ದಾಖಲೆಗಳ ನಿರ್ಮಿಸಿದ ಭಾಗ್ಯಗಳ ಸರದಾರ..

ಬೆಂಗಳೂರು,ಫೆಬ್ರವರಿ,14,2026 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನ ಪೂರೈಸಿದ್ದು, ಈ ನಡುವೆ ಶಾಸಕಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಸಿಎಂ ಸಿದ್ದರಾಮಯ್ಯ ಅವರ ಆಡಳಿತಾವಧಿಯನ್ನ ಗುಣಗಾನ ಮಾಡಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಶಾಸಕ ಬಸವರಾಜ ರಾಯರೆಡ್ಡಿ ಹೇಳಿರುವುದಿಷ್ಟು..

ಸಾವಿರ  ದಿನಗಳ  ಪೂರೈಸಿದ  ಸಾಧನೆಗಳ  ಸರದಾರ,  ಜನಪ್ರಿಯ  ಮುಖ್ಯಮಂತ್ರಿ  ಸಿದ್ದರಾಮಯ್ಯನವರಿಗೆ  ಹಾರ್ದಿಕ  ಅಭಿನಂದನೆಗಳು.

ದಿನಾಂಕ 06.01.2026ರಂತೆ 2793 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಅವಧಿಗೆ ಮುಖ್ಯಮಂತ್ರಿಗಳಾಗಿ ಅಧಿಕಾರವಹಿಸಿದ ಸಿದ್ದರಾಮಯ್ಯನವರು ಮುಂದುವರಿಯುತ್ತಿರುವುದು ಅತ್ಯಂತ ಹರ್ಷದ ಸಂಗತಿ. ಇದೇ ರೀತಿ 20 ಮೇ 2023 ರಂದು ಎರಡನೇ ಬಾರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅವರು, 14 ಫೆಬ್ರವರಿ 2026ರಂದು 1000 ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವುದು ರಾಜ್ಯದ ಜನತೆಗೆ ಹೆಮ್ಮೆಯ ವಿಚಾರವಾಗಿದೆ.  ಭಾಗ್ಯಗಳ ಸರದಾರ ಎಂದೇ ಖ್ಯಾತಿ ಪಡೆದಿರುವ ಸಿದ್ದರಾಮಯ್ಯನವರಿಗೆ ಈ ಶುಭ ಸಂದರ್ಭದಲ್ಲಿ ತುಂಬು ಹೃದಯದ ಅಭಿನಂದನೆಗಳು.

ಮೂಲತಃ ಬಡ ರೈತ ಕುಟುಂಬದಿಂದ ಬಂದಿರುವ ಸಿದ್ದರಾಮಯ್ಯನವರು ಹಸಿವಿನ ಬೇಗೆಯನ್ನು ಸ್ವತಃ ಅನುಭವಿಸಿದವರು. ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಗಳೊಳಗೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟವರು.  ಮತ್ತು ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ಬರಲು ಇವರ ವಿಚಾರ ಧಾರೆ ಪ್ರಮುಖ ಕಾರಣವಾಗಿದೆ.

“ಜನಸೇವೆಯೇ ಜನಾರ್ಧನ ಸೇವೆ” ಎಂಬ ತತ್ವವನ್ನು ಜೀವನದ ಮಾರ್ಗದರ್ಶಕ ತತ್ವವನ್ನಾಗಿಸಿಕೊಂಡು ಅವರು ತಮ್ಮ ರಾಜಕೀಯ ಬದುಕನ್ನು ಸಾಗಿಸುತ್ತಾ, 1983ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, ಅಲ್ಲಿಂದ ಇಂದಿನವರೆಗೆ ಸತತವಾಗಿ ಎಂಟು ಬಾರಿ ಶಾಸಕರಾಗಿ, (ಒಂಭತ್ತು ಬಾರಿ ಆಯ್ಕೆಯಾಗಿ), ಸಚಿವರಾಗಿ, ಉಪಮುಖ್ಯಮಂತ್ರಿಗಳಾಗಿ, ವಿರೋಧ ಪಕ್ಷದ ನಾಯಕರಾಗಿ, ಹಾಗೂ ಮುಖ್ಯಮಂತ್ರಿಗಳಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾಯಕಯೋಗಿ.

