ಗ್ರಾಮವೊಂದರಲ್ಲಿ ಕೇವಲ 24 ಗಂಟೆಗಳಲ್ಲಿ ಆಕ್ಸಿಜನ್ ಸಹಿತ ಹಾಸಿಗೆಗಳಿರುವ ಕೋವಿಡ್ ಚಿಕಿತ್ಸಾ ಕೇಂದ್ರ ನಿರ್ಮಿಸಿದ ಉದ್ಯಮಿ.

ರಾಜಸ್ತಾನ,ಮೇ,27,2021(www.justkannada.in): ರಾಜಸ್ಥಾನದ ಗ್ರಾಮವೊಂದರಲ್ಲಿ ಉದ್ಯಮಿಯೊಬ್ಬರು ಕೇವಲ 24 ಗಂಟೆಗಳಲ್ಲಿ ಆಮ್ಲಜನಕಸಹಿತ ಹಾಸಿಗೆಗಳಿರುವ ಕೋವಿಡ್ ಚಿಕಿತ್ಸಾ ಕೇಂದ್ರ ನಿರ್ಮಿಸಿ ಸುತ್ತಮುತ್ತಲಿನ ಜನರಿಗೆ ಚಿಕಿತ್ಸೆಗೆ ನೆರವಾಗುವಂತಹ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.jk

ಉದ್ಯಮಿ ಹೆಸರು ಲಲಿತ್ ಕಿರಿ. ಸುಮಾರು ಒಂದು ದಶಕದ ಹಿಂದೆ ಇವರು ಸಾಮಾನ್ಯ ನಾಗರಿಕ. ಆದರೆ ತನ್ನ ಬುದ್ಧಿಶಕ್ತಿ, ಪರಿಶ್ರಮ ಹಾಗೂ ಸ್ವಂತ ಬಲದಿಂದ ಇಂದು ದೊಡ್ಡ ಉದ್ಯಮಿಯಾಗಿದ್ದಾರೆ. ಕೇರ್ನ್ ಎನರ್ಜಿ ಎಂಬ ಸಂಸ್ಥೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಇಂಧನ ಪರಿಶೋಧನೆಯಲ್ಲಿ ತೊಡಗಿದ್ದಾಗ ಆ ಸಂಸ್ಥೆಗೆ ಅಗತ್ಯವಿದ್ದಂತಹ ಸಾರಿಗೆ ಸೇವೆಗಳನ್ನು (ಲಾಜಿಸ್ಟಿಕ್ಸ್) ಒದಗಿಸಲು ಆರಂಭಿಸಿ ಕೆಲವೇ ವರ್ಷಗಳಲ್ಲಿ ತನ್ನದೇ ಸಂಸ್ಥೆ ಸ್ಥಾಪಿಸಿ ದೊಡ್ಡ ಉದ್ಯಮಿಯಾಗಿ ಬೆಳೆದರು.

ಈ ರೀತಿ ಉದ್ಯಮಪತಿಯಾಗಿ ಬೆಳೆದಂತಹ ಲಲಿತ್ ಕಿರಿ ಕೇವಲ ದುಡ್ಡು ಮಾಡಲಷ್ಟೇ ತನ್ನ ಬುದ್ದಿಶಕ್ತಿಯನ್ನು ಮಿತಿಗೊಳಿಸದೆ, ಕೋವಿಡ್ ಸರ್ವವ್ಯಾಪಿಯ ಸಂದರ್ಭದಲ್ಲಿ ಅಗತ್ಯವುಳ್ಳವರಿಗೆ ತನ್ನ ಕೈಲಾದ ಏನಾದರೂ ಸಹಾಯವನ್ನು ಮಾಡಬೇಕೆಂದು ಹಂಬಲಿಸಿ ವಿನೂತನವಾದ ಉಪಾಯವನ್ನು ಆಲೋಚಿಸಿದರು. ಆ ಉಪಾಯವೇನೆಂದರೆ ಶಿಪ್ಪಿಂಗ್ ಕಂಟೇನರ್‌ ಗಳನ್ನು (ಅಂದರೆ ಕೈಗಾರಿಕಾ ವಸ್ತುಗಳನ್ನು ಸಾಗಿಸುವ ದೊಡ್ಡ ವಾಹನಗಳು/ಟ್ರಕ್‌ಗಳು) ‘ಕಂಟೇನರ್ ಬಂಕ್ ಹೌಸ್’ಗಳನ್ನಾಗಿ (ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೊಠಡಿಗಳನ್ನಾಗಿ ಪರಿವರ್ತಿಸಿ ಬಳಸಿಕೊಳ್ಳಬಹುದಾಗಿರುವಂತಹ ಶಿಪ್ಪಿಂಗ್ ವಾಹನಗಳು) ಪರಿವರ್ತಿಸಿ ಅವುಗಳನ್ನು ವೈದ್ಯಕೀಯ ಸೌಕರ್ಯಗಳಿಲ್ಲದಿರುವಂತಹ ಸ್ಥಳಗಳಲ್ಲಿ ತಾತ್ಕಾಲಿಕ ಕೋವಿಡ್  ಆಸ್ಪತ್ರೆಗಳನ್ನಾಗಿ ಬಳಸಿಕೊಳ್ಳುವುದು. ಲಲಿತ್ ಕಿರಿ ತನ್ನ ಈ ಉಪಾಯವನ್ನು ರಾಜಸ್ಥಾನ ರಾಜ್ಯ ಸರ್ಕಾರಕ್ಕೆ ತಿಳಿಸಿದರು.

