ಧರ್ಮದ ಒಳಗೆ ಜಾತಿ ಹುಡುಕಾಟದ ನಡೆ: ಪಂಗಡ ಆಧಾರಿತ ಸಮೀಕ್ಷೆಗೆ ನಡೆಸಿ-ಸರ್ಕಾರಕ್ಕೆ ಡಾ.ಅನಿಲ್ ಥಾಮಸ್ ಒತ್ತಾಯ

ಬೆಂಗಳೂರು,ಸೆಪ್ಟಂಬರ್,6,2025 (www.justkannada.in): ಕ್ರೈಸ್ತ ಧರ್ಮ ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಾಬಲ್ಯ ಹೊಂದಿರುತ್ತದೆ, ಈ ಧರ್ಮದಲ್ಲಿ ಯಾವುದೇ ಜಾತಿ ಇಲ್ಲ. ಆದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕ್ರೈಸ್ತ ಧರ್ಮದೊಳಗಿನ ಜಾತಿಗಳನ್ನು ಗುರುತಿಸುವ ನೆಪದಲ್ಲಿ ಇಡೀ ಸಮುದಾಯದೊಳಗೆ ಒಡಕು ಮೂಡಿಸಿ, ಭಿನ್ನಾಭಿಪ್ರಾಯ ಮೂಡಿಸುವ ಕೆಲಸಕ್ಕೆ ಕೈ ಹಾಕಿದೆ. ಪಂಗಡ ಆಧಾರಿತವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಅನಿಲ್ ಥಾಮಸ್ ಆಗ್ರಹಿಸಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಅನಿಲ್ ಥಾಮಸ್, ಸಾಮಾಜಿಕ ನ್ಯಾಯ ಎಂದು ಸದಾ ಬೊಬ್ಬಿರಿಯುವ, ಸಮಾಜವಾದಿ ಚಿಂತನೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಬ್ಬಂದಿತನ ಹಾಗೂ ಅವರೊಂದಿಗೆ ಸುಪ್ತವಾಗಿ ಅಂತರಂಗದಲ್ಲಿ ಬೆರೆತಿರುವ ಜಾತಿ ವ್ಯವಸ್ಥೆಗೆ ಇದೀಗ ಕ್ರೈಸ್ತ ಸಮುದಾಯ ನಲುಗಿದೆ. ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್, ಜಲಗಾರ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್, ರೆಡ್ಡಿ ಕ್ರಿಶ್ಚಿಯನ್, ತುಳು ಕ್ರಿಶ್ಚಿಯನ್ ಈ ತರಹದ 52 ಹೊಸ ಜಾತಿಗಳನ್ನು ಹುಟ್ಟುಹಾಕಿದ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. 2011ರ ಜನಗಣತಿಯಲ್ಲಿನ ಅಂಕಿಅಂಶಗಳ  ಪ್ರಕಾರ, ಆ ದಿನಮಾನದಲ್ಲಿ ಕ್ರೈಸ್ತ ಧರ್ಮಿಯರ ಜನಸಂಖ್ಯೆ 11.44 ಲಕ್ಷ ಇತ್ತು. ತದನಂತರ ಯಾವುದೇ ರೀತಿಯ ಸಮೀಕ್ಷೆ ನಡೆಯದೇ ಹೋದರೂ ಕೂಡ, ಸಮುದಾಯದ ಬೆಳವಣಿಗೆ ಸಹಜವಾಗಿಯೇ ಆಗಿದೆ. ಅಂದುಕೊಂಡಂತೆ ಸರಾಸರಿ ಶೇ.20ರಷ್ಟು ಏರಿಕೆ ಆಗಿದೆ ಎನಿಸಿದರೂ, ಅದಕ್ಕೆ ತಕ್ಕಂತೆ ಸಮುದಾಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಸರ್ಕಾರದ ಸವಲತ್ತು ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿದರು.

