ಆಡಳಿತದ ವಿರೋಧಿ ಅಲೆ ಉಪ ಚುನಾವಣೆ ಫಲಿತಾಂಶದಿಂದ ಸಾಬೀತು- ಕೆಪಿಸಿಸಿ ವಕ್ತಾರ ಎಚ್ .ಎ ವೆಂಕಟೇಶ್

ಮೈಸೂರು,ನವೆಂಬರ್,2,2021(www.justkannada.in): ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಉಪಚುನಾವಣೆಯ ಫಲಿತಾಂಶದಿಂದ ಆಡಳಿತ ವಿರೋಧಿ ಅಲೆ ಇರುವುದು ಸಾಬೀತಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್ ಎ ವೆಂಕಟೇಶ್ ತಿಳಿಸಿದರು.

ಉಪಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಆಡಳಿತ ಪಕ್ಷದ ಪರವಾಗಿ ಫಲಿತಾಂಶ ಬರುವುದು ಸರ್ವೇಸಾಮಾನ್ಯವಾಗಿದೆ. ಶತ ಗತಾಯ ಚುನಾವಣೆ ಗೆಲ್ಲಲು ರಾಜ್ಯದ ಸಚಿವರು ಜನತೆಯ ಹಿತ ಕಾಯದೆ ಒಂದು ತಿಂಗಳು ಕಾಲ ಪ್ರಚಾರದಲ್ಲಿ ತೊಡಗಿಸಿಕೊಂಡರು ಜನತೆಯ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ವ್ಯಾಪಕ ಆಡಳಿತ ಯಂತ್ರದ ದುರುಪಯೋಗ, ಅತಿ ಹೆಚ್ಚು ಹಣ ಹಂಚಿದರು ಹಾನಗಲ್ ನಲ್ಲಿ ಹೀನಾಯ  ಸೋಲು ಅನುಭವಿಸಿರುವುದು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಜನ ತಿರಸ್ಕರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದು ನುಡಿದರು.

ಜೆಡಿಎಸ್ ಗೆ ಇನ್ಮುಂದೆ ಅಸ್ತಿತ್ವವಿಲ್ಲ

ಜೆಡಿಎಸ್ ಪರವಾಗಿ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ, ಸಂಸತ್ ಸದಸ್ಯ ಹಾಗೂ ಚಿತ್ರನಟ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಪ್ರಚಾರ ನಡೆಸಿದರು.  ಪಡೆದ ಮತಗಳನ್ನು ಗಮನಿಸಿದರೆ ಜೆಡಿಎಸ್ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ. ಜೆಡಿಎಸ್ ಪಕ್ಷವು ಜನತೆಯ ವಿಶ್ವಾಸ ಗಳಿಸುವಲ್ಲಿ ಸಂಪೂರ್ಣ ವಿಫಲವಾದಂತೆ ಆಗಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಮುಂದಿನ ಚುನಾವಣೆಗಳು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಎಂಬುದು ಉಪಚುನಾವಣೆಯಲ್ಲಿ ಸಾಬೀತಾಗಿದೆ. ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ತನ್ನ ಅಸ್ತಿತ್ವವನ್ನು ಇನ್ನು ಮುಂದೆ ಕಂಡುಕೊಳ್ಳಲು ಸಾಧ್ಯವಾಗದೆ ನೆಲ ಕಚ್ಚಿದಂತಾಗಿದೆ ಎಂದು ಎಚ್ ಎ ವೆಂಕಟೇಶ್ ತಿಳಿಸಿದರು.

Key words: by-election-sindagi-hanagal-kpcc-spoksperson-HA Venkatesh