ಬಿಜೆಪಿ ಸೇರಿ ತಪ್ಪು ಮಾಡಿದೆ: ಮೈಸೂರಿನಲ್ಲಿ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ರಿಂದ ಪಶ್ಚಾತ್ತಾಪ ಸತ್ಯಾಗ್ರಹ.

ಮೈಸೂರು,ಏಪ್ರಿಲ್,3,2023(www.justkannada.in):  ಸಮ್ಮಿಶ್ರ ಸರ್ಕಾರ ಪತನ ಮತ್ತು ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಇದೀಗ ಬಿಜೆಪಿ ಸೇರಿ ತಪ್ಪುಮಾಡಿದೆ ಎಂದು ಪಶ್ಚಾತ್ತಾಪ ಸತ್ಯಾಗ್ರಹ ಮಾಡಿದರು.

2018 ಕಾಂಗ್ರೆಸ್, ಜೆಡಿಎಸ್ ಸರ್ಕಾರದ ಬೀಳಲು ಕಾರಣರಾದರಲ್ಲಿ ಹೆಚ್. ವಿಶ್ವನಾಥ್ ಒಬ್ಬರಾಗಿದ್ದರು. ಇದೀಗ ಬಿಜೆಪಿಯ ಪ್ರಸ್ತುತ ನಡೆಯನ್ನ ಕಂಡು ಹೆಚ್.ವಿಶ್ವನಾಥ್  ಅವರು ಮೈಸೂರಿನ ನ್ಯಾಯಾಲಯದ ಮುಂಭಾಗ ಇರುವ ಗಾಂಧಿ ಪ್ರತಿಮೆ ಬಳಿ ಪಶ್ಚಾತಾಪ ಸತ್ಯಾಗ್ರಹ ನಡೆಸಿ ಬಿಜೆಪಿ  ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಪಶ್ಚಾತಾಪದ ದಿನ ಎಂಬ ಹೆಸರಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ ಹೆಚ್.ವಿಶ್ವನಾಥ್ , ಬಿಜೆಪಿ ಸರ್ಕಾರ ಮಾಡುತ್ತಿರುವ ಬೆಲೆ ಏರಿಕೆ, ಅಲ್ಪಸಂಖ್ಯಾತರ ಮೀಸಲಾತಿ, ಹಾಗೂ ಭ್ರಷ್ಟಾಚಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಸತ್ಯಾಗ್ರಹದಲ್ಲಿ ಹೆಚ್.ವಿಶ್ವನಾಥ್ ಬೆಂಬಲಿಗರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಅವರು, 2018ರ ಸಮ್ಮಿಶ್ರ ಸರ್ಕಾರ ಪತನಕ್ಕೆ ನನ್ನ ಪರಿಶ್ರಮವು ಕೂಡ ಇತ್ತು. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಮಾಜದಲ್ಲಿ ಬದಲಾವಣೆ ಉಂಟಾಗುತ್ತದೆ ಎಂದು ನಂಬಿದ್ದೆ. ಆದರೆ ಬಿಜೆಪಿ ಸರ್ಕಾರ ಸಾಲು ಸಾಲು ಅನ್ಯಾಯಗಳನ್ನು ಸಾರ್ವಜನಿಕವಾಗಿ ಜನರಿಗೆ ಮಾಡುತ್ತಿರುವುದು ಬೇಸರದ ಸಂಗತಿ. ಈ ರೀತಿಯ ಭ್ರಷ್ಟ ಸರ್ಕಾರಕ್ಕೆ ನಾನು ಬೆಂಬಲ ನೀಡಿದೆ. ಈ ಸರ್ಕಾರದ ಸೃಷ್ಟಿಗೆ ನಾನು ಕಾರಣನಾದನಲ್ಲ ಎಂಬ ವಿಚಾರಕ್ಕೆ ಇಂದು ಪಶ್ಚಾತಾಪದ ದಿನ ಎಂದು ನ್ಯಾಯಾಲಯದ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡಿದ್ದೇನೆ ಎಂದರು.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮಾತಿಗೆ ಬೆಲೆಕೊಟ್ಜು ನಾನು ಜೆಡಿಎಸ್ ಸೇರ್ಪಡೆಯಾದೆ. ಜೆಡಿಎಸ್ ಶಾಸಕನಾಗಿದ್ದ ನನ್ನನ್ನು ಆ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ.ಜೆಡಿಎಸ್-ಕಾಂಗ್ರೆಸ್ಸಿನ ಮೈತ್ರಿಯಲ್ಲಿ ರಾಕ್ಷಸಿ ಸರ್ಕಾರ ನಡೆಯುತ್ತಿದೆ ಎಂದು ಮನವರಿಕೆಯಾಯಿತು. ಹೊಂದಾಣಿಕೆ ಇಲ್ಲದ ಮೈತ್ರಿ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ಖಾತ್ರಿಯಾದಾಗ ಮತ್ತೊಂದು ಹೆಜ್ಜೆಯನ್ನು ಅನಿವಾರ್ಯವಾಗಿ ಇಡಬೇಕಾಯಿತು. ನನಗೆ ಮಂತ್ರಿಗಿರಿ ಸಿಗದ ಕಾರಣದಿಂದ ನಾನು ಜೆಡಿಎಸ್ ತೊರೆಯಲಿಲ್ಲ. ಮಂತ್ರಿಗಿರಿಗೆ ನಾನೆಂದಿಗೂ ಆಸೆಪಟ್ಟವನಲ್ಲ.ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ಧುದರಿಂದ, ರಾಜ್ಯದಲ್ಲೂ ಅದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಒಳಿತಾಗಲಿದೆಯೆಂದು ಸಮಾನ ಮನಸ್ಕರೊಡನೆ ಸೇರಿ ಚರ್ಚಸಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಡಬಲ್ ಇಂಜಿನ್ ಸರ್ಕಾರದ ಚಿಂತನೆ ನಮ್ಮದಾಗಿತ್ತು. ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ಆಗುವ ಕನಸು ಕಂಡಿದ್ದೆ. ಆದರೆ ಅದೆಲ್ಲವೂ ನುಚ್ಚುನೂರಾದವು. ಇದೊಂದು ಐತಿಹಾಸಿಕ ಪರಮ ಭಷ್ಟ ಸರ್ಕಾರವೆಂಬ ಟೀಕೆಗೆ ಗುರಿಯಾಯಿತು. ಇದರಿಂದ ನನಗೆ ಪಶ್ಚಾತ್ತಾಪ ಕಾಡುತ್ತಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣನಾದ ನನಗೆ ಅತೀವವಾದ ನೋವಿದೆ, ಬೇಸರವಿದೆ‌. ಹೇ ವಿಶ್ವನಾಥ್, ನೀನೇಕೆ ಇಂತಹ ತಪ್ಪು ಮಾಡಿದೆ ಎಂದು ನನ್ನ ಅಂತರಾತ್ಮ ನನ್ನನ್ನು ತಿವಿಯುತ್ತಲೇ ಇದೆ. ಈ ಪಾಪಪ್ರಜ್ಞೆ ನನ್ನನ್ನು ಕೊನೆತನಕವೂ ಕಾಡುತ್ತಲೇ ಇರುತ್ತದೆ. ಹೀಗಾಗಿ ಈ ಪಾಪದ ಹೊರೆಯನ್ನು ಇಳಿಸಿಕೊಳ್ಳಲೇಬೇಕಾದ ಜರೂರತ್ತು ನನ್ನ ಮುಂದಿದೆ. ಇದೇ ಕಾರಣದಿಂದ ಇಂದು ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಪ್ರಾಯಶ್ಚಿತ್ತ ಸತ್ಯಾಗ್ರಹ ಮಾಡುತ್ತಿದ್ದೇನೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಾನು, ನನಗೆ ತಾಯಿಯಂತಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇನೆ.

