ಕೋವಿಡ್ ವಿಚಾರದಲ್ಲಿ ಲೆಕ್ಕ ಕೇಳುವ ಮುಖ್ಯಮಂತ್ರಿಗಳೇ, ನಿಮಗೆ ಬೇಕಾದ ತನಿಖೆ ಮಾಡಿಸಿ ನಾವು ಸಿದ್ಧ-ಡಿ.ಕೆ. ಶಿವಕುಮಾರ್ ಸವಾಲ್

ಬೆಂಗಳೂರು,ಜುಲೈ,16,2022(www.justkannada.in): ‘ಕೋವಿಡ್ ಸಮಯದಲ್ಲಿ ಕಾರ್ಮಿಕರ ಪ್ರಯಾಣಕ್ಕೆ ಪಕ್ಷದ ವತಿಯಿಂದ ಸಾರಿಗೆ ಇಲಾಖೆಗೆ 1 ಕೋಟಿ ರೂ. ನೀಡಲು ಮುಂದಾದ ಬಗ್ಗೆ ಲೆಕ್ಕ ಕೇಳುವ ಮುಖ್ಯಮಂತ್ರಿಗಳೇ, ಆ ಹಣದ ವಿಚಾರದಲ್ಲಿ ನಾವು ಅಕ್ರಮ ಮಾಡಿದ್ದರೆ ನಿಮಗೆ ಬೇಕಾದ ತನಿಖೆ ಮಾಡಿಸಿ, ನಾವು ಸಿದ್ಧರಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದ  ಡಿ.ಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು, ‘ಕೋವಿಡ್ ಸಮಯದಲ್ಲಿ 1 ಕೋಟಿ ಹಣದ ವಿಚಾರವಾಗಿ ನಾನು ಲೆಕ್ಕ ಕೊಡಲಿ ಎಂದು ಮುಖ್ಯಮಂತ್ರಿಗಳು ಕೇಳಿದರಲ್ಲಾ, ಮೊದಲು ಅವರು  ಸರ್ಕಾರದ ವತಿಯಿಂದ ಮಾಡಿದ ಕೆಲಸದ ಲೆಕ್ಕ ಕೊಡಲಿ. ನಾವು ಕೊವಿಡ್ ಸಮಯದಲ್ಲಿ ಮಾಡಿದ ಕೆಲಸ, ನಮ್ಮ ಕಾರ್ಯಕರ್ತರು ಹಾಗೂ ಶಾಸಕರು ಕೊಟ್ಟಿರುವ ಹಣ ಹಾಗೂ ವೆಚ್ಚದ ವಿಚಾರದಲ್ಲಿ ಸರ್ಕಾರ ತನಗೆ ಬೇಕಾದ ಅಧಿಕಾರಿಗಳಿಂದ ತನಿಖೆ ನಡೆಸಲಿ. ನಾವು ರೈತರಿಂದ ತರಕಾರಿ ಖರೀದಿ ಮಾಡಿದ್ದರಿಂದ ಹಿಡಿದು, ಆಹಾರ ಪೊಟ್ಟಣ, ಊಟ, ಆಂಬುಲೆನ್ಸ್, ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಸತ್ತ ಕುಟುಂಬಕ್ಕೆ ತಲಾ 1 ಲಕ್ಷ ಹಣ ನೀಡಿರುವುದವರೆಗೆ ಎಲ್ಲ ವಿಚಾರಗಳ ಬಗ್ಗೆ ನಿಮಗೆ ಬೇಕಾದ ತನಿಖೆ ಮಾಡಿಸಿ ಎಂದು ಹೇಳಿದರು.

ಕೇಂದ್ರ ಸರ್ಕಾರ ಕೊಟ್ಟ 50 ಸಾವಿರ ಹಾಗೂ ನೀವು ಘೋಷಿಸಿದ 1 ಲಕ್ಷ ಹಣವನ್ನು ಫಲಾನುಭವಿಗಳಿಗೆ ತಲುಪಿಸಲು ಇಂದಿನವರೆಗೂ ಸಾಧ್ಯವಾಗಿಲ್ಲ. ಕೋವಿಡ್ ನಲ್ಲಿ ನಾವು ಏನೆಲ್ಲಾ ಕೆಲಸ ಮಾಡಿದ್ದೇವೆ ಎಂದು ಪತ್ರಿಕಾಗೋಷ್ಟಿ ಮೂಲಕ ಮಾಹಿತಿ ತಿಳಿಸುತ್ತೇನೆ. ನಾನು ಹಣ ದುರುಪಯೋಗ ಮಾಡಿದ್ದರೆ ನನ್ನ ವಿರುದ್ಧ ತನಿಖೆಗೆ ಆದೇಶಿಸಿ ಎಂದು ಡಿ.ಕೆ ಶಿವಕುಮಾರ್ ಸವಾಲು ಹಾಕಿದರು.

