ಮೈಸೂರು: ಕುದಿಯುವ ಎಣ್ಣೆ ಮೈಮೇಲೆ ಬಿದ್ದು 4 ವರ್ಷದ ಮಗು ದಾರುಣ ಸಾವು

ಮೈಸೂರು, ಅಕ್ಟೋಬರ್,13,2025 (www.justkannada.in): ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ತಿಂಡಿ ತಿನಿಸು ತಯಾರಿಸುತ್ತಿದ್ದ ವೇಳೆ ಫಾಸ್ಟ್ ಫುಡ್ ನ ಕುದಿಯುವ ಎಣ್ಣೆ ಮೈಮೇಲೆ ಸುರಿದ ಪರಿಣಾಮ 4 ವರ್ಷದ ಮಗವೊಂದು ಸಾವಿಗೀಡಾದ ಹೃದಯ ವಿದ್ರಾಹಕ ಘಟನೆ ಮೈಸೂರಿನಲ್ಲಿ ಸಂಭವಿಸಿದೆ.

ಪಾದಾಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡು ನಾಯಿ ಕೊಡಗಳಂತೆ ತಲೆ ಎತ್ತುತ್ತಿರುವ ಫಾಸ್ಟ್ ಫುಡ್ ಗಳ ಸರಣಿ ಅನಾಹುತಕ್ಕೆ ಈ ಪ್ರಕರಣ ಕೂಡ ಸೇರ್ಪಡೆಯಾಗಿದೆ.  ಮೈಸೂರಿನ ಗಾಂಧಿನಗರದ ನಿವಾಸಿ ಲಕ್ಷ್ಮಣ್ ಎಂಬುವರ ಪುತ್ರ ಅನ್ವಿಶ್ (4) ಮೃತಪಟ್ಟ ಬಾಲಕ.

ಮನೆಗೆ ತಿಂಡಿ ತರಲೆಂದು ಲಕ್ಷ್ಮಣ್ ಅವರು ನಗರದ ಎನ್.ಆರ್. ಮೊಹಲ್ಲಾದ ಮಾರುತಿ ವೃತ್ತದ ಸೈಂಟ್ ಮೇರಿಸ್ ರಸ್ತೆಗೆ ಮಗು ಜೊತೆ ತೆರಳಿದ್ದರು. ಈ ವೇಳೆ ಫುಟ್ ಪಾತ್ ನಲ್ಲಿದ್ದ ಭಾಗ್ಯಲಕ್ಷ್ಮಿ ಟಿಫಾನಿಸ್ ನಲ್ಲಿ ತಿಂಡಿ ಖರೀದಿಗೆ ಲಕ್ಷ್ಮಣ್ ನಿಂತಿದ್ದರು. ಲಕ್ಷ್ಮಣ್ ಅವರು  ಮಗುವನ್ನು ತನ್ನ ಜೊತೆ ಕರೆದೋಯ್ದಿದ್ದರೆ ಪ್ರಾಯಶಃ ಈ ಘಟನೆ ಸಂಭವಿಸುತ್ತಿರಲಿಲ್ಲ. ಆದರೆ ಲಕ್ಷ್ಮಣ್ ಅವರು ಅನ್ವಿಶ್ ನನ್ನು ತಮ್ಮ ಬೈಕ್ ನ ಇಂಧನ ಟ್ಯಾಂಕ್ ಮೇಲೆ ಕೂರಿಸಿದ್ದರು.

ಲಕ್ಷ್ಮಣ್ ಅವರು ಫಾಸ್ಟ್ ಫುಡ್ ಮುಂದೆ ನಿಂತಿದ್ದ ಸಂದರ್ಭದಲ್ಲಿ ಕುದಿಯುವ ಎಣ್ಣೆ ಬಾಂಡಲಿಯಲ್ಲಿ ಪೂರಿ ಬೇಯಿಸಲಾಗುತ್ತಿತ್ತು. ಸಡಿಲವಾಗಿದ್ದ ಬೈಕ್ ಸೈಡ್ ಸ್ಟ್ಯಾಂಡ್ ಜಾರಿದ ಪರಿಣಾಮ ಆಯ ತಪ್ಪಿ ಬೈಕ್ ಕೆಳಗೆ ಬಿದ್ದಿತು. ಈ ವೇಳೆ ಬೈಕ್ ನ ಹ್ಯಾಂಡಲ್ ಬಾಂಡಲಿಗೆ ತಗುಲಿತು. ಈ ವೇಳೆ  ಟ್ಯಾಂಕ್ ಮೇಲೆ ಕುಳಿತ್ತಿದ್ದ ಮಗು ಕೂಡ ಕೆಳಗೆ ಜಾರಿ ಬಿದ್ದಿತು. ಈ ಸಂದರ್ಭದಲ್ಲಿ ಬಾಂಡಲಿಯಲ್ಲಿ ಕುದಿಯುತ್ತಿದ್ದ ಎಣ್ಣೆ ಅನ್ವಿಶ್ ಮೈ ಮೇಲೆ ಸುರಿಯಿತು.