ಕೆಲವು ವಾರಗಳ ಹಿಂದೆ ರಾಜಸ್ಥಾನ ರಾಜ್ಯದ ಕಂದಾಯ ಸಚಿವ ಹರೀಶ್ ಚೌಧರಿ ಅವರು ಬಾರ್ಮೆರಾ ಜಿಲ್ಲೆಯ ಪಚಪದ್ರಾ ಬಳಿಯ ಸಂಭರಾ ಗ್ರಾಮದಲ್ಲಿ ಒಂದು ತಾತ್ಕಾಲಿಕ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ತತ್ ಕ್ಷಣವೇ ಅಂದರೆ ಕೇವಲ 24 ಗಂಟೆಗಳಲ್ಲಿ ನಿರ್ಮಿಸುವ ಅಗತ್ಯವಿರುವ ಬಗ್ಗೆ ಹಾಗೂ ಅದರ ಸಾಧ್ಯಸಾಧ್ಯತೆಗಳ ಬಗ್ಗೆ ಲಲಿತ್ ಕಿರಿಗೆ ವಿವರಿಸಿದರು. ಇಷ್ಟು ಅಲ್ಪಾವಧಿಯಲ್ಲಿ ಅದು ಬಹುತೇಕ ಅಸಾಧ್ಯವಾಗಿದ್ದರೂ ಸಹ ಸಚಿವರ ಕೋರಿಕೆಯನ್ನು ಮನ್ನಿಸಿ ಲಲಿತ್ ಕಿರಿ ತನ್ನ ಕೈಯಿಂದ ರೂ.1 ಕೋಟಿ ಹಣ ವ್ಯಯಿಸಿ ಕೇವಲ 24 ಗಂಟೆಗಳ ಅವಧಿಯಲ್ಲಿ, ಜೆಸಿಬಿಗಳು, ಪ್ಲಂಬರ್‌ಗಳು, ಎಲೆಕ್ಟ್ರಿಷಿಯನ್‌ ಗಳು, ಲ್ಯಾಂಡ್‌ಸ್ಕೇಪರ್‌ ಗಳು ಹಾಗೂ ಟ್ರಾನ್ಸ್ಪೋರ್ಟ್ರ್‌ಗಳು ಒಳಗೊಂಡಂತೆ ಸುಮಾರು 100 ಜನರ ತಂಡವನ್ನು ಕಟ್ಟಿಕೊಂಟು, 10 ಆಮ್ಲಜನಕ ಹಾಸಿಗೆಗಳು, 15 ಸಾಮಾನ್ಯ ಹಾಸಿಗೆಗಳು ಹಾಗೂ 24-ಗಂಟೆಗಳ ಒಪಿಡಿ ಒಳಗೊಂಡಿರುವ ಸಂಪೂರ್ಣ ಹವಾನಿಯಂತ್ರಿತ, ಸುಸಜ್ಜಿತ ತಾತ್ಕಾಲಿಕ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು.

