ಬೆಂಗಳೂರು,ಮೇ,26,2026 (www.justkannada.in): ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ಮಾಹಿತಿ ನೀಡುವ ಸಲುವಾಗಿ ರಾಜ್ಯದ 64 ಕಾಲೇಜುಗಳಲ್ಲಿ ಆರಂಭವಾದ ಸಿಇಟಿ ಸೀಟು ಹಂಚಿಕೆ ಮಂಥನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದರು.
ಮೊದಲ ದಿನವೇ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಪೋಷಕರ ಜತೆ ಹೋಗಿ ಮಂಥನದಲ್ಲಿ ಭಾಗವಹಿಸಿ ತಮ್ಮ ಅನುಮಾನಗಳನ್ನು ದೂರ ಮಾಡಿಕೊಂಡರು ಎಂದು ಹೆಚ್.ಪ್ರಸನ್ನ ಅವರು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ರಾಜ್ಯದ ಸರ್ಕಾರಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮಂಥನ ಕಾರ್ಯಾಗಾರ ನಡೆಯಿತು. ಬೆಳಿಗ್ಗೆ 10ರಿಂದ 12 ಗಂಟೆವರೆಗೆ ಒಂದು ಹಾಗೂ ಮಧ್ಯಾಹ್ನ 2ರಿಂದ ಸಂಜೆ 4 ಗಂಟೆಯವರೆಗೆ ಮತ್ತೊಂದು ಸೆಷನ್ಸ್ ನಡೆಯಿತು.
ಕೆಇಎ ವತಿಯಿಂದ ತರಬೇತಿ ಪಡೆದ ನುರಿತ ಸಂಪನ್ಮೂಲ ವ್ಯಕ್ತಿಗಳು ಹಾಗು ಕೆಇಎಯಿಂದ ನಿಯೋಜನೆಗೊಂಡಿದ್ದ ಸಿಬ್ಬಂದಿ ಖುದ್ದು ಹಾಜರಿದ್ದು, ಆಕಾಂಕ್ಷಿತ ಅಭ್ಯರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಅಭ್ಯರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕೆಇಎ ವೆಬ್ ಸೈಟ್ ನಲ್ಲಿ ಸ್ಲಾಟ್ ಬುಕ್ ಮಾಡಿಕೊಂಡು, ನಂತರ ತಮಗೆ ಸನಿಹ ಇರುವ ಕಾಲೇಜುಗಳಿಗೆ ಹೋಗಲು ಸೂಚಿಸಲಾಗಿತ್ತು. ಸುಮಾರು 13 ಸಾವಿರ ಮಂದಿ ಮೊದಲ ದಿನದ ಮಂಥನದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದರು ಎಂದು ಪ್ರಸನ್ನ ವಿವರಿಸಿದ್ದಾರೆ.
ಮೇ 28ರಂದು ಹೊರತುಪಡಿಸಿ, ಮೇ 30ರವರೆಗೆ ಎಲ್ಲ ದಿನ ಎರಡು ಸೆಷನ್ಸ್ ಮಂಥನ ಕಾರ್ಯಾಗಾರ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ಪೋಷಕರ ಜತೆ ಹೋಗಿ ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ಮಾಹಿತಿ ಪಡೆಯಬಹುದು ಎಂದು ಹೆಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಕೆಇಎ ಉಪಕ್ರಮಕ್ಕೆ ಮೆಚ್ಚುಗೆ
ಕೌನ್ಸೆಲಿಂಗ್ ಪ್ರಕ್ರಿಯೆ, ಆಪ್ಷನ್ಸ್ ದಾಖಲು, ಛಾಯ್ಸ್ ಆಯ್ಕೆ... ಹೀಗೆ ನಾನಾ ರೀತಿಯ ಪ್ರಕ್ರಿಯೆಗಳ ಬಗ್ಗೆ ಇದ್ದ ಅನುಮಾನಗಳಿಗೆ ಮಂಥನ ಕಾರ್ಯಕ್ರಮದಲ್ಲಿ ಪರಿಹಾರ ಸಿಕ್ಕಿತು. ಇದೊಂದು ಒಳ್ಳೆಯ ಕೆಲಸ ಎಂದು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಡೆದ ಮಂಥನ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರಾಜೇಶ ಎಂಬುವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ರೀತಿಯ ಅಭಿಪ್ರಾಯವನ್ನು ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮಂಜುನಾಥ ಎನ್ನುವ ಪೋಷಕರು ಕೂಡ ವ್ಯಕ್ತಪಡಿಸಿದರು.
ಕಳೆದ ಬಾರಿ ಒಂದು ದಿನ ಇತ್ತು. ಹೀಗಾಗಿ ಸಾಕಷ್ಟು ಜನ-ಗೊಂದಲ ಆಗಿತ್ತು. ಆದರೆ ಈ ವರ್ಷ ಐದು ದಿನ ಕಾರ್ಯಾಗಾರ ಆಯೋಜಿಸಿರುವ ಹಾಗೂ ಸ್ಲಾಟ್ ಬುಕ್ ಮಾಡಿಕೊಂಡೇ ಬನ್ನಿ ಎನ್ನುವ ಸೂಚನೆ ಇರುವ ಕಾರಣ ಎಲ್ಲವೂ ವ್ಯವಸ್ಥಿತವಾಗಿ ನಡೆಯತ್ತಿದೆ ಎಂದು ಹೆಚ್.ಪ್ರಸನ್ನ ಅವರು ಅಭಿಪ್ರಾಯಪಟ್ಟರು.
Key words: CET seat, allocation, brainstorming, 64 colleges