ಇತ್ತೀಚೆಗೆ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡಲು ನಿಮ್ಮ ಕೈಲಿ ಸಾಧ್ಯವಾಗದಿದ್ದರೆ ಇಡೀ ರಾಜ್ಯದಲ್ಲಿ ಸಿ ಎಸ್ ಆರ್ ಮೂಲಕ ಹಣ ಸಂಗ್ರಹಿಸಲು ಸಿದ್ಧವಾಗಿದ್ದೆ. ಸಂಜೆ ವೇಳೆಗೆ ಸರಕಾರವೇ ಹಣ ನೀಡುವುದಾಗಿ ಘೋಷಿಸಿತು. ಬಡ ಮಕ್ಕಳಿಗೆ ಶೂ, ಸಾಕ್ಸ್ ಕೊಡುವ ಯೋಜನೆಯನ್ನು ಈ ಸರ್ಕಾರ ಕೈ ಬಿಡಲು ಮುಂದಾಗುತ್ತದೆ ಎನ್ನುವುದಾದರೆ ಈ ಸರ್ಕಾರ ಯಾಕಿರಬೇಕು? ಎಂದು ವಾಗ್ದಾಳಿ ನಡೆಸಿದರು.

ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಇದ್ದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಕರೆಸಿಕೊಳ್ಳುತ್ತದೆ. ಬಿಜೆಪಿಯವರು ನಿನ್ನೆ ಮಾತ್ರ ಸ್ವಲ್ಪ ಧ್ವನಿ ಎತ್ತಿದ್ದಾರೆ. ಆದರೆ ಸದನದ ಕಲಾಪದಲ್ಲಿ ಮಾಧ್ಯಮಗಳನ್ನು ನಿಷೇಧಿಸಿ, ಅವರಿಗೆ ಬೇಕಾದದ್ದನ್ನು ತೋರಿಸಿ, ಬೇಡವಾಗಿದ್ದನ್ನು ಬಿಡುವ ಕೆಲಸ ಆಗುತ್ತಿದೆ. ಇದರ ವಿರುದ್ಧ ಮಾಧ್ಯಮಗಳು ಧ್ವನಿ ಯಾಕೆ ಎತ್ತಲಿಲ್ಲ? ರಾಜಕಾರಣ ಮಾಡುವ ನಾಯಕರು, ಅಧಿಕಾರಿಗಳಿಗೆ ಜನ ನಮ್ಮನ್ನು ಪ್ರಶ್ನೆ ಮಾಡುತ್ತಾರೆ ಎಂಬ ಭಯ ಇರಬೇಕು ಅಲ್ಲವೇ? ನ್ಯಾಯಾಧೀಶರು ಧ್ವನಿ ಎತ್ತಿದ ಕಾರಣಕ್ಕೆ ಅಲ್ಲವೇ ಇಂದು ದೇಶದೆಲ್ಲೆಡೆ ಚರ್ಚೆ ಆಗುತ್ತಿರುವುದು. ನಿಮ್ಮ ಕೆಲಸ ನೀವು ಮಾಡುತ್ತೀರಿ. ಎಚ್ಚರಿಕೆಯಿಂದ ಇರಬೇಕಾದವರು, ತಿದ್ದಿಕೊಳ್ಳಬೇಕಾದವರು ನಾವು. ಎಲ್ಲ ಅಧಿಕಾರಿಗಳು, ರಾಜಕಾರಣಿಗಳು, ಸಾರ್ವಜನಿಕ ಜೀವನದಲ್ಲಿ ಇರುವವರೆಲ್ಲ ಕೆಟ್ಟವರು ಎಂದು ಹೇಳುವುದಿಲ್ಲ. ಈ ಸರ್ಕಾರ ಅನೇಕ ವಿಚಾರವಾಗಿ ತನಗೆ ಬೇಕಾದ ನಿರ್ಧಾರ ತೆಗೆದುಕೊಂಡು, ನಂತರ ಅದನ್ನು ಹಿಂಪಡೆದು ತನಗೆ ತಾನೇ ಅಪಮಾನ ಮಾಡಿಕೊಳ್ಳುತ್ತಿದೆ ಎಂದು ಲೇವಡಿ ಮಾಡಿದರು.

