ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಆಗಸ್ಟ್,3,2021(www.justkannada.in): ರಾಜ್ಯ  ಸಚಿವ ಸಂಪುಟ ರಚನೆಗಾಗಿ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದು ಪಕ್ಷದ ವರಿಷ್ಠರನ್ನ ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ. ಈ ಮಧ್ಯೆ ಇಂದು ಸಂಜೆ ನೂತನ ಸಚಿವರ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಸಂಸತ್ ಭವನದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಚಿವ ಸಂಪುಟ ರಚನೆಗಾಗಿ ಕಸರತ್ತು ನಡೆಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸಚಿವರಾದ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್ ಸೇರಿ ಹಲವು ನಾಯಕರನ್ನ ಭೇಟಿಯಾಗಿ ಚರ್ಚಿಸುತ್ತಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ಬರುತ್ತಿದ್ದಂತೆ ಇತ್ತ ಸಚಿವ ಸ್ಥಾನ ಪಡೆಯುವುದಕ್ಕಾಗಿ ಶಾಸಕರ ಲಾಬಿ ಜೋರಾಗಿದ್ದು ಹಲವು ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದರೇ ಇನ್ನು ಹಲವು ಶಾಸಕರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಮನವಿ ಮಾಡುತ್ತಿದ್ದಾರೆ. ಈ ನಡುವೆ ಇಂದು ಸಂಜೆಯ ವೇಳೆಗೆ ಬಿಜೆಪಿ ಹೈಕಮಾಂಡ್ ರಾಜ್ಯದ ನೂತನ ಸಚಿವರ ಪಟ್ಟಿಯನ್ನ ಬಿಡುಗಡೆ ಮಾಡುವ ಸಾಧ್ಯತೆ ಇದೆ.

Key words: CM -Basavaraja Bommai -meets – -state BJP.- in charge- Arun Singh