ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆ ಯಶಸ್ವಿ: ಜನತೆಗೆ ಧನ್ಯವಾದ ತಿಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅಕ್ಟೋಬರ್ 23, 2022 (www.justkannada.in): ಭಾರತ ಐಕ್ಯತಾ ಯಾತ್ರೆ ಇಂದು ರಾಜ್ಯದಲ್ಲಿ ಯಶಸ್ವಿಯಾಗಿ ತನ್ನ ನಡಿಗೆ ಪೂರ್ಣಗೊಳಿಸಿರುವ ಕುರಿತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ  ನಾಡಿನ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

ಜಾತಿ, ಮತ, ಪಂಥ, ಪಕ್ಷಗಳ ಭೇದವನ್ನು ಮರೆತು ನಮ್ಮ ಜೊತೆ ಹೆಜ್ಜೆ ಹಾಕಿ ಭಾರತ ಐಕ್ಯತಾ ಯಾತ್ರೆಯನ್ನು ಯಶಸ್ಸಿಯನ್ನಾಗಿ ಮಾಡಿದ ಕರ್ನಾಟಕದ ಸಮಸ್ತ ಜನತೆಗೆ ತುಂಬು ಹೃದಯದ ಧನ್ಯವಾದಗಳು. ಪುಟ್ಟಬಾಲಕ-ಬಾಲಕಿಯರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ವೃದ್ಧರು, ಕಾರ್ಮಿಕರು, ರೈತರು, ಕುಶಲಕರ್ಮಿಗಳು, ಸೈನಿಕರು, ಸಾಹಿತಿಗಳು, ಚಿಂತಕರು, ಹೋರಾಟಗಾರರು ಭಾಗವಹಿಸಿ ಭಾರತ ಐಕ್ಯತಾ ಯಾತ್ರೆಯ ಸಂದೇಶವನ್ನು ಅರ್ಥಪೂರ್ಣವಾಗಿಸಿದರು ಎಂದು ಸ್ಮರಿಸಿದ್ದಾರೆ.

ಸಮಾಜವನ್ನು ಒಡೆಯುವ ಮೂಲಕವೇ ರಾಜಕೀಯ ಗೆಲುವನ್ನು ಪಡೆಯುತ್ತಾ ಬಂದ ಬಿಜೆಪಿಯ ವಿಚ್ಛಿದ್ರಕಾರಿ ಅಜೆಂಡಾಕ್ಕೆ ಪ್ರತಿಯಾಗಿ ಸಮಾಜವನ್ನು ಕೂಡಿ ಕಟ್ಟಬೇಕೆಂಬ ಸಂಕಲ್ಪದಿಂದ ಭಾರತ ಜೋಡೊ ಯಾತ್ರೆ ಕೈಗೊಡಿರುವ ರಾಹುಲ್ ಗಾಂಧಿಯವರಿಗೆ ಕರ್ನಾಟಕ ಆಭಾರಿಯಾಗಿದೆ.  ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಹೇಳುತ್ತಾ ಬಂದಂತೆ ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಆಗಿರದೆ ಸಮಸ್ತ ಜನತೆಯ ಕಾರ್ಯಕ್ರಮವನ್ನಾಗಿ ಮಾಡಿದ ಕರ್ನಾಟಕದ ಜನ ಭವಿಷ್ಯದಲ್ಲಿ ಭರವಸೆ ಹುಟ್ಟಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸುಳ್ಳು, ವ್ಯವಸ್ಥಿತವಾದ ಅಪಪ್ರಚಾರ, ನಿಂದನೆಗಳ ಮೂಲಕ ರಾಹುಲ್ ಗಾಂಧಿಯವರ ಚಾರಿತ್ರ್ಯಹನನ ಮಾಡುತ್ತಾ ಬಂದವರಿಗೆ ರಾಹುಲ್ ಗಾಂಧಿ ಎಂದರೆ ಯಾರು, ಏನು ಎನ್ನುವುದನ್ನು ಭಾರತ ಐಕ್ಯತಾ ಯಾತ್ರೆ ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದೆ.  ಸರ್ವಾಧಿಕಾರ, ದುರಾಡಳಿತ, ಕೋಮು ಧ್ರುವೀಕರಣದ ಅಜೆಂಡಾ ವಿರುದ್ದದ ಜನತೆಯ ಹೋರಾಟಕ್ಕೆ ಭಾರತ ಐಕ್ಯತಾ ಯಾತ್ರೆ ಸ್ಪೂರ್ತಿ ಕೊಟ್ಟಿದೆ. ನಮ್ಮ ಎಲ್ಲ ನಾಯಕರು ಮತ್ತು ಕಾರ್ಯಕರ್ತರಿಗೆ ಜನಮನವನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ನೆರವಾಗಿದೆ. ರಾಹುಲ್ ಗಾಂಧಿಯವರ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಕರ್ನಾಟಕದಿಂದ ನಿರ್ಗಮಿಸಿರಬಹುದು. ಆದರೆ ಯಾತ್ರೆ ಮೂಡಿಸಿದ ಜಾಗೃತಿ, ಹುಟ್ಟಿಸಿದ ಭರವಸೆ ಮತ್ತು ಸಾರಿದ ಐಕ್ಯತೆಯ ಸಂದೇಶದಿಂದ ಪ್ರೇರಣೆ ಪಡೆದ ಪ್ರಜಾಪ್ರಭುತ್ವದ ರಕ್ಷಣೆಯ ನಮ್ಮ  ಹೋರಾಟ ಮುಂದುವರಿಯಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.