ನಿನ್ನೆ ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಇದುವರೆಗೂ ಅವರಿಗೆ ನ್ಯಾಯ, ರಕ್ಷಣೆ ಸಿಕ್ಕಿಲ್ಲ. ಮೂರು ಮಂತ್ರಿಗಳು ಅಲ್ಲಿ ಕಾಮಗಾರಿ ಆಗಿದೆ ಎಂದು ಒಪ್ಪಿಕೊಂಡು ಹಣ ನೀಡುವುದಾಗಿ ತಿಳಿಸಿದರು, ಈವರೆಗೂ ಹಣ ನೀಡಿಲ್ಲ. ಅವರು ಮಾಡಿರುವ ಕೆಲಸಕ್ಕೆ ಹಣ ನೀಡಿ ಸ್ವಾಮಿ. ನಿಮ್ಮ ಮಂತ್ರಿ ಹೇಳಿದ್ದಕ್ಕೆ ಆತ ಕೆಲಸ ಮಾಡಿದ ಅಲ್ಲವೇ? ನಿಮ್ಮ ಮಂತ್ರಿ 40% ಕಮಿಷನ್ ಕೇಳಿದಕ್ಕೆ ಅಲ್ಲವೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದು. ಈ ರೀತಿ ಎಷ್ಟೋ ಜನ ನೊಂದು ಬೆಂದಿದ್ದಾರೆ.  ನಿಮ್ಮ 40% ಕಮಿಷನ್ ವಿರುದ್ಧ ನಾವು ಮಾತ್ರವಲ್ಲ, ಮಠಾಧೀಶರೂ ಹೇಳಿದ್ದಾರೆ. ಬೊಮ್ಮಾಯಿ ಅವರೇ ಅವರ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ? ಎಂದು ಡಿಕೆಶಿ ಪ್ರಶ್ನಿಸಿದರು.

ಪಿಎಸ್ ಐ ನೇಮಕಾತಿ ಅಕ್ರಮ ಹಾಗೂ ಪೊಲೀಸ್ ಇಲಾಖೆಯಲ್ಲಿ ಯಾವ ಹುದ್ದೆಗೆ ಎಷ್ಟು ದರ ನಿಗದಿ ಮಾಡಲಾಗಿದೆ ಎಂದು ಮಾಧ್ಯಮಗಳೇ ಪಟ್ಟಿ ಬಿಡುಗಡೆ ಮಾಡಿವೆ. ಆದರೂ ಸರ್ಕಾರ ಯಾಕೆ ಈ ವಿಚಾರವಾಗಿ ಕ್ರಮ ಕೈಗೊಂಡಿಲ್ಲ? ನಿಮ್ಮ ನಾಯಕರೇ ಪಿಎಸ್ ಐ ಹಗರಣದಲ್ಲಿ ಮಾಜಿ ಸಿಎಂ ಮಗ ಭಾಗಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರು ಭಾಗಿಯಾಗಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನಿಮ್ಮ ನಾಯಕರು ಹೇಳಿಕೆ ನೀಡಿದರೂ ತನಿಖಾಧಿಕಾರಿಗಳು ಯಾಕೆ ಅವರ ತನಿಖೆ ಮಾಡಿ ಮಾಹಿತಿ ಪಡೆದಿಲ್ಲ?