ಯಾವುದೇ ವೈದ್ಯಕೀಯ ಸೌಲಭ್ಯ ಇಲ್ಲದಿರುವಂತಹ ಕುಗ್ರಾಮದ ಸುತ್ತಮುತ್ತಲಿನ ಪ್ರದೇಶಗಳ ನೂರಾರು ಗ್ರಾಮಸ್ಥರಿಗೆ ಈ ತಾತ್ಕಾಲಿಕ ಚಿಕಿತ್ಸಾ ಕೇಂದ್ರವು ಒಂದು ವರದಾನವಾಗಿ ಪರಿಣಮಿಸಿದೆ. ಈ ಚಿಕಿತ್ಸಾ ಕೇಂದ್ರ ಇಲ್ಲವಾಗಿದ್ದರೆ ಸುತ್ತಮುತ್ತಲಿನ ಗ್ರಾಮಸ್ಥರು ತತ್‌ ಕ್ಷಣದ ವೈದ್ಯಕೀಯ ಚಿಕಿತ್ಸೆ ಲಭ್ಯವಾಗಬೇಕಾಗಿರುವಂತಹ ಈ ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಹತ್ತಿರದ ಪಟ್ಟಣ ಅಥವಾ ನಗರಗಳಿಗೆ ಗಂಟೆಗಟ್ಟಲೆ ಪ್ರಯಾಣಿಸಬೇಕಾಗುತಿತ್ತು. ಈ ತಾತ್ಕಾಲಿಕ ಕೋವಿಡ್ ಚಿಕಿತ್ಸಾ ಕೇಂದ್ರವು ತುರ್ತು ವೈದ್ಯಕೀಯ ಚಿಕಿತ್ಸೆ ಸೌಲಭ್ಯವನ್ನೂ ಒಳಗೊಂಡಿದೆ. ತುರ್ತು ಚಿಕಿತ್ಸೆ ಅಗತ್ಯವಿಲ್ಲದಿರುವಂತಹ ಸೋಂಕಿತರಿಗೆ ವೈದ್ಯರ ಸಲಹೆ, ಆಪ್ತಸಮಾಲೋಚನೆಗಳು ಲಭ್ಯವಿದ್ದು, ಸ್ಥಳದಲ್ಲಿಯೇ ಔಷಧಗಳನ್ನೂ ಒದಗಿಸಲಾಗುತ್ತಿದೆ.

ಉದಾಹರಣೆಗೆ, ಬಾರ್ಮೆರ್ ಜಿಲ್ಲೆಯ ಸಂತ್ರಾ ಗ್ರಾಮದ ನಿವಾಸಿಯಾದ ದೇವಿ ಕನ್ವರ್ ಎಂಬ 68 ವರ್ಷ ವಯಸ್ಸಿನ ಮಹಿಳೆಯು ಕೆಲವು ದಿನಗಳವರೆಗೆ ಜ್ವರ ಬಂದ ನಂತರ ತಪಾಸಣೆಗೆ ಒಳಗಾದರು. ಮೇ 5ರಂದು ಕೋವಿಡ್ ಸೋಂಕಿಗೆ ಈಡಾಗಿರುವುದು ತಿಳಿದು ಬಂತು. ಆಕೆಯ ದೇಹದ ಆಮ್ಲಜನಕ ಪ್ರಮಾಣ ಇಳಿಕೆಯಾಗುತ್ತಿರುವಂತೆ ಕುಟುಂಬಸ್ಥರು ಗಾಬರಿಯಾದರು. ಏಕೆಂದರೆ ಅವರಿಗೆ ಹತ್ತಿರದ ಆಸ್ಪತ್ರೆ ಎಂದರೆ 40 ಕಿ.ಮೀ.ಗಳ ದೂರದಲ್ಲಿರುವಂತಹ ಬಲೋತ್ರಾದಲ್ಲಿತ್ತು, ಜೊತೆಗೆ ಅಲ್ಲಿ ಯಾವುದೇ ಹಾಸಿಗೆಗಳೂ ಖಾಲಿ ಇರಲಿಲ್ಲ. ಆದರೆ ಲಲಿತ್ ಕಿರಿಯವರು ನಿರ್ಮಿಸಿದಂತಹ ತಾತ್ಕಾಲಿಕ ಕೋವಿಡ್ ಚಿಕಿತ್ಸಾ ಕೇಂದ್ರ ಸೋಂಕಿತೆ ದೇವಿ ಕನ್ವರ್ ಅವರ ಗ್ರಾಮದಿಂದ 30 ಕಿ.ಮೀ.ಗಳ ದೂರವಿತ್ತು ಹಾಗೂ ಆ ಆಸ್ಪತ್ರೆ ಆಕೆಗೆ ಚಕಿತ್ಸೆಯ ತುರ್ತು ಅಗತ್ಯವಿದ್ದಂತಹ ದಿನದಂದೇ ಉದ್ಘಾಟಿಸಲ್ಪಟ್ಟಿತು.

