ಬಿಜೆಪಿಗೆ ಅಧಿಕಾರ ದಾಹ ಹೆಚ್ಚಾಗಿದೆ: ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲಕ್ಕೆ ಹೆಚ್.ಡಿ.ಕುಮಾರಸ್ವಾಮಿ ಕಿಡಿ.

ಬೆಂಗಳೂರು,ಜೂನ್,23,2022(www.justkannada.in):  ಬಿಜೆಪಿಗೆ ಅಧಿಕಾರ ದಾಹ ಹೆಚ್ಚಾಗಿದೆ. ಬೇರೆ ಪಕ್ಷ ಅಧಿಕಾರದಲ್ಲಿ ಇರುವುದನ್ನು ಬಿಜೆಪಿಗೆ ಸಹಿಸುವುದಕ್ಕೆ ಆಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಖಾರವಾಗಿ ಪ್ರತಿಕ್ರಿಯಿಸಿದರು.

ಬಿಜೆಪಿಯ ಅಧಿಕಾರ ದಾಹ ಎಷ್ಟು ಕೆಟ್ಟದಾಗಿದೆ ಎಂದರೆ, ಮುಂದಿನ ದಿನಗಳಲ್ಲಿ ಸ್ಪಷ್ಟ ಬಹುಮತ ಬಂದ ಸರಕಾರವೂ ಉಳಿಯುವುದು ಅನುಮಾನ. ಈ ಬಿಜೆಪಿ‌ ಪೂರ್ಣ ಬಹುಮತ ಪಡೆದ ಇತರೆ ಯಾವುದೇ ಪಕ್ಷದ ಸರಕಾರದ ಅವಧಿ ಮುಗಿಸುವುದಕ್ಕೂ ಬಿಡುವುದಿಲ್ಲ ಅನ್ನಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೇಲ್ನೋಟಕ್ಕೆ ಉದ್ದವ್ ಠಾಕ್ರೆ ಅವರು ಶಾಸಕರ ವಿಶ್ವಾಸ ಗಳಿಸಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಅದರ ಹಿಂದೆ ಇರುವುದು ಬಿಜೆಪಿಯೇ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಕರ್ನಾಟಕದಲ್ಲಿ ನನಗೂ‌ ಇದರ ಅನುಭವ ಆಗಿದೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೆಂದು ನನ್ನ ಮೇಲೂ ಆರೋಪ ಮಾಡಿದರು.ಶಾಸಕರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಸುಳ್ಳು ಪ್ರಚಾರ ಮಾಡಿದರು.ನಾನು ಕಾಂಗ್ರೆಸ್ ಶಾಸಕರ ಕ್ಷೇತ್ರದ ಅಭಿವೃದ್ದಿಗೆ 19 ಸಾವಿರ ಕೋಟಿ ಕೊಟ್ಟೆ. ಆ ಪಕ್ಷದ ಶಾಸಕಾಂಗ ಪಕ್ಷದ ನಾಯಕರಿಗೆ ಆ ಮಾಹಿತಿ ಇದ್ದ ಪಟ್ಟಿಯನ್ನೇ ನೀಡಿದ್ದೆ. ಆದರೂ ಶಾಸಕರನ್ನು ಆಪರೇಶನ್ ಕಮಲ ಮಾಡಿ ಸರಕಾರವನ್ನು ತೆಗೆದರು ಎಂದು ಹೆಚ್.ಡಿಕೆ ಬೇಸರ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಬಿಜೆಪಿ ನಡವಳಿಕೆ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ. ಈ ಅನಾಚಾರವನ್ನು ಬಿಜೆಪಿ ದೇಶವ್ಯಾಪಿ ವಿಸ್ತಾರ ಮಾಡುತ್ತಿದೆ. ಸಂವಿಧಾನ ರಕ್ಷಣೆ ಅನ್ನುವುದು ಇವತ್ತು ಉಳಿದಿಲ್ಲ. ಎಷ್ಟೇ ಒಳ್ಳೆಯ ಸರಕಾರ  ಮಾಡಿದರೂ ಬೆಲೆ ಇಲ್ಲದಂತೆ ಆಗಿದೆ ಎಂದು ಬಿಜೆಪಿ ವಿರುದ್ದ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಪಠ್ಯಪುಸ್ತಕ ಬಿಕ್ಕಟ್ಟಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ ಅವರು, ಪಠ್ಯಪುಸ್ತಕದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಒಂದು ಕಡೆ ಪಠ್ಯದ ವಿರುದ್ದ ಮಾತಾಡುತ್ತಿದೆ. ಈಗ ಬಿಜೆಪಿ ಸಚಿವರು ಸಿದ್ದರಾಮಯ್ಯ ಸರಕಾರ ಪಠ್ಯ ರಚನೆ ಮಾಡಿದ ವಿರುದ್ದ ಆಪಾದನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರ ತಪ್ಪು ಮಾಡಿದೆ ಎಂದು ಹೇಳುತ್ತಿದ್ದಾರೆ ಎಂದರು.