ಸರ್ಕಾರವೇ ಈ ಹಗರಣವನ್ನು ಅಧಿಕಾರಿಗಳ ಮೂಲಕ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಬಂಧಿತ ಐಪಿಎಸ್ ಅಧಿಕಾರಿಯನ್ನು ಅವರ ಬೇಡಿಕೆಯಂತೆ ಸೆಕ್ಷನ್ 164 ಅಡಿಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿ. ಯಾರೆಲ್ಲಾ ಬಂಧಿತರಾಗಿರುವವರಿಂದ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿ. ನಮ್ಮ ಕಾಲದಲ್ಲಿ ಅಕ್ರಮ ನಡೆದಿದ್ದರೆ ಅದನ್ನು ಬಹಿರಂಗಪಡಿಸಿ. ಯಾರ ಹೆಸರಾದರೂ ಬರಲಿ. ನನ್ನ ಹೆಸರು ಬಂದರೂ ನೊಟೀಸ್ ನೀಡಿ ಬಂಧಿಸಿ ಎಂದು ಡಿ.ಕೆ ಶಿವಕುಮಾರ್ ಗುಡುಗಿದರು.

ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡ ಇದ್ದು ಅಮೃತ್ ಪೌಲ್ ಮೇಲೆ ಒತ್ತಡ ಹಾಕಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ‘ ನಮ್ಮ ಜಿಲ್ಲೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಯ ವಿಚಾರಣೆಯನ್ನು ತಡೆದು, ನಂತರ 20-30 ದಿನ ನಂತರ ಅವನನ್ನು ಬಂಧಿಸಿದ್ದಾರೆ. ಇದು ನಮಗೆ ಬಂದಿರುವ ಮಾಹಿತಿ. ನಮಗೆ ಯಾವ ಯಾವ ಇಲಾಖೆಯಲ್ಲಿ ಏನೇನಾಗಿದೆ ಎಂದು ಗೊತ್ತಿದೆ. ಇತರೆ ಇಲಾಖೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಆ ಪ್ರಕರಣ ವಿಚಾರವಾಗಿ ತನಿಖೆ ಮಾಡಿಲ್ಲ ಯಾಕೆ? ಸರ್ಕಾರ, ರಾಜಕಾರಣಿ, ಮಂತ್ರಿಗಳು, ಹಿರಿಯ ಅಧಿಕಾರಿಗಳ ಕುಮ್ಮಕ್ಕು ಇಲ್ಲದೆ ಇಂತಹ ಯಾವುದೇ ಪ್ರಕರಣ ನಡೆಯಲು ಸಾಧ್ಯವಿಲ್ಲ ‘ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಅವರ ಕಾರ್ಯಕ್ರಮ ವ್ಯಕ್ತಿ ಪೂಜೆ ಅಲ್ಲವೇ ಎಂಬ ಸಚಿವ ಸುಧಾಕರ್ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ‘ ಈ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷದ ಅನುಕೂಲಕ್ಕೆ ಬೇಕಾಗಿರುವ ಕಾರ್ಯಕ್ರಮಗಳನ್ನು ನಾವು ಚರ್ಚೆ ಮಾಡಿದರೆ ಬಿಜೆಪಿ ಅವರಿಗೆ ಹೊಟ್ಟೆ ಕಿಚ್ಚು ಯಾಕೆ? ಅವರು ಏನಾದರೂ ಹೇಳಲಿ, ಅವರು ನಮ್ಮ ಪಕ್ಷದಲ್ಲಿ ಬಿರುಕು ಮೂಡಿಸಲು ಸಾಧ್ಯವಿಲ್ಲ. ಮೊದಲು ಅವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ತೆಗೆದುಹಾಕಲಿ’ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ ವಿಚಾರವಾಗಿ ಗೊಂದಲದ ಹೇಳಿಕೆ ನೀಡಲಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ, ‘ ಈ ಕುರಿತು ಯಾರನ್ನು ಪ್ರಶ್ನೆ ಮಾಡಬೇಕೋ ಅವರನ್ನು ಕೇಳಿ. ಸೋನಿಯಾ ಗಾಂಧಿ ಅವರು ನನ್ನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದು, ನನಗೆ ಕೆಲವು ಇತಿ ಮಿತಿಗಳಿವೆ. ಎಲ್ಲರೂ ಅವರವರ ಇತಿ ಮಿತಿಯಲ್ಲಿ ಕೆಲಸ ಮಾಡಲಿದ್ದಾರೆ’ ಎಂದು ಉತ್ತರಿಸಿದರು.

Key words: CM-–demand – Covid-investigation-D.K. Shivakumar