ಶ್ರೀ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರರ ಕಾಯಕ ತತ್ವಗಳನ್ನು ಅಳವಡಿಸಿಕೊಂಡು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ವಿಶೇಷವಾಗಿ ಬಸವ ಜಯಂತಿಯಂದು ಮೊದಲ ಬಾರಿಗೆ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿರುವುದು ಹೆಮ್ಮೆಯ ವಿಷಯ. “ಕರ್ನಾಟಕ ಸರ್ಕಾರವು ‘ವಿಶ್ವಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ಮತ್ತು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಬಸವಣ್ಣನವರ ಭಾವಚಿತ ಅನಾವರಣಗೊಳಿಸಿದರು.

“ ಇವನಾರವ, ಇವನಾರವ, ಇವನಾರವ? ನೆಂದೆನಿಸದಿರಯ್ಯಾ.

“ಇವ ನಮ್ಮವ, ಇವ ನಮ್ಮವ, ಇವ ನಮ್ಮವ” ನಂದೆನಿಸಯ್ಯಾ.

”ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನನಿಸಯ್ಯಾ.”

ಎಂಬ ವಚನದ ಪರಿಪಾಲಕರಾಗಿ ತಮ್ಮ ಜೀವನದುದ್ದಕ್ಕೂ ಅವರ ನುಡಿಗಳನ್ನು ಅಳವಡಿಸಿಕೊಂಡು ಎಲ್ಲಾ ಜಾತಿ ಮತ ಪಂಥಗಳ ಜನರೊಟ್ಟಿಗೆ ನಡೆಯುತ್ತಿರುವದು ಅವರ ಜಾತ್ಯಾತೀತ ಮನೋಭಾವನೆಯನ್ನು ತೋರುತ್ತದೆ.

ಬಸವ ತತ್ವದ ಜೊತೆಗೆ ಅಂಬೇಡ್ಕರ್ ಹಾಗೂ ಸಂವಿಧಾನದ ಮೇಲೆ ಅಪಾರ ನಂಬಿಕೆ ಇಟ್ಟವರು. ಭಾರತದ ಸಂವಿಧಾನ ಶಿಲ್ಪಿ ಮತ್ತು ಅರ್ಥಶಾಸ್ತ್ರಜ್ಞರಾದ ಡಾ. ಬಿ.ಆ‌ರ್. ಅಂಬೇಡ್ಕರ್ ಅವರ ಸ್ಮರಣಾರ್ಥ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ (BASE) ವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ.    ಹಾಗೂ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆ ಅನುಗುಣವಾಗಿ ಆಯವ್ಯಯದಲ್ಲಿ ಅಭಿವೃದ್ಧಿಗಾಗಿ ಹಾಗು ಮಿಸಲಾತಿ ಮಾಡಿರುತ್ತಾರೆ.  ಇದು ಅವರ ದಲಿತ ಪರ ಕಾಳಜಿಗೆ ನಿದರ್ಶನವಾಗಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಸದಸ್ಯರ ಬಲದೊಂದಿಗೆ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯನವರ ಮಾಸ್ ಲೀಡ‌ರ್ ಶಿಪ್ ಪ್ರಮುಖ ಕಾರಣವಾಗಿದೆ. ಅದೇ ರೀತಿ  ಡಿ.ಕೆ. ಶಿವಕುಮಾರ್ ಅವರ ಸಂಘಟನೆ ಚಾತುರ್ಯ, ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನ ಹಾಗೂ ರಾಹುಲ್ ಗಾಂಧಿಯವರ ವಿಚಾರಧಾರೆಗಳು ಕೂಡಾ ಮಹತ್ವಪೂರ್ಣವಾದವುಗಳು.