ಕೆಲವರು ನನ್ನನ್ನು ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದೀರಿ ಎಂದು ಹೇಳುತ್ತಿದ್ಧಾರೆ. ನಾನು ಸಾಂಸ್ಕೃತಿಕ ಮತ್ತು ಸಾಹಿತ್ಯಕವಾದ ಕೋಟಾದ ಅಡಿಯಲ್ಲಿ ವಿಧಾನ ಪರಿಷತ್ ಸದಸ್ಯನಾಗಿದ್ದೇನೆಯೇ ಹೊರತು ಪಕ್ಷದ ಬಲದಿಂದಲ್ಲ ಎಂಬುದನ್ನು ನನ್ನನ್ನು ದೂರುವವರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ನಾನು ರಾಜ್ಯಪಾಲರಿಂದ ನಾಮಕರಣಗೊಂಡ ಸದಸ್ಯನಾದುದರಿಂದ ಸ್ವತಂತ್ರನಾಗಿದ್ದೇನೆ. ನಾನು ಯಾವುದೇ ಪಕ್ಷದ ಸಿದ್ಧಾಂತಕ್ಕೂ ಸೇರಿದವನಲ್ಲ. ನಾನೀಗ ಸಂಪೂರ್ಣ ಸ್ವತಂತ್ರ. ನಾನೀಗ ಸ್ವಚ್ಛಂದವಾಗಿ ಹಾರಾಡುವ ಅಪ್ಪಟ ಹಳ್ಳಿಹಕ್ಕಿ. ಹೀಗಾಗಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾನು, ನನಗೆ ತಾಯಿಯಂತಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇನೆ ಎಂದು ಹೆಚ್.ವಿಶ್ವನಾಥ್ ಹೇಳಿದರು.

