ಬೆಂಗಳೂರು,ಮಾರ್ಚ್,26,2026 (www.justkannada.in): ನನಗೆ ರಾಜ್ಯದ ಜನರ ಪಕ್ಷದ ಹೈಕಮಂಢ್ ಬೆಂಬಲ ಇಲ್ಲದಿದ್ದರೇ ನಾನು ದಾಖಲೆಯ 17 ಬಜೆಟ್ ಮಂಡಿಸಲು ಹೇಗೆ ಸಾಧ್ಯವಾಗುತ್ತಿತ್ತು? ಎಂದು ವಿಪಕ್ಷ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ವಿಧಾನಪರಿಷತ್ ನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಿದರು. ಈ ವೇಳೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನೀವು ಮುಂದಿನ ಎರಡು ಬಜೆಟ್ ಮಂಡಿಸುವುದಾದರೆ ಮುಖ್ಯಮಂತ್ರಿಯಾಗೇ ಇರಿ ಆದರೆ ಹಣಕಾಸು ಸಚಿವರಾಗಿರುವುದು ಬೇಡ ಎಂದರು.
ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು 1994ರಲ್ಲಿ ಮೊದಲ ಬಾರಿಗೆ ಹಣಕಾಸು ಸಚಿವನಾಗಿ ಬಜೆಟ್ ಮಂಡನೆ ಮಾಡಿದ್ದೆ. ಅಲ್ಲಿಂದ ಈವರೆಗೂ ಒಟ್ಟು 17 ಬಜೆಟ್ ಮಂಡಿಸಿದ್ದೇನೆ. ಕರ್ನಾಟಕದಲ್ಲಿ ನಾನು ಮಂಡಿಸಿದಷ್ಟು ಆಯವ್ಯಯಗಳನ್ನು ಯಾರೂ ಕೂಡ ಮಂಡಿಸಿಲ್ಲ. ಇದು ಒಂದು ದಾಖಲೆ. ನನಗೆ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ರಾಜ್ಯದ ಜನತೆಯ ಆಶೀರ್ವಾದವಿದೆ. ಹೈಕಮಾಂಡ್ ನ ಬೆಂಬಲವಿದೆ. ನಾನು ರಾಜ್ಯದ ಹಿತಾಸಕ್ತಿ ಮತ್ತು ಜನಪರವಾದ ಬಜೆಟ್ ಮಂಡನೆ ಮಾಡದಿದ್ದರೆ ನನಗೆ ಇಂಥ ಅವಕಾಶ ಸಿಗುತ್ತಿತ್ತೇ ಎಂದು ಪ್ರಶ್ನಿಸಿದರು.
ನಾನು ಜನಪರವಾಗಿ ರಾಜ್ಯದ ಹಿತವನ್ನು ಕಾಪಾಡಿದ್ದರಿಂದ ನನಗೆ ಇಷ್ಟು ಅವಕಾಶ ಸಿಕ್ಕಿದೆ. ನೀವು ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
Key words: budget, support, people, CM, Siddaramaiah