ಅಹಮದಾಬಾದ್‌ ನಲ್ಲಿ ಸಾರಿಗೆ ಕೆಲಸದಲ್ಲಿ ತೊಡಗಿಸಿಕೊಂಡಿರುವಂತಹ ಆಕೆಯ ಮಗ ತಾತ್ಕಾಲಿಕ ಚಿಕಿತ್ಸಾ ಕೇಂದ್ರದ ಬಗ್ಗೆ ತಿಳಿದುಕೊಂಡು ಕೂಡಲೇ ತನ್ನ ತಾಯಿಯನ್ನು ಅಲ್ಲಿಗೆ ಕರೆದುಕೊಂಡು ಹೋದ. ಆಕೆಗೆ ಕೂಡಲೇ ಆಮ್ಲಜನಕ ಒದಗಿಸಿ ಅಗತ್ಯ ಚಿಕಿತ್ಸೆಯನ್ನೂ ಒದಗಿಸಲಾಯಿತು. 9 ದಿನಗಳ ನಂತರ ಆಕೆಯ ಸ್ಥಿತಿ ಸುಧಾರಿಸಿತು. ತನ್ನ ಸೋಂಕಿತ ತಾಯಿಯನ್ನು ಉಳಿಸಿಕೊಳ್ಳುವಲ್ಲಿ ಸಫಲವಾದ ಆಕೆಯ ಮಗ ಕನ್ವರ್ ಪ್ರಕಾರ ಈ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ದೊರೆತಂತಹ ಚಿಕಿತ್ಸೆ ಬಹುಶಃ ಯಾವುದೇ ನಗರದ ದೊಡ್ಡ ಆಸ್ಪತ್ರೆಯಲ್ಲಿಯೂ ಅವರಿಗೆ ದೊರಕುತ್ತಿರಲಿಲ್ಲ. ಅಷ್ಟು ಒಳ್ಳೆಯ ಚಿಕಿತ್ಸೆ ಹಾಗೂ ಸೌಲಭ್ಯಗಳು ಇಲ್ಲಿ ನಮಗೆ ಲಭ್ಯವಾಯಿತು ಎಂದು ತನ್ನ ಧನ್ಯವಾದಗಳನ್ನು ಅರ್ಪಿಸಿದ. ಈ ಬಂಕ್ ಹೌಸ್ ಅನ್ನು ನೋಡಿಕೊಳ್ಳುತ್ತಿರುವ ಡಾ. ಮುಕೇಶ್ ರಾಜ್‌ ಪುರೋಹಿತ್ ಅವರ ಪ್ರಕಾರ ಈ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಈ ಪ್ರದೇಶದ ದೊಡ್ಡ ಆಸ್ಪತ್ರೆಗಳ ಹೊರೆಯನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಿದೆಯಂತೆ.

ಕೋವಿಡ್ ಮಹಾಮಾರಿ ನೂರಾರು ಜನರನ್ನು ಬಲಿತೆಗೆದುಕೊಳ್ಳುತ್ತಿರುವಂತಹ ಈ ಸಮಯದಲ್ಲಿ ಇಂತಹ ಉಪಾಯಗಳು, ಪ್ರಯತ್ನಗಳು, ಸಂಬಮಧಪಟ್ಟ ಸರ್ಕಾರಗಳು, ಇಲಾಖೆಗಳು ಹಾಗೂ ಹೃದಯವೈಶಾಲ್ಯತೆಯಿರುವ ಶ್ರೀಮಂತರಿಗೆ ಹಾಗೂ ಅನುಕೂಲಸ್ಥರಿಗೆ ಪ್ರೇರಣೆಯಲ್ಲವೇ?

ಕೃಪೆ…

ಇಂಡಿಯಾ ಟುಡೆ.

Key words: businessman – covid treatment center – village – oxygen beds –just- 24 hours-rajsthan