ಬಿಜೆಪಿಯವರಿಂದ ಸುಳ್ಳನ್ನ ಸತ್ಯ ಮಾಡುವ ಪ್ರಯತ್ನ: ಸಾಕ್ಷಿ ಆಧಾರವಿಲ್ಲದೆ ಆರೋಪ- ಸಚಿವ ಹೆಚ್.ಸಿ ಮಹದೇವಪ್ಪ ಕಿಡಿ.

ಬೆಂಗಳೂರು, ಆಗಸ್ಟ್.11,2023(www.justkannada.in): ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ಕಮಿಷನ್ ಆರೋಪ ಮಾಡಿದ ಬಿಜೆಪಿ ವಿರುದ್ಧ ಕಿಡಿಕಾರಿರುವ ಸಚಿವ ಹೆಚ್.ಸಿ ಮಹದೇವಪ್ಪ, ಬಿಜೆಪಿಯವರು ಸುಳ್ಳನ್ನು ಸತ್ಯ ಮಾಡುವ ಪ್ರಯತ್ನದಲ್ಲಿದ್ದಾರೆ. ಯಾವುದೇ ಸಾಕ್ಷಿ ಆಧಾರ ಇಲ್ಲದೇ ಇರುವ ಆರೋಪವನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇಂದು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ,  ನಾವು ಅಧಿಕಾರಕ್ಕೆ ಬಂದು ಕೇವಲ ಮೂರು ತಿಂಗಳು ಮಾತ್ರ ಆಗಿದೆ. ಹೀಗಾಗಿ ಜನರ ಮುಂದೆ ಹೇಳಿಕೊಳ್ಳಲು ಅವರಿಗೆ ಏನೂ ಇಲ್ಲ. ಇದರಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆದು ಅಪಪ್ರಚಾರ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ಅದು ಆಗಲ್ಲ. ಬಿಜೆಪಿಯವರು ಸೋಲಿನ ಹತಾಷೆಯಿಂದ ಹೀಗೆ ಮಾತಾಡುತ್ತಿದ್ದಾರೆ. ಇದ್ದಾಗ ಸರಿಯಾಗಿ ಅಧಿಕಾರ ಮಾಡಲಿಲ್ಲ. ಜನರು ಹಿಂದಿನ ನಮ್ಮ ಸಾಧನೆ ನೋಡಿ ಈಗ ನಮಗೆ ಅಧಿಕಾರ ಕೊಟ್ಟಿದ್ದಾರೆ ಎಂದು ನುಡಿದರು.

ಬಿಲ್ ಪಾವತಿಗೆ ಸರ್ಕಾರಕ್ಕೆ ಕೆಂಪಣ್ಣ ಡೆಡ್ ಲೈನ್ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ಡೆಡ್ ಲೈನ್ ಕೊಡಲು ಕೆಂಪಣ್ಣ ಸಂವಿಧಾನಿಕ ಹುದ್ದೆಯಲ್ಲಿ ಇಲ್ಲ. ಬಿಡುಗಡೆ ಮಾಡಿ ಎಂದು ಮನವಿ ಮಾಡಬಹುದು ಅಷ್ಟೆ. ಸಮಸ್ಯೆ ಆಗಿರಬಹುದು. ಆದರೆ, ಸರಿ ಆಗುತ್ತದೆ. ಅಜ್ಜಯ್ಯ ಮಠಕ್ಕೆ ಬರಲಿ ಅಂದರೆ ಅಲ್ಲಿಗೆ ಹೋದರೆ ಸತ್ಯ ಆಚೆಗೆ ಬರುತ್ತದೆಯಾ?. ಅದೆಲ್ಲ ಮೂಡ ನಂಬಿಕೆ ಅಷ್ಟೆ, ಸಂವಿಧಾನದ ಮೇಲೆ ನಂಬಿಕೆ ಇಡಬೇಕು ಎಂದರು.

Key words: BJP-  lie –Accusation- without –evidence- Minister- HC Mahadevappa