ಮೀಸಲಾತಿಯನ್ನು ಇವರಷ್ಟು ಕುಲಗೆಡಿಸಿದಷ್ಟು ಬೇರೆ ಇನ್ಯಾರು ಕುಲಗೆಡಿಸಿಲ್ಲ.

ಚುನಾವಣೆ ಹೊಸ್ತಿಲಲ್ಲಿ ಮೀಸಲಾತಿ ಪರಿಷ್ಕರಣೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಎಚ್ ವಿಶ್ವನಾಥ್ , ಮೀಸಲಾತಿಯನ್ನು ಇವರಷ್ಟು ಕುಲಗೆಡಿಸಿದಷ್ಟು ಬೇರೆ ಇನ್ಯಾರು ಕುಲಗೆಡಿಸಿಲ್ಲ. ತಮಿಳುನಾಡು ಹೊರತುಪಡಿಸಿದರೇ ದೇಶದ ಬೇರಾವುದೇ ರಾಜ್ಯದಲ್ಲೂ ಮೀಸಲಾತಿ ಪ್ರಮಾಣ 50% ದಾಟಿಲ್ಲ. ರಾಜ್ಯದಲ್ಲೂ ಮೀಸಲಾತಿ ಪ್ರಮಾಣ 50% ಕ್ಕಿಂತ ಹೆಚ್ಚಾಗಿ ನೀಡಲು ಸಾಧ್ಯವಿಲ್ಲ. ಅದು ಗೊತ್ತಿದ್ಧರೂ ಸಹ  ಚುನಾವಣೆ ಗಮನದಲ್ಲಿಟ್ಟುಕೊಂಡು ಬೇಕಂತಲೇ ಮೀಸಲಾತಿ ಪರಿಷ್ಕರಣೆ ಮಾಡಲಾಗಿದೆ ಎಂದು ಕಿಡಿಕಾರಿದರು.

ಪಶ್ಚಾತ್ತಾಪ ಸತ್ಯಾಗ್ರಹಕ್ಕೆ ಹಾಲಿ ವಕ್ಫ್ ಬೋರ್ಡ್ ಛೇರ್ಮನ್ ಆಸಿಫ್  ಸೇಠ್  ಬೆಂಬಲ.

ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪಶ್ಚಾತ್ತಾಪ ಸತ್ಯಾಗ್ರಹದಲ್ಲಿ ಹಾಲಿ ವಕ್ಫ್ ಬೋರ್ಡ್ ಛೇರ್ಮನ್ ಆಸಿಫ್  ಸೇಠ್  ಪಾಲ್ಗೊಂಡು ಬೆಂಬಲ ಸೂಚಿಸಿದರು.

ಬಿಜೆಪಿ ಪಕ್ಷ ತೊರೆಯಲು ಮುಂದಾಗಿರುವ  ಆಸಿಫ್  ಸೇಠ್  ಮಾತನಾಡಿ, ಕಳೆದ ಇಪ್ಪತ್ತೈದು ವರ್ಷಗಳಿಂದ ಪಕ್ಷದಲ್ಲಿದ್ದು ಪಕ್ಷದ ಏಳಿಗೆಗೆ ಶ್ರಮಿಸಿದ್ದವು. ಇತ್ತೀಚಿನ ದಿನಗಳಲ್ಲಿ ನಮ್ಮ ಅಲ್ಪಸಂಖ್ಯಾತರನ್ನ ತುಳಿಯುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಹಲವಾರು ವರ್ಷಗಳಿಂದ ಇದ್ದ ಮೀಸಲಾತಿಯನ್ನ ಕಿತ್ತುಕೊಂಡು ಅಲ್ಪ ಸಂಖ್ಯಾತರಿಗೆ ದ್ರೋಹ ಬಗೆದಿದೆ. ಈಗಲೇ ಪಕ್ಷವನ್ನ ತೊರೆಯಲು ನಿರ್ಧರಿಸಿದ್ದೇನೆ. ಮುಂದಿನ ದಿನಗಳಲ್ಲಿ ವಿಶ್ವನಾಥ್ ಅವರ ಪರವಾಗಿ ನಿಲ್ಲುತ್ತೇನೆ. ಮುಂದೆ ಬರುವ ಚುನಾವಣೆಯಲ್ಲಿ ಬಿಜೆಪಿ ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.

Key words: BJP – wrong-MLC- H. Vishwanath – Mysore – repentant- satyagraha.