‘ಕಾರ್ಡ್ ಟೋಕನೀಕರಣ’: ಜನವರಿ 2022 ರಿಂದ ಕಾರ್ಡುಗಳ ಮೂಲಕ ಮಾಡುವ ಆನ್‌ಲೈನ್ ಪಾವತಿಗಳಲ್ಲಿ ಬದಲಾವಣೆ, ಇನ್ನು ಮುಂದೆ ಸಿವಿವಿ ನಮೂದಿಸುವ ಅಗತ್ಯವಿಲ್ಲ

ನವ ದೆಹಲಿ, ಸೆಪ್ಟೆಂಬರ್ 22, 2021 (www.justkannada.in): ಜನವರಿ ೨೦೨೨ರಿಂದ ಕ್ರೆಡಿಟ್, ಡೆಬಿಟ್ ಕಾರ್ಡುಗಳನ್ನು ಬಳಸಿ ಮಾಡುವ ಆನ್‌ಲೈನ್ ಪಾವತಿಗಳು ಹೆಚ್ಚು ಸುರಕ್ಷಿತವಾಗಲಿವೆ. ಹೇಗೆ ಎಂದಿರಾ?. ಇನ್ನು ಮುಂದೆ ಅಮೇಜಾನ್, ಫ್ಲಿಪ್‌ಕಾರ್ಟ್ಗಳಂತಹ ಮರ್ಚೆಂಟ್ ಸೈಟ್‌ಗಳಲ್ಲಿ ಈವರೆಗೆ ಆಗುತ್ತಿದ್ದಂತೆ ನಿಮ್ಮ ಕಾರ್ಡುಗಳ ವಿವರಗಳು ‘ಸೇವ್’ ಆಗುವುದಿಲ್ಲ, ಹಾಗಾಗಿ ನಿಮ್ಮ ಕಾರ್ಡಿನ ಮಾಹಿತಿ ಕಳ್ಳತನವಾಗುವ ಅಥವಾ ದುರುಪಯೋಗವಾಗುವ ಯಾವುದೇ ಭಯವಿಲ್ಲ. ಇ-ವಾಣಿಜ್ಯ ಸಂಸ್ಥೆಗಳು ಖರೀದಿಗಳು ಹೆಚ್ಚು ವೇಗವಾಗಿ ಮುಗಿಯಲಿ ಎನ್ನುವ ಕಾರಣದಿಂದಾಗಿ ಗ್ರಾಹಕರ ಕಾರ್ಡುಗಳ ವಿವರಗಳನ್ನು ಸೇವ್ ಮಾಡುವಂತೆ ಕೇಳುವುದು ವಾಡಿಕೆಯಾಗಿದೆ. ಆದರೆ ಇದರಿಂದಾಗಿ ನಿಮ್ಮ ಕಾರ್ಡುಗಳ ದತ್ತಾಂಶ ಕಳ್ಳತನವಾಗುವ ಅಥವಾ ದುರುಪಯೋಗವಾಗುವ ಸಾಧ್ಯತೆಗಳು ಹೆಚ್ಚಾಗಿತ್ತು. ಆದರೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಪಾವತಿಗಳನ್ನು ಮಾಡಲು ‘ಟೋಕನೀಕರಣ’ವನ್ನು (ಟೋಕನೈಜೇಷನ್) ಅನುಮತಿಸುತ್ತಿದ್ದು, ದತ್ತಾಂಶ ಕಳ್ಳತನವಾಗುವ ಅಪಾಯ ತಪ್ಪಲಿದೆ.

ಟೋಕನೀಕರಣ (ಟೋಕನೈಜೇಷನ್) ಎಂದರೇನು?

