ಖಾನಾಪೂರ ಸಮೀಪ ಭೀಕರ ಅಪಘಾತ ; 7 ಮಂದಿ ಕೃಷಿ ಕಾರ್ಮಿಕರು ಮೃತ.

 

ಬೆಳಗಾವಿ, ಫೆ. 08, 2020 : (www.justkannada.in news ) ಜಿಲ್ಲೆಯ ಖಾನಾಪೂರ ತಾಲೂಕಿನ ಬೋಗೂರ ಗ್ರಾಮದ ಸಮೀಪ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳುಜನ ಕೃಷಿ ಕಾರ್ಮಿಕರು ಸಾವಿಗೀಡಾಗಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಕಬ್ಬು ಕಟಾವಿಗಾಗಿ ಬೋಗೂರು ಗ್ರಾಮದ ಕೃಷಿ ಕಾರ್ಮಿಕರು ಟ್ರ್ಯಾಕ್ಟರ್ ನಲ್ಲಿ ಇಟಗಿ ಗ್ರಾಮದತ್ತ ತೆರಳುವಾಗ ಈ ಘಟನೆ ನಡೆದಿದೆ. ಮಾರ್ಗಮಧ್ಯದಲ್ಲಿ ತಟ್ಟಿ ಹಳ್ಳದ ಸೇತುವೆ ಬಳಿ ಚಾಲಕನ ಇಯಂತ್ರಣ ತಪ್ಪಿ ಟ್ರ್ಯಾಕ್ಟರ್ ಹಳ್ಳಕ್ಕೆ ಉರುಳಿತು. ಘಟನೆಯಲ್ಲಿ ಅಪಘಾತಕ್ಕೀಡಾದ ಟ್ರ್ಯಾಕ್ಟರ್ ಸುಮಾರು 50 ಅಡಿ ಎತ್ತರದಿಂದ ಕೆಳಗೆ ಉರುಳಿದ್ದು ಮೃತರ ಸಂಖ್ಯೆ ಹೆಚ್ಚಲು ಕಾರಣ.

ಅಪಘಾತದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯ ಅಸುನೀಗಿದ್ದಾರೆ. ಗಾಯಗೊಂಡವರಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸಮೀಪದ ಇಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಅಪಘಾತದಲ್ಲಿ ಮೃತರಾದವರು ಹಾಗೂ ಗಾಯಗೊಂಡವರು ಬೋಗೂರು ಗ್ರಾಮದವರಾಗಿದ್ದಾರೆ. ಟ್ರ್ಯಾಕ್ಟರ್‍ನಲ್ಲಿ ಸುಮಾರು 40 ಜನ ಕಾರ್ಮಿಕರಿದ್ದರು ಎನ್ನಲಾಗಿದೆ.

key words : belagavi-tractor-accident-7-workers-dead-police