ತೀವ್ರ ಸುಟ್ಟುಗಾಯಗಳಾದ ಮಗುವನ್ನು ನಗರದ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯಗಳ ವಾರ್ಡ್ ಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 4 ರಂದು ಅನ್ವಿಶ್ ಮೃತಪಟ್ಟಿತು.

ಈ ಸಂಬಂಧ ನಗರದ ನರಸಿಂಹರಾಜ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ ಪೆಕ್ಟರ್ ಲಕ್ಷ್ಮಿಕಾಂತ ಕೆ.ತಳವಾರ್ ತನಿಖೆ ನಡೆಸುತ್ತಿದ್ದಾರೆ.

ನಗರ ಪಾಲಿಕೆ, ಪೊಲೀಸ್ ಇಲಾಖೆಯ ತೆರವು ಕಾರ್ಯಾಚರಣೆ ವಿಫಲ

ಫಾಸ್ಟ್ ಫುಡ್ ಸೇರಿದಂತೆ ಇತರೆ ಬೀದಿ ಬದಿ ವ್ಯಾಪಾರಿಗಳು ಪಾದಾಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ವ್ಯಾಪಾರಸ್ಥರು ಶುಚಿತ್ವವನ್ನು ಕಾಪಾಡುತ್ತಿಲ್ಲ, ಜೊತೆಗೆ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿದೆ.

ಮೈಸೂರು ನಗರ ಪಾಲಿಕೆ ಹಾಗೂ ಪೊಲೀಸರು ಫುಟ್ ಪಾತ್ ಅತಿಕ್ರಮಣ ತೆರವು ಕಾರ್ಯಾಚಾರಣೆ ನಡೆಸುತ್ತಿದ್ದರೂ ಅದು ಫಲ ನೀಡುತ್ತಿಲ್ಲ. ಇಂದು ಫುಟ್ ಪಾತ್ ತೆರವು ಮಾಡಿದರೆ, ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ವ್ಯಾಪಾರಸ್ಥರು ನಾಳೆ ಮತ್ತೆ ಅದೇ ಸ್ಥಳಗಳಲ್ಲಿ ವ್ಯಾಪಾರ ಮುಂದುವರೆಸುತ್ತಿದ್ದಾರೆ.

ಇದರಿಂದ ಪಾಠ ಕಲಿತು, ಸುರಕ್ಷತಾ ಕ್ರಮ ಜಾರಿ ಮಾಡಲಿ

ಕುದಿಯುವ ಎಣ್ಣೆ ಸುರಿದ ಪರಿಣಾಮ ಪುಟ್ಟ ಕಂದಮ್ಮ ಸಾವಿಗೀಡಾಗಿರುವ ಈ ಘಟನೆ ದುಃಖಕರವಾಗಿದೆ. ಇದರಿಂದ ಪಾಠ ಕಲಿತು, ಇನ್ನು ಮುಂದಾದರೂ ಕನಿಷ್ಟ ಸುರಕ್ಷತಾ ಕ್ರಮಕೈಗೊಳ್ಳಬೇಕು.  ತಿಂಡಿ ತಿನಿಸು ತಯಾರು ಮಾಡುವಾಗ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ನಿಂದ ಗ್ರಾಹಕರು ಅಂತರ ಕಾಯ್ದುಕೊಳ್ಳಬೇಕು. ವ್ಯಾಪಾರಸ್ಥರು ಮೊದಲು ಇದನ್ನು ಅನುಸರಿಸಬೇಕು.

ಇದು ಜಾರಿಗೊಳ್ಳುವ ಸಂಬಂಧ ಮೈಸೂರು ನಗರದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಆಗ್ಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸುರಕ್ಷತಾ ಕ್ರಮ ಕೈಗೊಳ್ಳುವ ಸಂಬಂಧ ಕಟ್ಟು ನಿಟ್ಟಿನ ನಿಯಮಗಳನ್ನ ಜಾರಿಗೊಳಿಸಬೇಕು ಎಂದು ಮೈಸೂರು ಹೋಟೆಲ್ ಮಾಲೀಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ನಾರಾಯಣ ವಿ.ಹೆಗ್ಡೆ ತಿಳಿಸಿದ್ದಾರೆ.

Key words: 4-year, old child, dies, poured, boiling oil , Mysore