ಚಾಮುಂಡೇಶ್ವರಿಯಲ್ಲಿ ಟಿಕೆಟ್ ಸಿಗಲು ಸಿದ್ಧರಾಮಯ್ಯ ಕಾರಣ: ಈ ಬಾರಿ ಗೆಲುವು ಖಚಿತ- ಸಂತಸ ವ್ಯಕ್ತಪಡಿಸಿದ ಮಾವಿನಹಳ್ಳಿ ಸಿದ್ದೇಗೌಡ.

ಮೈಸೂರು,ಏಪ್ರಿಲ್,6,2023(www.justkannada.in):  ಎರಡನೇ ಪಟ್ಟಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ  ಮಾವಿನಹಳ್ಳಿ ಸಿದ್ದೇಗೌಡರಿಗೆ ಟಿಕೆಟ್  ಸಿಕ್ಕ ಹಿನ್ನಲೆ, ಅಭಿಮಾನಿಗಳು ಮನೆಯತ್ತ ದೌಡಾಯಿಸಿ ಹೂವು ಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.

ಇನ್ನು ಕಾಕತಾಳೀಯವೆಂಬಂತೆ ಮಾವಿನಹಳ್ಳಿ ಸಿದ್ಧೇಗೌಡರು ಇಂದು  ಮನೆಯಲ್ಲಿ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದರು. ಇಂದೇ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್ ಸಿಕ್ಕ ಹಿನ್ನೆಲೆ ಒಂದು ರಾಷ್ಟ್ರೀಯ ಪಕ್ಷದಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಕ್ಕೆ  ಮಾವಿನಹಳ್ಳಿ ಸಿದ್ದೇಗೌಡ ಸಂತಸ ವ್ಯಕ್ತಪಡಿಸಿದರು. ಹಿತೈಷಿಗಳು, ಬೆಂಬಲಿಗರಿಂದ ಮಾವಿನಹಳ್ಳಿ ಸಿದ್ದೇಗೌಡರಿಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.

ಈ ಕುರಿತು ಮಾತನಾಡಿರುವ ಮಾವಿನಹಳ್ಳಿ ಸಿದ್ಧೇಗೌಡರು, ನನಗೆ ಟಿಕೆಟ್ ಸಿಗುವುದಕ್ಕೆ ಪ್ರಮುಖ ಕಾರಣಕರ್ತರು ನಮ್ಮ ಸಿದ್ದರಾಮಯ್ಯ ಸಾಹೇಬರು. ಅವರಿಗೆ ನಾನು ಮೊದಲಿಗೆ ಧನ್ಯವಾದಗಳ ತಿಳಿಸಲು ಬಯಸುತ್ತೇನೆ. ಪಕ್ಷ ನನ್ನ ಮೇಲೆ ನಂಬಿಕೆ ಒಟ್ಟು ಟಿಕೆಟ್ ಕೊಟ್ಟಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣ ಇದೆ. ಕಳೆದ 10 ವರ್ಷಗಳಿಂದ ಹಾಲಿ ಶಾಸಕರಿಂದ ಜನ ಬೇಸತ್ತಿದ್ದಾರೆ. ಈ ಬಾರಿ ಕ್ಷೇತ್ರದ ಜನ ನನ್ನನ್ನ ಬೆಂಬಲಿಸುತ್ತಾರೆ. ಈ ಬಾರಿ ನನಗೆ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾವಿನಹಳ್ಳಿ ಸಿದ್ದೇಗೌಡರಿಗೆ ಟಿಕೆಟ್ ಘೋಷಣೆ ಸ್ವಾಗತ- ಟಿಕೆಟ್ ವಂಚಿತ ಮರೀಗೌಡ

ಮಾವಿನಹಳ್ಳಿ ಸಿದ್ದೇಗೌಡರಿಗೆ ಟಿಕೆಟ್ ಘೋಷಣೆಯಾದ ಕುರಿತು ಪ್ರತಿಕ್ರಿಯಿಸಿರುವ ಟಿಕೆಟ್ ವಂಚಿತ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮರೀಗೌಡ, ಮಾವಿನಹಳ್ಳಿ ಸಿದ್ದೇಗೌಡರಿಗೆ ಟಿಕೆಟ್ ಘೋಷಣೆ ಮಾಡಿರುವುದಕ್ಕೆ ನನ್ನ ಸ್ವಾಗತವಿದೆ. ನಮ್ಮ ನಾಯಕ ಸಿದ್ದರಾಮಯ್ಯ ಅವರು ಕಳೆದ 20 ದಿನಗಳ ಹಿಂದೆಯೇ ನನ್ನನ್ನ ಕರೆಸಿ ಮಾತನಾಡಿ ಈ ಬಾರಿ ಸಿದ್ದೇಗೌಡರಿಗೆ ಟಿಕೆಟ್ ಕೊಡಿಸುತ್ತೇನೆ. ನೀವು ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡಬಾರದು ಎಂದು ನನಗೂ ಮತ್ತು ಇತರರಿಗೂ ಮನವರಿಕೆ ಮಾಡಿದ್ದಾರೆ. ಈಗ ನಮ್ಮ ಸಂಪೂರ್ಣ ಬೆಂಬಲ ಅವರಿಗಿದೆ. ಅವರನ್ನು ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ನಾವೆಲ್ಲ ಒಗ್ಗೂಡಿ ಕೆಲಸ ಮಾಡುತ್ತೇವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಮತದಾರರ ಒಲವಿದೆ. ಗೆದ್ದು ಬರುವ ವಿಶ್ವಾಸ ಇದೆ ಎಂದರು.

Key words: Chamundeshwari:-ticket- Mavinahalli Siddegowda- expressed -happiness.