ಸಹಜ ಯೋಗದಿಂದ ದೇಹ ಆತ್ಮಕ್ಕೆ ನೆಮ್ಮದಿ- ಶಾಸಕ ಜಿ.ಟಿ.ದೇವೇಗೌಡ.

ಮೈಸೂರು,ಜುಲೈ,11,2022(www.justkannada.in): ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಸನ್ಮಾರ್ಗದೆಡೆ ಹೋಗಲು ಸಹಜ ಯೋಗ ಧ್ಯಾನ ಸಹಕಾರಿಯಾಗಿದೆ. ಶಾಂತಿ, ನೆಮ್ಮದಿ ಶರೀರಕ್ಕೆ ಮಾತ್ರ ಇದ್ದರೆ ಸಾಲದು ಅದು ಆತ್ಮಕ್ಕೂ ಸಿಗಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಪ.ಪೂ.ಶ್ರೀ. ಮಾತಾಜಿ ನಿರ್ಮಲಾದೇವಿ ಅವರ 100ನೇ ಜನ್ಮದಿನ ಆಚರಣೆ ಅಂಗವಾಗಿ ಸಹಜ ಯೋಗ ಧ್ಯಾನದಿಂದ ಏರ್ಪಡಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಷ್ಟೋ ಬಾರಿ ಮನಸ್ಸು ಹೇಳಿದರೂ ದೇಹ ಕೇಳುವುದಿಲ್ಲ. ಒಂದೆರಡು ದಿನ ಯೋಗ ಮಾಡಿ ಬಿಟ್ಟವರ ಸಂಖ್ಯೆಯೇ ಹೆಚ್ಚು. ಆದರೆ, ಯೋಗದಿಂದ ನಮಗೆ ಹೊಸದೊಂದು ಚೈತನ್ಯ ಸಿಗುತ್ತದೆ. ಹೊಸ ಬದುಕಿಗೆ ಮುನ್ನಡಿ ಬರೆಯುತ್ತದೆ. ನೂರಾರು ಅನುಕೂಲ ಇರುವ ಯೋಗವನ್ನು ಒಂದೆರಡು ದಿನ ಮಾಡಿ ಬಿಡದೆ ಅದನ್ನು ಬದುಕಿನ ಪೂರ್ತಿ ಅಭ್ಯಾಸ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಎಲ್ಲರ ಮನಸ್ಸು ನಿರ್ಮಲವಾಗಿರಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಬೇರೆ ಬೇರೆ ಆಲೋಚನೆಗಳಿವೆ. ಕುಟುಂಬದಲ್ಲಿ ಇರುವ ಎಲ್ಲರ ಮನಸ್ಥಿತಿ ಒಂದೇ ರೀತಿ ಇರಲು ಸಾಧ್ಯವಿಲ್ಲ. ಮನಸ್ಸು ಚಂಚಲ. ಆದರೆ, ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಸನ್ಮಾರ್ಗದೆಡೆ ಹೋಗಲು ಸಹಜ ಯೋಗ ಧ್ಯಾನ ಸಹಕಾರಿಯಾಗಿದೆ. ಶಾಂತಿ, ನೆಮ್ಮದಿ ಶರೀರಕ್ಕೆ ಮಾತ್ರ ಇದ್ದರೆ ಸಾಲದು ಅದು ಆತ್ಮಕ್ಕೂ ಸಿಗಬೇಕು. ಪ್ರೀತಿ ಕೊಟ್ಟರೆ ಜಗತ್ತೇ ಶಾಂತಿಯಿಂದ ಇರುತ್ತದೆ. ಸದ್ಯ ನಾವೆಲ್ಲ ದಾರಿ ಗೊತ್ತಿಲ್ಲದೆ ಕತ್ತಲಿನಲ್ಲಿ ಇದ್ದೇವೆ. ಅಜ್ಞಾನ ನಮ್ಮನ್ನು ಆವರಿಸಿಕೊಂಡಿದೆ ಇದೀಗ ಬೆಳಕಿನೆಡೆಗೆ ಸಾಗಬೇಕಾದರೆ ಆತ್ಮದ ಸಾಕ್ಷಾತ್ಕಾರ ಆಗಬೇಕು ಎಂದರು.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಆತ್ಮದ ಅನುಭವ ಮತ್ತು ಆತ್ಮ ಸ್ವರೂಪವಾಗುವುದೇ ಸಹಜ ಯೋಗದ ಉದ್ದೇಶ. ಸಹಜ ಯೋಗದಿಂದ ಮನಸ್ಸು ಮತ್ತು ದೇಹ ದೃಢವಾಗುತ್ತದೆ. ನಮ್ಮಲ್ಲಿನ ಎಷ್ಟೋ ಆರೋಗ್ಯದ ಸಮಸ್ಯೆಗೆ ಸಹಜ ಯೋಗದಲ್ಲಿ ಪರಿಹಾರವಿದೆ. ಇದನ್ನು ಕಲಿಯಲು ವಯಸ್ಸಿನ ಅಂತರವಿಲ್ಲ. ಮಕ್ಕಳಿಂದ ಹಿಡಿದು ಎಲ್ಲರೂ ಸಹಜ ಯೋಗವನ್ನು ಕಲಿಯಬೇಕು. ಆ ಮೂಲಕ ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು ಎಂದರು.

ಸಹಜ ಯೋಗ ಧ್ಯಾನದ ಮೈಸೂರಿನ ಸಂಯೋಜನಾಧಿಕಾರಿ ವಿನುತಾ ಅವರು ಮಾತನಾಡಿದರು. ಸಹಜ ಯೋಗ ಧ್ಯಾನದ ಸದಸ್ಯರಾದ ಚಂದ್ರಶೇಖರ್ ಮಾತನಾಡಿದರು.  ಜಯದೇವ, ಮನೋಜ್ ಕುಮಾರ್ ಸೇರಿದಂತೆ ಇತರರು ಇದ್ದರು.

Key words: body – soul – Yoga-MLA -GT Deve Gowda-VC-Hemanth kumar