ನಭಕ್ಕೆ ಚಿಮ್ಮಿದ ಚಂದ್ರಯಾನ -3: ಇಸ್ರೋದಿಂದ ಯಶಸ್ವಿ ಉಡಾವಣೆ…

ನವದೆಹಲಿ,ಜುಲೈ,,14,2023(www.justkannada.in): ಭಾರತದ ಮೂರನೇ ಚಂದ್ರನ ಅನ್ವೇಷಣಾ ಕಾರ್ಯಾಚರಣೆಯಾದ ಚಂದ್ರಯಾನ -3 ಉಡಾವಣೆ ಇಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ದಿಂದ ಯಶಸ್ವಿಯಾಗಿ ನೆರವೇರಿದೆ.

ಇಂದು 2.35ರ ವೇಳೆಗೆ ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ -3 ಯಶಸ್ವಿಯಾಗಿ ಉಡಾವಣೆಗೊಂಡಿತು. ಚಂದ್ರಯಾನ -3 ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡುವ ಮತ್ತು ‘ನಮ್ಮ ಜ್ಞಾನವನ್ನು ಹೆಚ್ಚಿಸುವ’ ಹಲವಾರು ವೈಜ್ಞಾನಿಕ ಉಪಕರಣಗಳನ್ನು ಸಹ ಹೊಂದಿದೆ.

ಪ್ರಸಿದ್ಧ ಭಾರತೀಯ ವಿಜ್ಞಾನಿ ವಿಕ್ರಮ್ ಸಾರಾಭಾಯ್ ಅವರಿಗೆ ಗೌರವಾರ್ಥವಾಗಿ, ಚಂದ್ರಯಾನ-3 ಮಿಷನ್‌ ಲ್ಯಾಂಡರ್‌ಗೆ “ವಿಕ್ರಮ್” ಎಂದು ಹೆಸರಿಸಲಾಗಿದೆ. ಚಂದ್ರಯಾನ-3 ಮಿಷನ್ ಜೊತೆಯಲ್ಲಿರುವ ರೋವರ್ ಅನ್ನು ಸೂಕ್ತವಾಗಿ “ಪ್ರಜ್ಞಾನ್” ಎಂದು ಹೆಸರಿಸಲಾಗಿದೆ. ಇದನ್ನು ಸಂಸ್ಕೃತ ಪದದಿಂದ ಪಡೆಯಲಾಗಿದ್ದು, “ಬುದ್ಧಿವಂತಿಕೆ” ಎಂಬ ಅರ್ಥವನ್ನು ನೀಡುತ್ತದೆ.

ಮಿಷನ್ ಯಶಸ್ವಿಯಾದರೆ ಚಂದ್ರನ ಮೇಲೆ ಇಳಿದ ನಾಲ್ಕನೇ ರಾಷ್ಟ್ರವಾಗಲಿದೆ ಭಾರತ. ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಜಿಎಸ್‌ಎಲ್‌ವಿ ಮಾರ್ಕ್ 3 ಹೆವಿ ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನ ಲ್ಯಾಂಡರ್ ವಿಕ್ರಮ್ ಅನ್ನು ಕೂರಿಸಲಾಗಿದೆ. ಇದನ್ನು ಲಾಂಚ್ ವೆಹಿಕಲ್ ಮಾರ್ಕ್ 3 (LM-3) ಎಂದು ಮರುನಾಮಕರಣ ಮಾಡಲಾಗಿದ್ದು, ಈ GSLV 43.5 ಮೀಟರ್ ಎತ್ತರವಿದೆ. ಈ ಪ್ರಯಾಣವು 40 ದಿನಗಳದ್ದಾಗಿದ್ದು, ಆಗಸ್ಟ್ 23 ರಂದು ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಸ್ಪರ್ಶಿಸುವ ನಿರೀಕ್ಷೆಯಿದೆ.

Key words: Chandrayaan – 3 – Successful- launch – ISRO.