಣಕ್ಕೆ 19,490 ಕೋಟಿ ಇದ್ದದ್ದು, ಪರಿಷ್ಕೃತ ಅಂದಾಜಿನಲ್ಲಿ 7500 ಕೋಟಿಗೆ ಇಳಿಸಿದ್ದಾರೆ. ಈ ವರ್ಷ 18650 ಕೋಟಿ ಇಟ್ಟಿದ್ದಾರೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಬಜೆಟ್ನಲ್ಲಿ 8260 ಕೋಟಿ ಇಟ್ಟು, ಪರಿಷ್ಕರಣೆ ಮಾಡಿ 6372 ಕೋಟಿ ಮಾಡಿದ್ದಾರೆ. 2026-27 ರಲ್ಲಿ 6587 ಕೋಟಿಗೆ ಇಳಿಸಿದ್ದಾರೆ. ಪಿಎಂ ಇಂಟರ್ನ ಶಿಪ್ ಪ್ರೋಗ್ರಾಂ ನಲ್ಲಿ 10831 ಕೋಟಿ ಇಟ್ಟಿದ್ದರು, ಅದನ್ನು 526 ಕೋಟಿಗೆ ಪರಿಷ್ಕರಣೆ ಮಾಡಿದ್ದಾರೆ. ಈ ವರ್ಷ 4482 ಕೋಟಿ ಇಟ್ಟಿದ್ದಾರೆ. ನೀವು ಎಲೆಕ್ಷನ್ ಸಮಯದಲ್ಲಿ ಬಹಳ ಪಿಎಂ ವಿಶ್ವಕರ್ಮ ಯೋಜನೆ 5100 ಕೋಟಿಯಿಂದ 3861 ಕೋಟಿಗೆ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Key words: CM Siddaramaiah, Session, questions, BJP







