ಐದು ವರ್ಷಗಳಲ್ಲಿ ರಾಮನಗರ ನಗರಸಭೆ ಆಗಲಿದೆ ನಗರ ಪಾಲಿಕೆ – ಡಿಸಿಎಂ ಅಶ್ವಥ್ ನಾರಾಯಣ್ ಭರವಸೆ….

ರಾಮನಗರ,ಏಪ್ರಿಲ್,20,2021(www.justkannada.in):  ಮುಂದಿನ ಐದು ವರ್ಷಗಳಲ್ಲಿ ರಾಮನಗರ ನಗರಸಭೆಯನ್ನು ನಗರ ಪಾಲಿಕೆಯನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಪ್ರಕಟಿಸಿದರು.jk

ರಾಮನಗರ-ಚನ್ನಪಟ್ಟಣ ಅವಳಿ ನಗರಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌, ರಾಮನಗರ ಮತ್ತು ಬೆಂಗಳೂರು ನಡುವೆ ಉಪ ನಗರ ರೈಲು ಸಂಚಾರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆಯಾಗುತ್ತಿರುವ ಬೆಂಗಳೂರು ಸ್ನಾತಕೋತ್ತರ ಕೇಂದ್ರ ಶೀಘ್ರದಲ್ಲೇ ಪೂರ್ಣ ಪ್ರಮಾಣ ವಿಶ್ವವಿದ್ಯಾಲಯ ಆಗಲಿದೆ.. ಇವು ಜಿಲ್ಲೆಯ ಜನತೆಗೆ ಡಿಸಿಎಂ ಅಶ್ವಥ್ ನಾರಾಯಣ್ ನೀಡಿದ ಭರವಸೆಗಳು.

ರಾಮನಗರದಲ್ಲಿ ಮಂಗಳವಾರ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳ ಚುನಾವಣೆ ಪ್ರಚಾರಕ್ಕೆ ಚಾಲನೆ ಕೊಟ್ಟ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್; “ನಗರದ ಜನರು ಮುಂದಿನ ಚುನಾವಣೆಗೆ ನಗರ ಪಾಲಿಕೆಗೆ ಮತದಾನ ಮಾಡಲಿದ್ದಾರೆ. ಇದರಲ್ಲಿ ಎಳ್ಳಷ್ಟೂ ಅನುಮಾನ ಇಲ್ಲ” ಎಂದರು.

ಜನಸಂಖ್ಯೆ, ಅಭಿವೃದ್ಧಿ ಮತ್ತಿತರೆ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸರಕಾರ ನಗರ ಪಾಲಿಕೆ ಮಾಡುವ ಬಗ್ಗೆ ಅಗತ್ಯವಾದ ಎಲ್ಲ ಕ್ರಮ ಮತ್ತು ಸುಧಾರಣೆಗಳನ್ನು ಕೈಗೊಳ್ಳಲಿದೆ. ಹಾಗೆ ನೋಡಿದರೆ ರಾಮನಗರವು ನಗರ ಪಾಲಿಕೆ ಆಗುವ ಎಲ್ಲ ಅರ್ಹತೆಯನ್ನೂ ಹೊಂದಿದೆ ಎಂದು ಅವರು ಹೇಳಿದರು.

ನಗರ ಪಾಲಿಕೆ ಮಾಡುವುದಾಗಿ ನಾವು ಕೇವಲ ಬಾಯಿ ಮಾತಿನ ವಾಗ್ದಾನ ಮಾಡುತ್ತಿಲ್ಲ. ಇದು ಬಿಜೆಪಿಯ ಗುರಿಯೂ ಹೌದು. ಈಗಾಗಲೇ ಅದಕ್ಕೆ ಬೇಕಾದ ಎಲ್ಲ ಪೂರಕ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಉಪನಗರ ರೈಲು ಸೌಲಭ್ಯ