ಪಂಗಡ ಆಧಾರಿತ ಸಮೀಕ್ಷೆಗೆ ನಡೆಯಬೇಕು 

ಕ್ರೈಸ್ತ ಧರ್ಮದ ಮೇಲೆ ಕಾಂಗ್ರೆಸ್ ಸರ್ಕಾರ ಹೇರುತ್ತಿರುವ ಈ ಜಾತಿ ವ್ಯವಸ್ಥೆಯನ್ನು ಇಡೀ ಸಮುದಾಯ ಒಕ್ಕೊರಲಿನಿಂದ ತೀವ್ರವಾಗಿ ಖಂಡಿಸುತ್ತದೆ. ಮಾತ್ರವಲ್ಲ, ಪಂಗಡಗಳ ಆದಾರದ ಮೇಲೆ ಸಮೀಕ್ಷೆ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದಿದ್ದಾರೆ.

ಕ್ರೈಸ್ತ ಸಮುದಾಯದ ಬಗ್ಗೆ ಕುಲಶಾಸ್ತ್ರ ಅಧ್ಯಯನದ ಬಗ್ಗೆ ರಾಜ್ಯ ಸರ್ಕಾರ ಒಂದು ಉನ್ನತ ಸಮಿತಿ ರಚಿಸಿ ಕ್ರೈಸ್ತರ  ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವರದಿ ಸಿದ್ದಪಡಿಸಬೇಕು. ಈ ಹಿಂದೆ ಸಹಚಾರ್ ಸಮಿತಿ ಮುಸ್ಲಿಂ ಸಮುದಾಯದ ಕುಲಶಾಸ್ತ್ರ ಅಧ್ಯಯನ ನಡೆಸಿ ವರದಿ ನೀಡಿತ್ತು. ಆ ವರದಿಯಿಂದ ಮುಸ್ಲಿಂ ಸಮುದಾಯದ ಸ್ಥಿತಿಗತಿ ಸುಧಾರಿಸಲು ನೆರವಾಯಿತು ಎಂದರು.

ಕ್ರೈಸ್ತರು, ಜೈನರು, ಬೌದ್ಧರು, ಸಿಕ್ಕರು,  ಪಾರ್ಸಿಗಳನ್ನು ಪ್ರವರ್ಗ -2ಬಿ ಗೆ ಸೇರಿಸಿ

ಪ್ರಬಲ ಸಮುದಾಯಗಳಾದ ವೀರಶೈವ ಲಿಂಗಾಯತ, ಮರಾಠ, ಬಂಟ್ ಹಾಗೂ ಅಲ್ಪಸಂಖ್ಯಾತರಾದ ಜೈನರ ಜೊತೆ ಪ್ರವರ್ಗ -3ಬಿ ಯಲ್ಲಿ ಕ್ರೈಸ್ತರನ್ನು ಸೇರಿಸಿದ್ದರಿಂದ ಕ್ರೈಸ್ತ ಸಮುದಾಯಕ್ಕೆ ಘೋರ ಅನ್ಯಾಯವಾಗಿದೆ.  ಸರ್ಕಾರವು ಮುಸಲ್ಮಾನರು, ಕ್ರೈಸ್ತರು, ಜೈನರು, ಸಿಕ್ಕರು, ಬೌದ್ದರು ಹಾಗೂ ಪಾರ್ಸಿಗಳನ್ನು ನಮ್ಮ ದೇಶದ ಧಾರ್ಮಿಕ ಅಲ್ಪಸಂಖ್ಯಾತರನ್ನಾಗಿ ಗುರುತಿಸಿದೆ. ಮುಸಲ್ಮಾನರಿಗೆ ಮಾತ್ರ ಪ್ರವರ್ಗ 2ಬಿ ಅಡಿಯಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸಿದ್ದಾರೆ. ಪ್ರವರ್ಗ 2ಬಿ ಯಲ್ಲಿ ಕಲ್ಪಿಸಿರುವ ಶೇ.4 ಅನ್ನು ಶೇ.6ಕ್ಕೆ ಹೆಚ್ಚಿಸಿ ಇನ್ನುಳಿದ ಅಲ್ಪಸಂಖ್ಯಾತರಾದ ಕ್ರೈಸ್ತರು, ಜೈನರು, ಬೌದ್ಧರು, ಸಿಕ್ಕರು ಹಾಗೂ ಪಾರ್ಸಿಗಳನ್ನು ಪ್ರವರ್ಗ 2ಬಿ ಯಲ್ಲಿ ಸೇರಿಸಿ ಒಳಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಅಲ್ಪಸಂಖ್ಯಾತರಿಗೆ ನಿಗದಿಯಾಗಿರುವ ಅನುದಾನ ಹಾಗೂ ಸೌಲಭ್ಯಗಳ ಪ್ರಮಾಣದಲ್ಲಿ ಕ್ರೈಸ್ತರಿಗೆ ಅನ್ಯಾಯ:

ಈಗಾಗಲೇ ನಿಗದಿಯಾಗಿರುವ ಹಾಗೂ ಅಂಕಿ ಅಂಶಗಳ ಪ್ರಕಾರ ಅಲ್ಪಸಂಖ್ಯಾತರಿಗೆ ನಿಗದಿಯಾಗಿರುವ ಅನುದಾನ ಹಾಗೂ ಸೌಲಭ್ಯಗಳ ಪೈಕಿ ಶೇ.80ರಷ್ಟು ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದು, ಕೇವಲ ಶೇ.10 ಮಾತ್ರ ಕ್ರೈಸ್ತ ಸಮುದಾಯಕ್ಕೆ ಮೀಸಲಿಡಲಾಗಿದೆ. ಇನ್ನುಳಿದ ಶೇ.10 ಜೈನ, ಬೌದ್ದ, ಪಾರ್ಸಿ ಹಾಗೂ ಸಿಕ್ ಸಮುದಾಯದವರಿಗೆ ಮೀಸಲಿರಿಸಿದೆ. ಈ ತಾರತಮ್ಯ ನಿವಾರಣೆಗಾಗಿ ಮಿಕ್ಕುಳಿದ ಅಲ್ಪಸಂಖ್ಯಾತರ ಕುಲಶಾಸ್ತ್ರ ಅಧ್ಯಯನ ನಡೆಸಿ ಅದರ ವರದಿಯ ಆಧಾರದ ಪ್ರಕಾರ ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಸಾಮಾಜಿಕ ನ್ಯಾಯ ದೊರಕಿಸಬೇಕು. ಅಲ್ಪಸಂಖ್ಯಾತರಿಗೆ ಸಂಬಂಧಪಟ್ಟ ಕಚೇರಿಗಳಾದ ಅಲ್ಪಸಂಖ್ಯಾತರ ಆಯೋಗ ( KMC ), ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ (KMDC) ಯಲ್ಲಿ ಸರ್ಕಾರದ ನಾಮ ನಿರ್ದೇಶನಗಳು ತಿರುಗುವಿಕೆ ಆಧಾರದ ( ರೋಟೇಷನಲ್ ಬೇಸಿಸ್ ) ಮೇಲೆ ನಾಮ ನಿರ್ದೇಶನ ಮಾಡಬೇಕು. ಈ ಮೂಲಕ ಅಲ್ಪಸಂಖ್ಯಾತ ಸಮುದಾಯದ ಚೈತನ್ಯಕ್ಕೆ ನೆರವಾಗಬೇಕು. ಎಂದು ಡಾ.ಅನಿಲ್ ಥಾಮಸ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಶಾಂತಕುಮಾರ್ ಕೆನಡಿ, ಎಸ್.ಎನ್. ರಾಜು,  ಥಾಮಸ್ ಜಾನ್ , ಜೋಯಲ್ ಮೆಂಡೋನ್ಕ, ಜೆಸ್ಸಿಲ್ ಡಿಸೋಜಾ, ಸಿಲ್ವೇಸ್ಟರ್ ಜಯಚಂದ್ರನ್, ಆರೋಗ್ಯ ಶ್ಯಾಮ್. ಎಫ್ ಉಪಸ್ಥಿತರಿದ್ದರು.

Key words: BJP, Dr. Anil Thomas, government, caste-based, survey