ಸಂಡೂರು, ಶಿಗಾವಿ ಮತ್ತು ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿದ್ದರಾಮಯ್ಯನವರ ಜನಪರ ಯೋಜನೆಗಳನ್ನು ಮೆಚ್ಚಿ, ಆ ಮುಂಚೆ ಬಿಜೆಪಿ ಹಾಗೂ ಜೆಡಿಎಸ್ ಹಿಡಿತದಲ್ಲಿದ್ದ ಕ್ಷೇತ್ರಗಳಲ್ಲಿಯೂ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಜನಮನ್ನಣೆ ದೊರೆತಿದ್ದು ಮರೆಯುವಂತಿಲ್ಲ.

ಎರಡನೇ ಬಾರಿ ಅಧಿಕಾರಕ್ಕೆ ಬಂದ ತಕ್ಷಣ ಪಂಚ ಗ್ಯಾರಂಟಿ ಯೋಜನೆಗಳ ಐತಿಹಾಸಿಕ ನಿರ್ಧಾರ ಕೈಗೊಂಡು ಅನ್ನಭಾಗ್ಯ ಗೃಹಲಕ್ಷ್ಮಿ ಗೃಹಜ್ಯೋತಿ, ಶಕ್ತಿ ಮತ್ತು ಯುವನಿಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ 1.25 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು ರೂ. 2,000 ದಂತೆ ಇದುವರೆಗೆ ರೂ.47,773 ಕೋಟಿ ವೆಚ್ಚ ಮಾಡಲಾಗಿದೆ.

ಗೃಹಜ್ಯೋತಿ ಯೋಜನೆಯಡಿ 1.68 ಕೋಟಿ ಫಲಾನುಭವಿಗಳಿಗೆ ರೂ.18,900 ಕೋಟಿ ವೆಚ್ಚವಾಗಿದೆ.

ಅನ್ನಭಾಗ್ಯ ಯೋಜನೆಯಡಿ 4.4 ಕೋಟಿ ಫಲಾನುಭವಿಗಳು ಪುತಿ ತಿಂಗಳು 10 ಕೆಜಿ ಅಕ್ಕಿ ಪಡೆಯುತ್ತಿದ್ದಾರೆ. ಮುಂದಿನ ತಿಂಗಳಿಂದ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯ ಜೊತೆಗೆ 1 ಕಜಿ ತೊಗರಿಬೇಳೆ, 1 ಕೆಜಿ ಕಡಲೆಬೇಳೆ, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು ಹಾಗೂ 1 ಕೆಜಿ ಅಡಿಗೆ ಎಣ್ಣೆ ಕಿಟ್ ನೀಡುವ ಯೋಜನೆ ರೂಪಿಸಲಾಗಿದೆ.

ಶಕ್ತಿ ಯೋಜನೆಯಡಿ ಕಳೆದ ಎರಡೂವರೆ ವರ್ಷಗಳಲ್ಲಿ ಸುಮಾರು 680 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಿದೆ. ಇದರ ವಚ್ಚ ರೂ.8,815 ಕೋಟಿ.

ಯುವನಿಧಿ ಯೋಜನೆಯಡಿ 3.7 ಲಕ್ಷ ಫಲಾನುಭವಿಗಳಿಗೆ ರೂ.4375 ಕೋಟಿ ವೆಚ್ಚ ಮಾಡಲಾಗಿದೆ. ಈ ಎಲ್ಲಾ ಯೋಜನೆಗಳಿಂದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

2024-25ರ ಆರ್ಥಿಕ ಸಮೀಕ್ಷೆಯ ಪ್ರಕಾರ ಕರ್ನಾಟಕವು ಭಾರತದಲ್ಲೇ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದ್ದು ವಾರ್ಷಿಕ ತಲಾ ಆದಾಯ ರೂ.2,04,605 ದಾಟಿದೆ. ಕಳೆದ ದಶಕದಲ್ಲಿ ಶೇ. 93.6ರಷ್ಟು ಬೆಳವಣಿಗೆ ಸಾಧಿಸಿರುವ ರಾಜ್ಯವು ದೇಶದ ಸರಾಸರಿ ಆದಾಯಕ್ಕಿಂತ ಹೆಚ್ಚಿನ ಸಾಧನೆ ದಾಖಲಿಸಿದೆ. ಆದರೆ ಬೇರೆ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಗಳು ಇಂತಹ ಯೋಜನೆಗಳನ್ನು ಭರವಸೆ ನೀಡಿದರೂ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿವೆ.