ರಾಮನಗರ ಮತ್ತು ಇಡೀ ಜಿಲ್ಲೆಯ ಜನರಿಗೆ ಬಹಳಷ್ಟು ಸಹಕಾರಿ ಆಗುವ ಉಪ ನಗರ ರೈಲು ಸಂಚಾರ ಆರಂಭಿಸಲಾಗುವುದು. ಬೆಂಗಳೂರಿನ 57 ರೈಲು ನಿಲ್ದಾಣಗಳನ್ನು ಸಂಪರ್ಕಿಸಬಲ್ಲ ಈ ರೈಲು ಸಂಪರ್ಕ ಯೋಜನೆ ರೇಷ್ಮೆ ನಾಡಿಗೆ ವರದಾನವಾಗಿದೆ. ಒಟ್ಟು ನಾಲ್ಕು ಕಾರಿಡಾರ್‌ಗಳಿದ್ದು ಇಲ್ಲಿಂದಲೇ ರೋಲಿಂಗ್‌ ಸೆಂಟರ್‌ ಇಲ್ಲಿಯೇ ಸ್ಥಾಪನೆಯಾಗಲಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದರು.

ಉಪ ನಗರ ವ್ಯವಸ್ಥೆ ಬರುವುದಿಂದ ಜಿಲ್ಲೆಯಲ್ಲಿ ಉದಿನವೂ, ಸೃಷ್ಟಿ ಹೆಚ್ಚುತ್ತದೆ. ಮುಖ್ಯವಾಗಿ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಬರುವ ಜನರಿಗೆ ಬಹಳ ಉಪಯೋಗವಾಗಲಿದೆ ಎಂದು ಅವರು ತಿಳಿಸಿದರು.

ಇನ್ನೂ ಮಣ್ಣು ರಸ್ತೆ ಇದೆ!

ರಾಮನಗರದಲ್ಲಿ 190 ಕಿ.ಮೀ ಉದ್ದದ ರಸ್ತೆ ಇದೆ. ಇದರಲ್ಲಿ 150 ಕಿ.ಮೀಯಷ್ಟು ರಸ್ತೆ ಡಾಂಬರೀಕರಣಗೊಂಡಿದೆ. ಉಳಿದ 40  ಕಿ.ಮೀ ರಸ್ತೆಯಲ್ಲಿ ಬರೀ ಮಣ್ಣು ಬಿಟ್ಟರೆ ಅಲ್ಲಿ ಏನೂ ಇಲ್ಲ. ಇನ್ನು ಡಾಂಬರು ರಸ್ತೆ ಕೂಡ ಪರಮ ಕಳಪೆ. ಇದೆಲ್ಲವನ್ನು ಅತ್ಯುತ್ತಮವಾಗಿ ಅಭಿವೃದ್ಧಿ ಮಾಡಲಾಗುವುದು. ಆಧುನಿಕ ಮಾನದಂಡಗಳ ಪ್ರಕಾರ ಗುಣಮಟ್ಟದ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಕೇಂದ್ರದ ಪ್ರಗತಿಯ ಬಗ್ಗೆ ಬಿಜೆಪಿಯ ಕಾರ್ಯಸೂಚಿಯನ್ನು ಅವರು ವಿವರಿಸಿದರು.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೇಳುವ ಹಾಗೆಯೇ ಇಲ್ಲ. ನಾಲ್ಕು ದಿನಕ್ಕೊಮ್ಮೆ ನೀರು ಬರುತ್ತದೆ. ಆದರೆ, ಪ್ರತಿ ದಿನವೂ, ದಿನದ 24 ಗಂಟೆ ನೀರು ಕೊಡುವ ಯೋಜನೆ ನಮ್ಮದು. ಕೆಲ ದಿನಗಳಲ್ಲಿಯೇ ನದಿಮೂಲಗಳಿಂದ ಪ್ರತಿ ಮನೆಗೂ ಪೈಪುಗಳ ಮೂಲಕ ನೀರೊದಿಗಿಸುವ ಮಹತ್ವಾಕಾಂಕ್ಷೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಜಿಲ್ಲಾ ಕೇಂದ್ರದಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲ. ಮನೆಗಳಿಂದ ಹೊರಬರುವ ತ್ಯಾಜ್ಯ ನೀರು  ಹಾದಿಬೀದಿಯಲ್ಲಿ ಹರಿದುಹೋಗುತ್ತಿದೆ. ಇದಕ್ಕಾಗಿ ಉತ್ತಮವಾದ ಒಳಚರಂಡಿ ವ್ಯವಸ್ಥೆ ನಿರ್ಮಾಣ ಆಗಿಬೇಕು. ಅದೂ ವೈಜ್ಞಾನಿಕವಾಗಿರಬೇಕು. ಇಲ್ಲಿ ಎರಡು ಕೆರೆಗಳಿದ್ದು ಅವುಗಳನ್ನು ಉತ್ತಮವಾಗಿ ಅಭಿವೃದ್ಧಿಪಡಿಸಿ ವಾಯುವಿಹಾರಕ್ಕೆ ವ್ಯವಸ್ಥೆ ಮಾಡುವ ಉದ್ದೇಶವಿದೆ. ಎಲ್ಲ ಪಾರ್ಕ್ ಗಳನ್ನು ಅಭಿವೃದ್ಧಿ ಮಾಡಲಾಗವುದು. ರಾಮನಗರದ ಜೀವಸೆಲೆಯಾದ ಅರ್ಕಾವತಿ ನದಿಯನ್ನು ಪುನರುಜ್ಜೀವನಗೊಳಿಸಲಾಗುವುದು ಎಂದರು.

