ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಮಹಾದ್ರೋಹ: ಶ್ವೇತಪತ್ರ ಬಿಡುಗಡೆ ಮಾಡಿ ವಿವರ ಬಿಚ್ಚಿಟ್ಟ ಎಂ.ಲಕ್ಷ್ಮಣ್.

ಮೈಸೂರು,ಜನವರಿ,13,2024(www.justkannada.in): ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಮಹಾ ದ್ರೋಹವಾಗಿದೆ. 4.81 ಲಕ್ಷ್ಮ ಕೋಟಿ ತೆರಿಗೆಯನ್ನ ಕೇಂದ್ರ ಸರ್ಕಾರ ಸಂಗ್ರಹ ಮಾಡುತ್ತದೆ. ಆದರೆ ಅನುದಾನ ಸರಿಯಾಗಿ ನೀಡುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿರುವ ಅನ್ಯಾಯ ಕುರಿತು ಕಾಂಗ್ರೆಸ್ ಮುಖಂಡರು ಸುಮಾರು 7ಪುಟಗಳ ಶ್ವೇತ ಪತ್ರ ಬಿಡುಗಡೆ ಮಾಡಿದರು.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ವಿವಿಧ ಮೂಲಗಳಿಂದ  ಹರಿದು ಹೋಗುವ ಸಂಪನ್ಮೂಲಗಳ ವಿವರ ಮುಂದಿಟ್ಟ ಎಂ. ಲಕ್ಷ್ಮಣ್, ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಮಹಾ ದ್ರೋಹವಾಗಿದೆ. ಆದಾಯ ಮತ್ತು ಕಾರ್ಪೋರೇಟ್ ತೆರಿಗೆ 2.23 ಲಕ್ಷ ಕೋಟಿ. ಜಿಎಸ್ ಟಿ 1.40 ಲಕ್ಷ ಕೋಟಿ ರೂ.  ಪೆಟ್ರೋಲ್, ಡೀಸೆಲ್ ಇಂಧನದ ಮೇಲೆ ವಿಧಿಸುವ ಸೆಸ್ ಚಾರ್ಜುಗಳಿಂದ 26 ರಿಂದ 30 ಸಾವಿರ ಕೋಟಿ ಸಂಗ್ರಹವಾಗುತ್ತದೆ. ರಾಜ್ಯ ವಲಯದಿಂದ ಸಂಗ್ರಹವಾಗುವ ಕಸ್ಟಮ್ ತೆರಿಗೆಗಳಿಂದ 30 ಸಾವಿರ ಕೋಟಿ. ಜಿಎಸ್ ಟಿ ಪ್ರತಿ ತಿಂಗಳು 15 ಸಾವಿರ ಕೋಟಿ ಸಂಗ್ರಹವಾಗುತ್ತಿದೆ. ಹೆದ್ದಾರಿ ಟೋಲ್ ಗಳಿಂದ 3 ಸಾವಿರ ಕೋಟಿ ಸಂಗ್ರಹವಾಗುತ್ತದೆ. ಇವೆಲ್ಲವನ್ನೂ ಸೇರಿಸಿ ಒಟ್ಟು 4.81 ಲಕ್ಷ ಕೋಟಿ ತೆರಿಗೆಯನ್ನ ಕೇಂದ್ರ ಸರ್ಕಾರ ಸಂಗ್ರಹ ಮಾಡುತ್ತದೆ. ಮಹಾರಾಷ್ಟ್ರದ ಬಳಿಕ ಟ್ಯಾಕ್ಸ್ ಕಟ್ಟುವ ಎರಡನೇ ರಾಜ್ಯ ನಮ್ಮದು. ಅದರಲ್ಲಿ ನಮಗೆ ಶೇ. 42 ರಷ್ಟು  ವಾಪಸ್ ಕೊಡಬೇಕು. ಆದರೆ ಅವರು ಕೇವಲ 10% ನಷ್ಟನ್ನೂ ನಮಗೆ ಕೊಡುತ್ತಿಲ್ಲ. ಈ ಮೂಲಕ ನಮ್ಮ‌ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 10 ವರ್ಷಗಳಲ್ಲಿ10 ಲಕ್ಷ ಕೋಟಿ ಸಾಲ ಇತ್ತು. ಮೋದಿ ಪ್ರಧಾನಿಯಾದ ಬಳಿಕ 10 ವರ್ಷಗಳಲ್ಲಿ 123 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ದೇಶದ ಒಟ್ಟು ಸಾಲ 258 ಲಕ್ಷ ಕೋಟಿ ಒಟ್ಟು ಸಾಲ ಇದೆ. ದೇಶದ ಪ್ರತಿಯೊಬ್ಬ ಪ್ರಜೆ ಮೇಲೂ 4 ಲಕ್ಷ ಸಾಲ ಇದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಕಾರ್ಪೋರೇಟ್ ಕಂಪನಿಗಳ 20 ಲಕ್ಷ ಕೋಟಿ ಸಾಲ ಮನ್ನಾ ಆಗಿದೆ. ರೈತರ ಸಾಲ ಮಾತ್ರ ಮನ್ನಾ ಮಾತ್ರ ಮಾಡಿಲ್ಲ. ರಾಜ್ಯಕ್ಕೆ ಕೇಂದ್ರ ದೊಡ್ಡ ದ್ರೋಹ ಮಾಡಿದೆ. ಅದನ್ನು ನಮ್ಮ‌ ಬಿಜೆಪಿ ನಾಯಕರು ಎಂದೂ ಪ್ರಶ್ನೆ ಮಾಡಿಲ್ಲ ಎಂದು ಎಂ.ಲಕ್ಷ್ಮಣ್ ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಿ.ಜೆ ವಿಜಯಕುಮಾರ್, ನಗರ ಅಧ್ಯಕ್ಷ ಆರ್ ಮೂರ್ತಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಬರಪರಿಹಾರ ಬಿಡುಗಡೆ ಮಾಡದ ಆರೋಪ: ಬಿಜೆಪಿಗೆ ತಿರುಗೇಟು.

