ರೋಗಗ್ರಸ್ಥ ಸಮಾಜದಿಂದ ಮುಕ್ತರಾಗಲು ಬುದ್ಧನ ತತ್ವಗಳೇ ದಿವ್ಯ ಔಷಧ- ಡಾ.ಕಲ್ಯಾಣ ಸಿರಿ ಭಂತೇಜಿ.

ಮೈಸೂರು,ಮೇ,26,2021(www.justkannada.in): ನಾವು ಭೂಮಿಯ ಮೇಲೆ ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗುವುದಕ್ಕಾಗಿ ಜನ್ಮ ತಾಳಿದ್ದೇವೆ ಎಂಬ ಬುದ್ಧನ ಮಾತನ್ನು ಪ್ರತಿಯೊಬ್ಬರೂ ಅರಿತುಕೊಂಡರೆ ರೋಗಗ್ರಸ್ಥ ಸಮಾಜದಿಂದ ಮುಕ್ತರಾಗಬಹುದು ಎಂದು  ಬೌದ್ಧ ಬಿಕ್ಕು ಡಾ.ಕಲ್ಯಾಣ ಸಿರಿ ಭಂತೇಜಿ ಕಿವಿಮಾತು ಹೇಳಿದರು.

2565ನೇ ಬುದ್ಧ ಪೂರ್ಣಿಮೆ ಅಂಗವಾಗಿ ಮೈಸೂರು ವಿಶ್ವವಿದ್ಯಾಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಆಯೋಜಿಸಿದ್ದ ‘ಪ್ರಸ್ತುತ ಸಮಾಜದ ಆರೋಗ್ಯಕ್ಕೆ ಬುದ್ಧ ಪ್ರಜ್ಞೆ’ವಿಶೇಷ ಆನ್‌ ಲೈನ್ ಉಪನ್ಯಾಸದಲ್ಲಿ  ಪಾಲ್ಗೊಂಡು ಮಾತನಾಡಿದ ಡಾ.ಕಲ್ಯಾಣ ಸಿರಿ ಭಂತೇಜಿ, ‘ಇಡೀ ಸಮಾಜವೇ ಅನಾರೋಗ್ಯದಿಂದ ಬಳಲುತ್ತಿದೆ.  ದೇಶದಲ್ಲಿ ಈ ಹಿಂದೆಯೂ ಕಾಲರಾ, ಪ್ಲೇಗ್, ಮಲೇರಿಯಾ, ಚಿಕೂನ್‌ ಗುನ್ಯಾ, ಎಚ್1 ಎನ್1ನಂತಹ ಸಾಂಕ್ರಾಮಿಕ ರೋಗಗಳು ಜನರನ್ನು ಮುಳುಗೇಳಿಸಿದೆ. ಈಗ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಇವುಗಳಿಗೆ ಬುದ್ಧ ಪ್ರಜ್ಞೆಯೇ ದಿವ್ಯ ಔಷಧ,’ ಎಂದು ತಿಳಿಸಿದರು.

ಕ್ರಿಘಿ.ಪೂ.6ನೇ ಶತಮಾನದಲ್ಲೂ ಇಂಥ ಉದಾಹರಣೆಗಳಿದ್ದು, ಬುದ್ಧ ಧಮ್ಮ ಪ್ರಜ್ಞೆಯಿಂದಾಗಿ ಜನರನ್ನು ಜಾಗೃತಗೊಳಿಸಿ ಮಾನಸಿಕವಾಗಿ ಸ್ವಸ್ಥರನ್ನಾಗಿ ಮಾಡಲಾಗಿದೆ, ದೇಶ ಕೊರೊನಾದಿಂದಷ್ಟೇ ಅಲ್ಲ, ಜಾತೀಯತೆ, ಅಸ್ಪೃಶ್ಯತೆ, ಮತೀಯತೆ, ಮತಾಂಧತೆ, ಶೋಷಣೆ ಹಾಗೂ ಅಸಮಾನತೆಯಿಂದಲೂ ಭಾದಿತವಾಗಿದೆ ಎಂದು ಡಾ.ಕಲ್ಯಾಣ ಸಿರಿ ಭಂತೇಜಿ ಅಭಿಪ್ರಾಯಪಟ್ಟರು.

ದಯೆ, ಕರುಣೆ, ವಿಶ್ವಾಸ, ಅನ್ಯೂನತೆ, ಸಂಸ್ಕೃತಿ, ಸಹಬಾಳ್ವೆ, ಸಹನೆ, ಪರೋಪಕಾರ, ಸಹಿಷ್ಣುತೆ ಜತೆಗೆ ಶ್ರೇಷ್ಠ ನೀತಿಗಳಾದ ಮೆತ್ತ , ಕರುಣಾ, ಮುದೀತ, ಉಪೇಕಾ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಮೃಗೀಯದಿಂದ ಮಾನವ ಸ್ವರೂಪಕ್ಕೆ ಬಂದರೆ ಅವುಗಳೇ ಸಂಕಷ್ಟ ಕಾಲದಿಂದ ಪಾರು ಮಾಡುತ್ತವೆ, ಸದೃಢ ಸಮಾಜವನ್ನೂ ನಿರ್ಮಾಣವಾಗುತ್ತವೆ ಎಂದು ಬುದ್ಧ ಹೇಳಿದ್ದಾರೆ. ಅದನ್ನು ಪಾಲಿಸಬೇಕಷ್ಟೇ ಎಂದು ಡಾ.ಕಲ್ಯಾಣ ಸಿರಿ ಭಂತೇಜಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ , ಕುಲಸಚಿವ ಪ್ರೊ.ಆರ್.ಶಿವಪ್ಪ, ಪ್ರೊ.ಜೆ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Key words: Buddha- principles -2565th Buddha Purnima-  Dr. Kalyan Siri Bhanteji-mysore university