ಕುವೆಂಪು ಅವರಿಗೆ ಅಪಮಾನ ಮಾಡಿದ್ದಾರೆಂದು ಕುವೆಂಪು ವೇದಿಕೆ ಅವರು ಹೆಚ್.ಡಿ.ದೇವೇಗೌಡರಿಗೆ ಅಹ್ವಾನ ಕೊಟ್ಟಿದ್ದರು. ಹಾಗಾಗಿ, ದೇವೇಗೌಡರು ಹೋರಾಟಕ್ಕೆ ಹೋಗಿದ್ದರು. ಎರಡೂ ಸರಕಾರಗಳ ಅವಧಿಯಲ್ಲಿ ಪಠ್ಯಕ್ಕೆ ಏನೆಲ್ಲಾ ಅಪಚಾರ ಆಗಿದೆ ಎಂಬುದನ್ನು ನಾನು ಕೂಡ ಅಧ್ಯಯನ ಮಾಡುತ್ತಿದ್ದೇನೆ ಎಂದರು.

ಶಾಸಕರ ಉಚ್ಚಾಟನೆ ಕೋರ್ ಕಮಿಟಿ ನಿರ್ಧಾರ.

ಶಾಸಕರಾದ ಗುಬ್ಬಿ ಶ್ರೀನಿವಾಸ್ ಮತ್ತು ಕೆ.ಶ್ರೀನಿವಾಸಗೌಡ ಉಚ್ಚಾಟನೆ ಮಾಡಿರುವುದು ಕೋರ್ ಕಮಿಟಿ ನಿರ್ಧಾರ. ಪಕ್ಷದ ವಿರುದ್ದ ಅಡ್ಡ ಮತದಾನ ಮಾಡಿದ್ದಕ್ಕೆ ಉಚ್ಚಾಟನೆ ಮಾಡಲಾಗಿದೆ ಎಂದು  ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಈ ಸಂಬಂಧ ಕೋರ್ಟ್ ಗೆ ಹೋಗುವುದು ಅಥವಾ ವಿಧಾನಸಭೆ ಸ್ಪೀಕರ್ ಗೆ ದೂರು ನೀಡುವುದರಿಂದ ಏನು ಆಗದು. ಈಗ ಇರುವ ಪಕ್ಷಾಂತರ ನಿಷೇಧ ಕಾಯ್ದೆ ಯಶಸ್ವಿಯಾಗುವುದಿಲ್ಲ.  ಮೊದಲು ಈ ವ್ಯವಸ್ಥೆ ಬದಲಾವಣೆ ಆಗಬೇಕು. ನಮ್ಮ ಸರಕಾರ ಬಂದರೆ ಈ ಕಾನೂನುಗಳಿಗೆ ಬಲ ಕೊಡುವ ಕೆಲಸ ಮಾಡಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ನಗರ ಅಧ್ಯಕ್ಷ ಆರ್.ಪ್ರಕಾಶ್ ಮುಂತಾದವರು ಹಾಜರಿದ್ದರು.

Key words: BJP  -Operation kamala-Maharashtra-Former CM-HD Kumaraswamy