ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ.

ಹುಬ್ಬಳ್ಳಿ, ಡಿಸೆಂಬರ್ 06,2021(www.justkannada.in):  ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ  ವರಿಷ್ಠರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸದ್ಯಕ್ಕೆ ನಮ್ಮ ಮುಂದೆ ವಿಧಾನ ಪರಿಷತ್ ಚುನಾವಣೆ ಹಾಗೂ   ಬೆಳಗಾವಿ ಅಧಿವೇಶನವಿದೆ. ಈ ಕುರಿತು ವರಿಷ್ಠರ ಸಲಹೆಯಂತೆ ನಿರ್ಧರಿಸಲಾಗುವುದು ಎಂದರು.

ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಸುದ್ದಿಗಾರರ  ಪ್ರಶ್ನೆಗೆ  ಉತ್ತರಿಸಿದ ಸಿಎಂ ಬೊಮ್ಮಾಯಿ, ಜೆಡಿಎಸ್ ನಿಲುವಿನ ಬಗ್ಗೆ ಪಕ್ಷದ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಅವರು  ಹೇಳಬೇಕು ಎಂದರು.

ಬಿಜೆಪಿ ಸೇರದ ಕಾರಣ ನನ್ನನ್ನು ಜೈಲಿಗೆ ಕಳುಹಿಸಿದರು ಎಂಬ  ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತ ಪ್ರಶ್ನೆಗೆ  ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಅವರ ಎಲ್ಲಾ ಹೇಳಿಕೆಗಳಿಗೆ ನಾನು ಉತ್ತರ ನೀಡಬೇಕಿಲ್ಲ ಎಂದರು.

ಒಮಿಕ್ರಾನ್ ರೂಪಾಂತರ ತಳಿ ಪತ್ತೆ ಹಿನ್ನೆಲೆಯಲ್ಲಿ  ಮಾಲ್ ಮತ್ತು ಚಿತ್ರಮಂದಿರಗಳಲ್ಲಿ   ಶೇ 50 ರಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸಬೇಕೆಂಬ ಬಗ್ಗೆ  ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ, ಎಲ್ಲ   ಸಲಹೆಗಳನ್ನು ತಜ್ಞರ ಸಮಿತಿ ಮುಂದಿಟ್ಟು  ಅವರ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕ್ಲಸ್ಟರ್ ಗಲ್ಲಿ ಸೋಂಕು ಕಂಡು ಬಂದಿರುವೆಡೆಗಳಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದ್ದು, ಚಿಕಿತ್ಸೆಗೆ ಕ್ರಮ ವಹಿಸಲಾಗಿದೆ ಎಂದರು.

Key words: CM-Basavaraja Bommai -reaction– Cabinet- expansion.