ಟೋಕನೀಕರಣ ಎಂದರೆ ಕಾರ್ಡಿನ ವಿವರಗಳ ಸ್ಥಾನದಲ್ಲಿ ‘ಟೋಕನ್’ ಎಂದು ಕರೆಯಲ್ಪಡುವ ಪರ್ಯಾಯ ಸಂಕೇತ (alternative code) ನಮೂದನೆಯಾಗಿದೆ. ಈ ಟೋಕನ್, ಕಾರ್ಡ್ನ ಸಂಯೋಜನೆ (combination), ಟೋಕನ್ ರಿಕ್ವೆಸ್ಟರ್ (ಕಾರ್ಡ್ನ ಟೋಕನೈಜೇಷನ್‌ಗಾಗಿ ಗ್ರಾಹಕರಿಂದ ಕೋರಿಕೆಯನ್ನು ಒಪ್ಪಿಕೊಳ್ಳುವ ಹಾಗೂ ಅದನ್ನು ಟೋಕನ್ ವಿತರಣೆಗಾಗಿ ಕಾರ್ಡ್ ನೆಟ್‌ವರ್ಕ್ಗೆ ವರ್ಗಾಯಿಸುವ ಘಟಕ), ಹಾಗೂ ಸಲಕರಣೆಗೆ ವಿಶೇಷವಾಗಿದೆ. ಈ ವ್ಯವಸ್ಥೆಯನ್ನು ಪಿಒಎಸ್ ಟರ್ಮಿನಲ್‌ಗಳ (point-of-sale (PoS) ಮೂಲಕ ಮಾಡುವ ಪಾವತಿ ಹಾಗೂ ಕ್ಯೂಆರ್ ಕೋಡ್ ಪಾವತಿಗಳಿಗೂ ಸಹ ಬಳಸಲಾಗುವುದು.
ಆರ್‌ಬಿಐ ಮರ್ಚೆಂಟ್‌ಗಳು ಕಾರ್ಡ್ ವಿವರಗಳನ್ನು ಶೇಖರಿಸುತ್ತಿದ್ದಂತಹ ವಹಿವಾಟುಗಳಿಗೆ ಕಾರ್ಡ್-ಆನ್-ಫೈಲ್ (card-on-file (COF)) ಟೋಕನೈಜೇಷನ್ ಅನ್ನು ವಿಸ್ತರಿಸಿರುವ ಕಾರಣದಿಂದಾಗಿ ಜನವರಿ ೧, ೨೦೨೨ರಿಂದ ಮರ್ಚೆಂಟ್‌ಗಳಿಗೆ ಅವರ ಕಂಪ್ಯೂಟರ್‌ಗಳಲ್ಲಿ ಕಾರ್ಡುಗಳ ವಿವರಗಳನ್ನು ಶೇಖರಿಸದಿರುವಂತೆ ಸೂಚನೆ ನೀಡಲಾಗಿದೆ. “ಜನವರಿ ೧, ೨೦೨೨ರಿಂದ ಅನ್ವಯವಾಗುವಂತೆ ಕಾರ್ಡುಗಳ ವಿತರಕರು ಹಾಗೂ ಕಾರ್ಡ್ ನೆಟ್‌ವರ್ಕ್ಗಳನ್ನು ಹೊರತುಪಡಿಸಿದಂತೆ, ಕಾರ್ಡ್ಗಳ ವಹಿವಾಟು ಅಥವಾ ಪಾವತಿಯನ್ನು ನಡೆಸುವಂತಹ ಯಾವುದೇ ಘಟಕಗಳು ಕಾರ್ಡ್ನ ವಾಸ್ತವ ದತ್ತಾಂಶವನ್ನು ಶೇಖರಿಸಿಟ್ಟುಕೊಳ್ಳುವಂತಿಲ್ಲ. ಒಂದು ವೇಳೆ ಈ ಹಿಂದೆ ಮಾಡುತ್ತಿದ್ದಂತೆ ದತ್ತಾಂಶವನ್ನು ಶೇಖರಿಸಿಡುವುದು ಕಂಡು ಬಂದರೆ ಅಂತಹ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,” ಎಂದು ಆರ್‌ಬಿಐ ಸೂಚಿಸಿದೆ. ಆರ್‌ಬಿಐ ಈ ಹಿಂದೆ ಮಾರ್ಚ್ ೨೦೨೦ರಂದು ಈ ರೀತಿ ದತ್ತಾಂಶ ಸಂಗ್ರಹವನ್ನು ನಿಷೇಧಿಸಿತ್ತು. ಆದರೆ ನಂತರದಲ್ಲಿ ಡಿಸೆಂಬರ್ ೩೧, ೨೦೨೧ರವರೆಗೆ ಕಾಲಾವಕಾಶವನ್ನು ನೀಡಿತ್ತು.
