ಬಿಜೆಪಿ ಭ್ರಷ್ಟರ ಪಕ್ಷ: ಜೆಡಿಎಸ್ ಈಗ ಜಾತ್ಯಾತೀತ ಪಕ್ಷವಾಗಿ ಉಳಿದಿಲ್ಲ- ಸಿದ್ಧರಾಮಯ್ಯ ವಾಗ್ದಾಳಿ.

ಕಾರವಾರ,ಆಗಸ್ಟ್,2,2021(www.justkannada.in): ಬಿಜೆಪಿ ಭ್ರಷ್ಟರ ಪಕ್ಷ, ಅವರ ಸರ್ಕಾರ ಭ್ರಷ್ಟ ಸರ್ಕಾರ. ಯಡಿಯೂರಪ್ಪ ಭ್ರಷ್ಟರಲ್ಲದೆ ಹೋಗಿದ್ದರೆ ಮುಖ್ಯಮಂತ್ರಿ ಹುದ್ದೆಯಿಂದ ಏಕೆ ಕೆಳಗಿಳಿಸುತ್ತಿದ್ದರು? ವಯಸ್ಸಾಗಿದ್ದು ಒಂದೇ ಕಾರಣವಾಗಿದ್ದರೆ ಎಪ್ಪತ್ತೈದು ದಾಟಿ ಎರಡು ವರ್ಷ ಕಳೆದಿಲ್ಲವೆ? ಇಷ್ಟು ಕಾಲ ಏಕೆ ಸುಮ್ಮನಿದ್ದರು? ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಕಾರವಾರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಭಾರತೀಯ ಜನತಾ ಪಕ್ಷದವರು ತಾವು ಮಹಾನ್ ಸುಸಂಸ್ಕೃತರು ಎಂದು ಹೇಳಿಕೊಳ್ಳುತ್ತಾರೆ. ನಮ್ಮಂತ ಸಂಸ್ಕಾರ, ನಡತೆ ಯಾರಿಗೂ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ವಾಸ್ತವದಲ್ಲಿ ಇವರಷ್ಟು ಭಂಡರು ಯಾರೂ ಇಲ್ಲ ಎಂದು ಟೀಕಿಸಿದರು.

ಇದೇ ವೇಳೆ ಜೆಡಿಎಸ್ ವಿರುದ್ಧವೂ ಹರಿಹಾಯ್ದ ಸಿದ್ಧರಾಮಯ್ಯ, ಜೆಡಿಎಸ್ ಈಗ ಜಾತ್ಯಾತೀತ ಪಕ್ಷವಾಗಿ ಉಳಿದಿಲ್ಲ, ಜಾತ್ಯಾತೀತ ಸಿದ್ದಾಂತ ಬಿಟ್ಟು ತುಂಬಾ ಸಮಯವಾಗಿದೆ. ಹಿಂದೆ ನಾವಿದ್ದ ಕಾಲದಲ್ಲಿ ಇದ್ದ ಜೆಡಿಎಸ್ ಪಕ್ಷ ಈಗಿಲ್ಲ ಎಂದು ಲೇವಡಿ ಮಾಡಿದರು.

ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಠಿಕಾಣಿ ಹೂಡಿ, ಮಂತ್ರಿ ಪದವಿಗಾಗಿ ಲಾಬಿ ಮಾಡುತ್ತಿದ್ದಾರೆ. ಒಬ್ಬ ಶಾಸಕನು ತನ್ನ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡುತ್ತಿಲ್ಲ. ಇವರಿಗೆ ಜನರ ಜೀವಕ್ಕಿಂತ ಮಂತ್ರಿಯಾಗುವುದು ಮುಖ್ಯವಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಬಸವರಾಜ ಬೊಮ್ಮಾಯಿಯವರು ಈಗಷ್ಟೇ ಮುಖ್ಯಮಂತ್ರಿಗಳಾಗಿದ್ದಾರೆ. ಅವರ ಬಗ್ಗೆ ಟೀಕೆ ಮಾಡುವುದಿಲ್ಲ.‌ ಆದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಕೊಡಬೇಕು ಎಂದು ಒತ್ತಾಯಿಸುತ್ತೇನೆ. ಲಾಕ್ ಡೌನ್ ಹೇರುವಂತ ಪರಿಸ್ಥಿತಿ ನಿರ್ಮಾಣವಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಕಳೆದೆರಡು ದಿನಗಳಿಂದ ಸೋಂಕಿನ ಪ್ರಮಾಣ ಎರಡು ಸಾವಿರ ಸಮೀಪದಲ್ಲಿದೆ. ಇದು ಎರಡು ಸಾವಿರದ ಗಡಿ ದಾಟಿದರೆ ಮೂರನೆ ಅಲೆ ಶುರುವಾಗಿದೆ ಎಂದರ್ಥ ಎಂದರು.

Key words: BJP – party –corrupt-JDS – no – secular party-Former CM -Siddaramaiah