ಬರಪರಿಹಾರವನ್ನ ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಎಂ.ಲಕ್ಷ್ಮಣ್ , ನಮ್ಮ ಸರ್ಕಾರದ ವಿರುದ್ದ ಅನಾವಶ್ಯಕ ಅರೋಪ ಗಳನ್ನು ಮಾಡುತ್ತಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಾರೆ. ರಾಜ್ಯದಲ್ಲಿ ಬರದಿಂದ 35,000ಕೋಟಿ ನಷ್ಟ ಆಗಿದೆ  ಎಂದು ಕೇಂದ್ರ ಸಮಿತಿಯೇ ವರದಿ ಮಾಡಿದೆ,  ಕೇಂದ್ರದಿಂದ ಬಿಡಿಗಾಸು ಅನುದಾನ ಬಂದಿಲ್ಲ. ಬಿಜೆಪಿ ನಾಯಕರು ಈ ವಿಚಾರ  ಪ್ರಶ್ನೆ ಮಾಡೋದು ಬಿಟ್ಟು ಸರ್ಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ. ಇಡಿ ದೇಶದಲ್ಲೇ ಅಧಿಕಾರಕ್ಕೆ ಬಂದ 7  ತಿಂಗಳಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ  ಸರ್ಕಾರ ನಮ್ಮ ಕಾಂಗ್ರೆಸ್ ಸರ್ಕಾರ ಎಂದು ಎದೆಯುಬ್ಬಿಸಿ ಹೇಳುತ್ತೇವೆ. ಇದನ್ನು ಸಹಿಸದೆ ಅನಾವಶ್ಯಕ ಆರೋಪ ಮಾಡುತ್ತಿದ್ದಾರೆ ಎಂದು ಗುಡುಗಿದರು.

ಬಿಜೆಪಿ ಮತ್ತು ಜೆಡಿಎಸ್ ನವರು ಒಂದಂಕಿಯನ್ನು ದಾಟಲ್ಲ.

ಬಿಜೆಪಿ ನಾಯಕ ಯತ್ನಾಳ್ ಅವರೇ ತಮ್ಮ ಸರ್ಕಾರದ ವಿರುದ್ಧ 47 ಪುಟಗಳ ಕಂಪ್ಲೇಂಟ್ ಮಾಡಿದ್ದಾರೆ. ಇದರ ತನಿಖೆ ಕೈಗೊಂಡರೆ ಹಲವು ಮಂದಿ  ನಾಯಕರು ಜೈಲಿಗೆ ಹೋಗುತ್ತಾರೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನವರು ಒಂದಂಕಿಯನ್ನು ದಾಟಲ್ಲ. 28 ಕ್ಕೆ 28 ನ್ನೂ ಗೆಲ್ಲುತ್ತೇವೆ ಎಂದು ಕನಸು ಕಾಣುತ್ತಾ ಇದ್ದಾರೆ. 8 ಸೀಟು ಗೆಲ್ಲಲಿ ಸಾಕು. ನಾವು 20ಕ್ಕೂ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಎಂ.ಲಕ್ಷ್ಮಣ್ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಿ.ಜೆ ವಿಜಯಕುಮಾರ್, ನಗರ ಅಧ್ಯಕ್ಷ ಆರ್ ಮೂರ್ತಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

Key words: Big betrayal – center – state –taxation-kpcc- M. Laxman