ಕಾರ್ಡುಗಳ ಟೋಕನೀಕರಣ ಹೇಗೆ?

ಕಾರ್ಡುದಾರರು ಟೋಕನ್ ರಿಕ್ವೆಸ್ಟರ್ ವತಿಯಿಂದ ಒದಗಿಸುವಂತಹ ಆ್ಯಪ್‌ನಲ್ಲಿ ಕೋರಿಕೆಯನ್ನು ಸಲ್ಲಿಸುವ ಮೂಲಕ ತಮ್ಮ ಕಾರ್ಡ್ಗಳನ್ನು ಟೋಕನೈಜೇಷನ್ ಮಾಡಿಸಿಕೊಳ್ಳಬಹುದು. ಟೋಕನ್ ರಿಕ್ವೆಸ್ಟರ್ ತಮ್ಮ ಕೋರಿಕೆಯನ್ನು ಕಾರ್ಡ್ ನೆಟ್‌ವರ್ಕ್ಗೆ ರವಾನಿಸುತ್ತಾರೆ, ನಂತರ ಕಾರ್ಡ್ ವಿತರಕರ ಅನುಮತಿಯೊಂದಿಗೆ ಕಾರ್ಡ್ನ ಸಂಯೋಜನೆ, ಟೋಕನ್ ರಿಕ್ವೆಸ್ಟರ್, ಹಾಗೂ ಸಲಕರಣೆಯ ಸಂಯೋಜನೆಗೆ ಪೂರಕವಾಗಿ ಟೋಕನ್ ಅನ್ನು ಒದಗಿಸಲಾಗುತ್ತದೆ. ಸಂಪರ್ಕರಹಿತ ಕಾರ್ಡ್ ವಹಿವಾಟುಗಳು, ಕ್ಯೂಆರ್ ಕೋಡ್‌ಗಳು ಹಾಗೂ ಆ್ಯಪ್‌ಗಳ ಮೂಲಕ ಮಾಡುವ ಪಾವತಿಗಳಂತಹ ಮಾರ್ಗಗಳು ಹಾಗೂ ಇತರೆ ಎಲ್ಲಾ ರೀತಿಯ ಪಾವತಿಗಳಿಗೂ ಮೊಬೈಲ್ ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳ ಮೂಲಕ ಟೋಕನೈಜೇಷನ್ ಅನ್ನು ಅನುಮತಿಸಲಾಗಿದೆ.
ವೀಸಾ ಹಾಗೂ ಮಾಸ್ಟರ್‌ಕಾರ್ಡ್ಗಳಂತಹ ಕಂಪನಿಗಳು ಟೋಕನ್ ಸೇವೆಗಳನ್ನು ಒದಗಿಸುವ ಸಂಸ್ಥೆಗಳಾಗಿ (ಟಿಎಸ್‌ಪಿಗಳು) ಕಾರ್ಯನಿರ್ವಹಿಸುತ್ತವೆ ಹಾಗೂ ಮೊಬೈಲ್ ಪಾವತಿಗಳು ಅಥವಾ ಇ-ವಾಣಿಜ್ಯ ವೇದಿಕೆಗಳಿಗೆ, ಕಾರ್ಡ್ನ ಸಂಖ್ಯೆ ಹಾಗೂ ಕಾರ್ಡ್ನ ಹಿಂಭಾಗದಲ್ಲಿ ಮುದ್ರಿತವಾಗಿರುವ ‘ಸಿವಿವಿ’ (CVV) ಎಂದು ಕರೆಯಲ್ಪಡುವ ಮೂರು ಅಂಕಿಗಳ ಬದಲಾಗಿ ಪಾವತಿಗಳನ್ನು ಮಾಡಲು ಟೋಕನ್‌ಗಳನ್ನು ಒದಗಿಸುತ್ತವೆ.
