ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಕೆ ಕೊರೊನಾ ಮಹಾಮಾರಿಗಿಂತಲೂ ಮಾರಕ: ತನ್ವೀರ್‌ ಸೇಠ್

ರಾಜ್ಯ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರ ಕೊರೊನಾ ಮಹಾಮಾರಿಗಿಂತಲೂ ಮಾರಕ. ಇಂತಹ ನಿರ್ಧಾರಗಳಿಂದ ಮಕ್ಕಳು ಶೈಕ್ಷಣಿಕವಾಗಿ ಕುಂಠಿತರಾಗುತ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಶಿಕ್ಷಣ ಸಚಿವ ಹಾಗೂ ಶಾಸಕ ತನ್ವೀರ್‌ ಸೇಠ್ ಹೇಳಿದ್ದಾರೆ.

ಚುನಾವಣೆ ವೇಳೆ ರಾಜಕಾರಣ ಮಾಡೋದು ಸರಿ. ಅಧಿಕಾರ ಬಂದ ಮೇಲೆ ಜಾತ್ಯಾತೀತವಾಗಿ ನಡೆದುಕೊಳ್ಳುಬೇಕು. ಶಿಕ್ಷಣ ಬಿಟ್ಟು ಸರ್ಕಾರ ಅನ್ಯ ವಿಚಾರಗಳ ಬಗ್ಗೆ ಗಮನಹರಿಸಬಾರದು. ಈಗಾಗಲೇ ಕೊರೊನಾದಿಂದ ಎರಡು ವರ್ಷ ಮಕ್ಕಳಿಗೆ ಶಿಕ್ಷಣ ಸಿಕ್ಕಿಲ್ಲ. ಶಾಲೆಯಲ್ಲಿ ಸಮಾನತೆ ಕಾಪಾಡಿಕೊಳ್ಳಬೇಕು ಎಂದಿದ್ದಾರೆ.

ನ್ಯಾಯಾಲಯದ ತೀರ್ಪು ಸಹ ಸ್ಪಷ್ಟವಾಗಿ ಇದನ್ನೇ ಹೇಳಿದೆ‌. ಇದೀಗ ಶಿಕ್ಷಣದಲ್ಲಿ ಧರ್ಮದ ವಿಚಾರ ಅಳವಡಿಸುವ ಮೂಲಕ ನಿಯಮ ಉಲ್ಲಂಘನೆ ಮಾಡ್ತಿದೆ. ಭಗವದ್ಗೀತೆ ಅಳವಡಿಸೋದ್ರಿಂದ ಏನಾಗುತ್ತೆ, ಏನಾಗಲ್ಲ ಅನ್ನೊದು ಪ್ರಶ್ನೆ ಅಲ್ಲ. ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಇದು ಬೇಡ ಎಂದು ತನ್ವೀರ್‌ ಸೇಠ್ ಹೇಳಿದ್ದಾರೆ.

ಕಾಶ್ಮೀರ್ ಫೈಲ್ ಕುರಿತು ಪ್ರತಿಕ್ರಿಯೆ
ಕಾಶ್ಮೀರ್ ಫೈಲ್ ಸಿನಿಮಾಗೆ ಪರ-ವಿರೋಧ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ನಾನು ಚಿಕ್ಕವಯಸ್ಸಿನಿಂದಲೂ ಸಿನಿಮಾ ನೋಡಿದವನಲ್ಲ. ಈಗಲೂ ಸಿನಿಮಾ ನೋಡೋದಿಲ್ಲ. ಇಂದು ಕಾಶ್ಮೀರ ಫೈಲ್ ಬಂದಿದೆ ನಾಳೆ ಗುಜರಾತ್ ಫೈಲ್ ಬರಲಿದೆ. ಮತ್ತೆ ಇನ್ನ್ಯಾವುದೋ ಫೈಲ್ ಅಂತ ಬರಲಿದೆಯೋ ಗೊತ್ತಿಲ್ಲ. ನಾನು ಸಿನಿಮಾ ಆಸಕ್ತನಲ್ಲ, ಹೀಗಾಗಿ ಕಾಶ್ಮೀರ ಫೈಲ್ ಸಿನಿಮಾ ನೋಡೋದಿಲ್ಲ. ಸಿನಿಮಾ ವಿಷಯವಾಗಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ತನ್ವಿರ್ ಸೇಠ್ ಹೇಳಿದ್ದಾರೆ.