ಕೃಷ್ಣ ಮೇಲ್ಕಂಡ ಯೋಜನೆ (UKP3) ಅಡಿಯಲ್ಲಿ ಕೃಷ್ಣ ವಾಟರ್ ಟ್ರಿಬ್ಯುನಲ್-2ನ 166 ಟಿಎಂಸಿ ನೀರಿನ ಸದ್ಬಳಕೆಗೆ 1 ಲಕ್ಷ 32 ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಒಣಭೂಮಿಗೆ 35 ಲಕ್ಷ ಹಾಗೂ ನೀರಾವರಿ ಜಮೀನಿಗೆ ₹40 ಲಕ್ಷ ಪರಿಹಾರ ನೀಡಲು ನಿರ್ಧರಿಸಿರುವುದು ಒಂದು ಐತಿಹಾಸಿಕ ನಿರ್ಧಾರ.

ಭದ್ರಾ ಮೇಲ್ಕಂಡ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೂ.5,300 ಕೋಟಿ ನೀಡುವುದಾಗಿ ಬಜೆಟ್‌ ನಲ್ಲಿ ಘೋಷಿಸಿದರೂ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ.  ಹಾಗೂ 15ನೇ ಹಣಕಾಸಿನ ಆಯೋಗದ ಶಿಫಾರಸ್ಸಿನಂತೆ ರೂ.11,495 ಕೋಟಿಗಳ ವಿಶೇಷ ಅನುದಾನ ಇದುವರೆಗೂ ನೀಡಿರುವುದಿಲ್ಲ.  ಇದಕ್ಕೆಲ್ಲಾ ಕೇಂದ್ರ ಸರ್ಕಾರದ ಅಸಹಕಾರವಿದ್ದರೂ ರಾಜ್ಯದ ಅಭಿವೃದ್ಧಿಗೆ ಹಣಕಾಸಿನ ತೊಂದರೆಯಾಗದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.   ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ.   ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ ರೂ.5,000 ಕೋಟಿ ಅನುದಾನ ನೀಡುತ್ತಿದ್ದಾರೆ.  ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ಸುಮಾರು 100 ಮುರಾರ್ಜಿ ವಸತಿ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಎಸ್‌ಸಿ/ಎಸ್‌ಟಿ ಜನರಿಗೆ ಜನಸಂಖ್ಯೆ ಆಧಾರಿತ ಅನುದಾನ ನೀಡಲು ಕಾನೂನು ತಂದು ರೂ.43 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬಜೆಟ್‌ ನಲ್ಲಿ ಮೀಸಲಿಟ್ಟಿರುವುದು ಐತಿಹಾಸಿಕ. ಆದರೆ ಕೇಂದ್ರ ಸರ್ಕಾರ ಈ ಯೋಜನೆಗೆ ಹಣ ಮೀಸಲಿಡದೆ ಅನ್ಯಾಯ ಮಾಡುತ್ತಿದೆ.