ಮಾಸ್ಟರ್‌ ಪ್ಲ್ಯಾನ್‌ ಇಲ್ಲ

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೂರು ಬಡಾವಣೆಗಳನ್ನು ಮಾಡಲಾಗಿದೆ. ಇವು ಸಂಪೂರ್ಣವಾಗಿ ಅಭಿವೃದ್ಧಿಯಾಗಿಲ್ಲ. ಎಲ್ಲ ಕೆಲಸ ಅರೆಬರೆಯಾಗಿದೆ. ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಾಗುವುದು. ಇನ್ನು, ಈ ಪ್ರಾಧಿಕಾರ 1993ರಲ್ಲಿ ಸ್ಥಾಪನೆಯಾಗಿ 1994ರಲ್ಲಿ ಅಧಿಸೂಚನೆ ಹೊರಬಿತ್ತು. ಈವರೆಗೂ ಅದು ಕೊನೆ ಪಕ್ಷ ಒಂದೇ ಒಂದು ಮಾಸ್ಟರ್‌ ಪ್ಲ್ಯಾನ್‌ ಅನ್ನೂ ರೂಪಿಸಿಲ್ಲ. ಹಾಗೆಯೇ ಕೆಲಸ ಮಾಡಿಕೊಂಡು ಬರಲಾಗುತ್ತಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಗಮನ ಸೆಳೆದರು.

ಶಿಕ್ಷಣಕ್ಕೆ ಆದ್ಯತೆ

ರಾಜ್ಯವು ಜ್ಞಾನಾಧಾರಿತ ಕೈಗಾರಿಕೆಗಳಿಗೆ ಹೆಸರುವಾಸಿ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡಲು ಜಿಲ್ಲಾ ಕೇಂದ್ರದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗವುದು. ಸ್ಮಾರ್ಟ್‌ ಮ್ಯಾನಿಫ್ಯಾಕ್ಚರಿಂಗ್‌, ಜ್ಞಾನಾಧಾರಿತ ಕೈಗಾರಿಕೆ, ಪ್ರತಿಭಾಧಾರಿತ ಕೈಗಾರಿಕೆಗಳೆಂಬ ಪರಿಕಲ್ಪನೆಗಳು ಪ್ರಚಲಿತ ಕೈಗಾರಿಕೋದ್ಯಮದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಇದಕ್ಕೆ ಅಗತ್ಯವಾದ ಶಿಕ್ಷಣ ಪಡೆಯಲು ಬೇಕಾದ ವ್ಯವಸ್ಥೆಯನ್ನು ಸರಕಾರ ಮಾಡುತ್ತದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದರು.

ಬೆಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರ ರಾಮನಗರದಲ್ಲಿದ್ದು, ಕೆಲ ದಿನಗಳಲ್ಲಿಯೇ ಅದೂ ಕೂಡ ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯವನ್ನಾಗಿ ಪರಿವರ್ತನೆಯಾಗಲಿದೆ ಎಂದೂ ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

ರೇಷ್ಮೆ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಮಾವು ಸಂಸ್ಕರಣಾ ಘಟಕ ಕೂಡ ಬರಲಿದೆ. ಇದರ ಜತೆಗೆ, ಜಿಲ್ಲಾ ಕೇಂದ್ರದಲ್ಲಿ ಸ್ಮಾರ್ಟ್‌ ಮ್ಯಾನ್ಯೂಫ್ಯಾಕ್ಷರಿಂಗ್‌ ಘಟಕಗಳನ್ನು ಹೆಚ್ಚು ಹೆಚ್ಚಾಗಿ ಬರುವಂತೆ ಮಾಡಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಪ್ರಚಾರಕ್ಕೂ ಮುನ್ನ ಚಾಮುಂಡೇಶ್ವರಿ ನಗರದ ಅಮ್ಮನವರ ದೇಗುಲದಲ್ಲಿ ಡಿಸಿಎಂ  ಅಶ್ವಥ್ ನಾರಾಯಣ್ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದ ಹೊರಗೆ ಪಕ್ಷದ 21 ಆಭ್ಯರ್ಥಿಗಳಿಗೆ ಕರ್ತವ್ಯ ಮತ್ತು ಜನನಿಷ್ಠೆಯ ಪ್ರಮಾಣ ಬೋಧಿಸಿದರು.

ನಂತರ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌, ಓರ್ವ ಆಭ್ಯರ್ಥಿಯೂ ಸೇರಿದಂತೆ ಐವರ ಜತೆ ಡಿಸಿಎಂ ಅಶ್ವಥ್ ನಾರಾಯಣ್   ಮನೆ ಮನೆಗೂ ತೆರಳಿ ಮತ ಯಾಚನೆ ಮಾಡಿದರು. ಕೋವಿಡ್‌ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರಲು ನಿರ್ಬಂಧವಿತ್ತು. ಚಾಮುಂಡೇಶ್ವರಿ, ಗಾಂಧಿನಗರ, ಕಾಯಿಸೊಪ್ಪಿನ ಬೀದಿ, ಶೆಟ್ಟಹಳ್ಳಿ ಬೀದಿ, ಆಲದ ಮರ ಸರ್ಕಲ್, ಶಾಂತಿಲಾಲ್‌ ಲೇಔಟ್ʼ ಸೇರಿದಂತೆ ಹತ್ತರಿಂದ ಹದಿನೈದು ವಾರ್ಡುಗಳಲ್ಲಿ ಡಿಸಿಎಂ ಪ್ರಚಾರ ಮಾಡಿದರು. city corporation-become –Ramanagar- Municipality –within- five years-  DCM- Ashwath Narayan

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಹಾಗೂ ರಾಮನಗರ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಮಾಜಿ ಅಧ್ಯಕ್ಷ ಹನುಮಂತರಾಜು ಅವರ ಮನೆಗೆ ಡಿಸಿಎಂ ಭೇಟಿ ನೀಡಿದ್ದರು.  28ನೇ ವಾರ್ಡ್ ನ ದರ್ಶನ್ ಅವರ ಮನೆಗೂ ಡಿಸಿಎಂ ಭೇಟಿ ನೀಡಿದ್ದರು.

Key words:  city corporation-become –Ramanagar- Municipality –within- five years-  DCM- Ashwath Narayan