Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಮಾಜಿ ಸಂಸದ ಪ್ರತಾಪ್ ಸಿಂಹ ಉಚ್ಚಾಟನೆಗೆ ಆಗ್ರಹಿಸಿ ಬಿ.ವೈ ವಿಜಯೇಂದ್ರಗೆ ಮನವಿ

ಮಾಜಿ ಸಂಸದ ಪ್ರತಾಪ್ ಸಿಂಹ ಉಚ್ಚಾಟನೆಗೆ ಆಗ್ರಹಿಸಿ ಬಿ.ವೈ ವಿಜಯೇಂದ್ರಗೆ ಮನವಿ

ಮೈಸೂರು,ಜನವರಿ,17,2025 (www.justkannada.in): ಬಿಜೆಪಿ ಪಕ್ಷದಿಂದ ಮಾಜಿ ಸಂಸದ ಪ್ರತಾಪ ಸಿಂಹ ಅವರನ್ನು ಉಚ್ಚಾಟನೆ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಎಸ್ ಟಿ ಮೊರ್ಚಾ ರಾಜ್ಯ ಕಾರ್ಯಕಾರಿ ಸದಸ್ಯ ಮೈ.ಕಾ.ಪ್ರೇಮ್ ಕುಮಾರ್ ಹಾಗೂ ಬಿಜೆಪಿ ಮುಖಂಡ ಕುಮಾರ್ ಗೌಡ ಎಂಬುವವರು ಮನವಿ ಸಲ್ಲಿಸಿದರು.

ಇಂದು ಮೈಸೂರಿಗೆ ಆಗಮಿಸಿದ್ದ ಬಿ.ವೈ ವಿಜಯೇಂದ್ರ ಅವರನ್ನ ಭೇಟಿಯಾದ ಮೈ.ಕಾ.ಪ್ರೇಮ್ ಕುಮಾರ್ ಹಾಗೂ ಕುಮಾರ್ ಗೌಡ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಪಕ್ಷ ವಿರೋಧಿ ಚಟುವಟಿಕೆ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಸುಮಾರು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ನಾವುಗಳು ಹಿಂದೂ ಸಂಘಟನೆ ಸೇರಿದಂತೆ ಭಾರತೀಯ ಜನತಾ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಮತ್ತು ಬ್ಲಾಕ್ ಮಟ್ಟದ, ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದು ಸರಿಯಷ್ಟೇ, ಇತ್ತೀಚಿನ ದಿನಗಳಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಂದಾಗಿ ಪಕ್ಷಕ್ಕೆ ಉಂಟಾಗುತ್ತಿರುವ ಹಾನಿ ಮತ್ತು ಮುಜುಗರ ನಮಗೆ ತೀವ್ರ ಬೇಸರವನ್ನು ಉಂಟು ಮಾಡಿವೆ. ಪ್ರತಾಪ್ ಸಿಂಹ ಅವರು ಸಂಸತ್ ಭವನದ ಒಳಗೆ ಸ್ಮೋಕ್ ಬಾಂಬ್ ದಾಳಿ ನಡೆಸಿದ ಭಯೋತ್ಪಾದಕರಿಗೆ ಯಾವುದೇ ಪೂರ್ವಾಪರ ಪರಿಶೀಲಿಸದೆ ಒಳಗೆ ಪ್ರವೇಶಿಸಲು ಪಾಸ್ ನೀಡಿರುವುದು ದೇಶದ ಭದ್ರತಾ ವ್ಯವಸ್ಥೆಯನ್ನೇ ಆಣಕಿಸಿದ್ದಷ್ಟೇ ಅಲ್ಲದೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಸಮಸ್ತ ಕರ್ನಾಟಕದ ಜನತೆ ತಲೆ ಎತ್ತಿ ನಡೆಯಲು ಸಾಧ್ಯವಾಗದಷ್ಟು ಮುಜುಗರವನ್ನು ಸೃಷ್ಟಿಸಿತ್ತು. ಆ ಪ್ರಕರಣದ ತನಿಖೆ ಇಂದಿಗೂ ಕೂಡ ನಡೆಯುತ್ತಿದ್ದು ಪಾಸ್ ನೀಡಿಕೆಯ ಆರೋಪ ಹೊತ್ತಿರುವ ಪ್ರತಾಪ್ ಸಿಂಹ ಅವರ ತಲೆಯ ಮೇಲೆ ತೂಗುಗತ್ತಿ ಇಂದಿಗೂ ಬದಿಗೆ ಸರಿದಿರುವುದಿಲ್ಲ.

ಹೀಗಾಗಿ ಸಂಸತ್ ಭವನದ ದಾಳಿಯ ತನಿಖೆ ಮುಗಿಯುವವರೆವಿಗೂ ಪ್ರತಾಪ ಸಿಂಹ  ಅವರಿಗೆ ಪಕ್ಷದ ಯಾವುದೇ ಉನ್ನತ ಹುದ್ದೆ ನೀಡಬಾರದು.  ಒಟ್ಟಾರೆಯಾಗಿ ಪ್ರತಾಪ ಸಿಂಹ  ಅವರನ್ನ ಉಚ್ಚಾಟನೆ ಮಾಡಬೇಕೆಂದು ಕೇಂದ್ರ ಭಾರತೀಯ ಜನತಾ ಪಾರ್ಟಿಗೆ ಶಿಫಾರಸು ಮಾಡಬೇಕೆಂದು ಮೈ.ಕಾ.ಪ್ರೇಮ್ ಕುಮಾರ್ ಹಾಗೂ ಕುಮಾರ್ ಗೌಡ ಮನವಿ ಮಾಡಿದ್ದಾರೆ.

Key words: Pratap Simha, BY Vijayendra, BJP, expulsion