ಕೆಎಂಎಫ್ ಅಭಿವೃದ್ಧಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕೊಡುಗೆ ಅಪಾರ. ಹಾಲು ಉತ್ಪಾದಕರಿಗೆ ಪ್ರತಿ ಲೀಟ‌ರ್‌ ಗೆ ರೂ.15 ಪ್ರೋತ್ಸಾಹಧನ ನೀಡುವ ಮೂಲಕ ರೈತರ ಆದಾಯ ಹೆಚ್ಚಿಸಿದ್ದಾರೆ. ಹಾಲು ಉತ್ಪಾದಕ ಸಹಕಾರಿ ಸಂಘಗಳ ಮೂಲಸೌಕರ್ಯ ಸುಧಾರಣೆ ಮತ್ತು ನೇರ ಪಾವತಿ (DBT) ವ್ಯವಸ್ಥೆ ಬಲಪಡಿಸಲಾಗಿದೆ. ಗ್ರಾಮೀಣ ಮಹಿಳೆಯರು ಮತ್ತು ಹಾಲು ಉತ್ಪಾದಕರಿಗೆ ವಿವಿಧ ಬೆಂಬಲ ಯೋಜನೆಗಳಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸಿದೆ.

2013ರಿಂದ 2018ರವರೆಗೆ ಹಾಗೂ 2023ರಿಂದ ಇಂದಿನವರೆಗೆ ಆಡಳಿತದಲ್ಲಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಡವರ, ಮಹಿಳೆಯರ, ದೀನದುರ್ಬಲರ, ರೈತರ ಧ್ವನಿಯಾಗಿ ರಾಜ್ಯವನ್ನು ಮುನ್ನಡೆಸುತ್ತಿರುವುದು ಹೆಮ್ಮೆಯ ವಿಷಯ.

ಕೇಂದ್ರ ಸರ್ಕಾರದ ಅಸಹಕಾರ, ಮಲತಾಯಿ ಧೋರಣೆ ಇದ್ದರೂ ಹಾಗು ಪ್ರತಿ ವರ್ಷಕ್ಕೆ 2.5 ಲಕ್ಷ ಜನ ಬೆಂಗಳೂರು ನಗರಕ್ಕೆ ವಲಸೆ ಬರುತ್ತಿರುವುದರಿಂದಾಗಿ ಅನಿಯಂತ್ರಿತವಾಗಿ ಬೆಳೆಯುತ್ತಿರುವ ಬೆಂಗಳೂರಿನ ಅಭಿವೃದ್ಧಿಗೆ ರೂ.6,000 ಕೋಟಿ ಹಾಗೂ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರೂ.5,400 ಕೋಟಿ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ನೀಡದಿದ್ದರೂ ಸಹ ಸನ್ಮಾನ್ಯ ಸಿದ್ದರಾಮಯ್ಯವರು ಸಮರ್ಥವಾಗಿ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ.

ದೇಶದಲ್ಲೇ ದಾಖಲೆಯ ಅತಿ ಹೆಚ್ಚು 16 ಬಜೆಟ್ ಮಂಡಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಮುಂದಿನ ತಿಂಗಳು ದಾಖಲೆಯ 17ನೇ ಬಜೆಟ್ ಮಂಡಿಸಲು ಸಿದ್ಧರಾಗಿದ್ದು ರಾಜ್ಯದ ಜನತೆ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ಈ ಬಜೆಟ್ ಸಿದ್ಧತೆಯ ಭಾಗವಾಗಿ ನಾನು ಕೂಡಾ ಸನ್ಮಾನ್ಯರಿಗೆ ಆರ್ಥಿಕ ಸಲಹೆಗಾರರಾಗಿ ಭಾಗವಹಿಸುತ್ತಿರುವುದು ನನಗೂ ಹೆಮ್ಮೆಯ ಸಂಗತಿ.

ಇಂದು 1000 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಈ ಶುಭ ಸಂದರ್ಭದಲ್ಲಿ ಸಿದ್ದರಾಮಯ್ಯನವರಿಗೆ ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ಮುಂದಿನ ಎರಡುವರೆ ವರ್ಷಗಳ ಕಾಲ ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಿರೆಂಬ ಅಚಲ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ತಮ್ಮ ವಿಶ್ವಾಸಿ.

ಬಸವರಾಜ ರಾಯರಡ್ಡಿ,

ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು,

ಕರ್ನಾಟಕ ಸರ್ಕಾರ.

Key words: CM Siddaramaiah, leader, records.