ಇದೇ ರೀತಿ ನೀವು ಗೂಗಲ್ ಪೇ ಅಥವಾ ಪೇಟಿಎಂ ನಂತಹ ಡಿಜಿಟಲ್ ವ್ಯಾಲೆಟ್‌ಗಳಲ್ಲಿ ನಿಮ್ಮ ಕಾರ್ಡ್ನ ವಿವರಗಳನ್ನು ನಮೂದಿಸಿದಾಗಲೂ ಸಹ ಸಂಬAಧಪಟ್ಟ ಟಿಎಸ್‌ಪಿಗಳನ್ನು ಟೋಕನ್‌ಗೆ ಕೋರಿಕೆ ಸಲ್ಲಿಸುತ್ತವೆ. ಟಿಎಸ್‌ಪಿಗಳು ಗ್ರಾಹಕರಿಗೆ ಕಾರ್ಡ್ ವಿತರಿಸಿರುವ ಬ್ಯಾಂಕ್‌ನಿAದ ದತ್ತಾಂಶದ ಪರಿಶೀಲನೆಯನ್ನು ಕೋರುತ್ತವೆ. ದತ್ತಾಂಶ ಪರಿಶೀಲಿಸಿದ ನಂತರ, ಒಂದು ವಿಶೇಷ ಸಂಕೇತ (code) ಸೃಷ್ಟಿಯಾಗುತ್ತದೆ ಹಾಗೂ ಅದು ಗ್ರಾಹಕರ ಸಲಕರಣೆಯಲ್ಲಿ ಬದಲಾಯಿಸಲು ಸಾಧ್ಯವಾಗದಿರುವ ರೀತಿಯಲ್ಲಿ ಲಿಂಕ್ ಆಗುತ್ತದೆ. ಈ ಪ್ರಕಾರವಾಗಿ, ಪ್ರತಿ ಬಾರಿ ಗ್ರಾಹಕರು ಹಣ ಪಾವತಿಸುವಾಗ, ಪ್ಲಾಟ್‌ಫಾರಂ, ಗ್ರಾಹಕರ ನಿಜವಾದ ದತ್ತಾಂಶವನ್ನು ಬಹಿರಂಗಪಡಿಸದೆ, ಕೇವಲ ಟೋಕನ್ ಅನ್ನು ಶೇರ್ ಮಾಡುವ ಮೂಲಕ ವಹಿವಾಟನ್ನು ಅಧಿಕೃತಗೊಳಿಸುವುದು ಸಾಧ್ಯವಾಗುತ್ತದೆ. ಮೊಬೈಲ್ ವ್ಯಾಲೆಟ್‌ಗಳಲ್ಲಿ ಹಾಗೂ ಫ್ಲಿಪ್‌ಕಾರ್ಟ್ನಂತಹ ಆನ್‌ಲೈನ್ ಸ್ಟೋರ್‌ಗಳಲ್ಲಿ ಭೌತಿಕವಾಗಿ ಪಾವತಿಗಳನ್ನು ಸರುಕ್ಷಿತಗೊಳಿಸಲು ಈ ರೀತಿ ಟೋಕನ್‌ಗಳನ್ನು ಸೃಷ್ಟಿಸಬಹುದು.

ಸುದ್ದಿ ಮೂಲ: ಬೆಂಗಳೂರ್ ಮಿರರ್

key words: ‘Card Tokenization’- Changes -online